Advertisement

3 ಜಿಲ್ಲೆಗಳ 97 ಕೆರೆಗಳಿಗೆ ವೃಷಭಾವತಿ ನೀರು

11:41 AM Jan 11, 2023 | Team Udayavani |

ಬೆಂಗಳೂರು: ವೃಷಭಾವತಿಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ 97 ಕೆರೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಲಾಗಿದೆ.

Advertisement

ಕೋರಮಂಗಲ-ಚಲ್ಲಘಟ್ಟ ಕಣಿವೆಯಲ್ಲಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾ ಪುರ ಜಿಲ್ಲೆಗಳ 126 ಕೆರೆಗಳನ್ನು ತುಂಬಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಇದೀಗ ವೃಷಭಾವತಿಯಲ್ಲಿ ಹರಿಯುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಲಾಗಿದೆ. ವೃಷಭಾವತಿ ಕಣಿವೆಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರನ್ನು ಬೆಂಗಳೂರು ಜಲಮಂಡಳಿ ನಾಯಂಡಹಳ್ಳಿ ಹಾಗೂ ಮೈಲಸಂದ್ರದಲ್ಲಿನ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಗಳಲ್ಲಿ ಶುದ್ಧೀಕರಿಸಿ ವಾಪಸ್‌ ವೃಷಭಾವತಿಗೆ ಬಿಡುತ್ತಿದೆ.

ಹೀಗೆ ಶುದ್ಧೀಕರಿಸಿದ ನೀರನ್ನು ಮರುಬಳಕೆ ಮಾಡಿಕೊಳ್ಳುವ ಉದ್ದೇಶದಿಂದಾಗಿ ಸಣ್ಣ ನೀರಾವರಿ ಇಲಾಖೆ, ವೃಷಭಾವತಿ ಏತ ನೀರಾವರಿ ಯೋಜನೆ ರೂಪಿಸಿದೆ. ಆ ಯೋಜನೆಯ ಮೊದಲ ಹಂತದಲ್ಲಿ 3 ಜಿಲ್ಲೆಗಳ 97 ಕೆರೆಗಳ ಭರ್ತಿಗೆ ಕ್ರಮ ಕೈಗೊಳ್ಳುತ್ತಿದೆ. 865 ಕೋಟಿ ರೂ. ವೆಚ್ಚ” ವೃಷಭಾವತಿ ಏತ ನೀರಾವರಿ ಯೋಜನೆಯನ್ನು 3 ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಅದರಲ್ಲಿ ಮೊದಲನೇ ಹಂತ ಅನುಷ್ಠಾನಕ್ಕೆ ಸಣ್ಣ ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ.

ಮೊದಲನೇ ಹಂತದ ಯೋಜನಾ ವೆಚ್ಚವನ್ನು 865 ಕೋಟಿ ರೂ. ನಿಗದಿ ಮಾಡಲಾಗಿದೆ. ಈ ಮೊತ್ತದಲ್ಲಿ ಯೋಜನೆಗೆ ಸಂಬಂಧಿಸಿದಂತೆ ನಾಲೆ ನಿರ್ಮಾಣಕ್ಕೆ, ಪೈಪ್‌ ಅಳವಡಿಕೆಗೆ ಅಗತ್ಯವಿರುವ ಭೂಸ್ವಾಧೀನ, ಪೈಪ್‌ ಮಾರ್ಗ ಹಾದುಹೋಗುವಲ್ಲಿನ ಕೃಷಿ ಭೂಮಿ ಇದ್ದರೆ ಬೆಳೆ ಹಾನಿ ಪರಿಹಾರ ನೀಡುವುದು, ಪೈಪ್‌ ಅಳವಡಿಕೆ ಸೇರಿ ಇನ್ನಿತರ ಕಾರ್ಯಗಳಿಗೆ ವ್ಯಯಿಸಲಾಗುತ್ತದೆ. ಯೋಜನೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಗುತ್ತಿಗೆದಾರರ ನೇಮಕದ ನಂತರದ 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುತ್ತದೆ. ಅಲ್ಲದೆ, ಕಾಮಗಾರಿ ಪೂರ್ಣಗೊಂಡ 5 ವರ್ಷಗಳವರೆಗೆ ನೀರು ಹರಿಸುವ ಕಾರ್ಯದ ಬಗ್ಗೆ ಗುತ್ತಿಗೆದಾರರು ಮೇಲ್ವಿಚಾರಣೆ ಮಾಡಬೇಕಿದೆ.

3 ಹಂತದಲ್ಲಿ ಕೆರೆಗಳ ಭರ್ತಿ: ಸದ್ಯ ಅನುಷ್ಠಾನ ಗೊಳಿಸುತ್ತಿರುವ ಯೋಜನೆ ಮೊದಲನೇ ಹಂತದ್ದಾ ಗಿದೆ. ಈ ಹಂತದಲ್ಲಿ 97 ಕೆರೆಗಳಿಗೆ ನೀರು ಹರಿಸ ಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೃಷ ಭಾವತಿ ಕಣಿವೆಯಲ್ಲಿನ ತ್ಯಾಜ್ಯ ನೀರು ಹರಿವು ಮತ್ತು ಶುದ್ಧೀಕರಣವನ್ನು ಗಮನಿಸಿ 2 ಮತ್ತು 3ನೇ ಹಂತದ ಯೋಜನೆಗಳನ್ನು ಹರಿಸಲು ಸಣ್ಣ ನೀರಾ ವರಿ ಇಲಾಖೆ ನಿರ್ಧರಿಸಿದೆ. ಸದ್ಯ ಜಲಮಂಡಳಿ ಯಲ್ಲಿನ ಎಸ್‌ಟಿಪಿಗಳಿಂದ ಲಭ್ಯವಿರುವ 243 ಎಂಎಲ್‌ಡಿ ನೀರನ್ನು ಕೆರೆಗಳಿಗೆ ಹರಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸದಾಗಿ ಎಸ್‌ಟಿಪಿಗಳ ನಿರ್ಮಾಣ ಸೇರಿ ಇನ್ನಿತರ ಕ್ರಮಗಳನ್ನು ಕೈಗೊಂಡು ಇನ್ನಷ್ಟು ಕೆರೆಗಳಿಗೆ ವೃಷಭಾವತಿ ನೀರು ಹರಿಯುವಂತೆ ಮಾಡಲಾಗುತ್ತದೆ.

Advertisement

3 ಕಡೆ ನೀರು ಶೇಖರಣೆ : ವೃಷಭಾವತಿಯಿಂದ ತರಲಾಗುವ ನೀರನ್ನು ಒಂದೆಡೆ ಶೇಖರಿಸಿ ನಂತರ ಕೆರೆಗಳಿಗೆ ಹರಿಸಲಾಗುತ್ತದೆ. ಅದರಂತೆ ಬೆಂಗಳೂರು ನಗರ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ನಾಯಂಡಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳಿಗಾಗಿ ನೆಲಮಂಗಲ ಸಮೀಪದ ವೀರಾಂಜನಿಪುರ ಹಾಗೂ ತುಮಕೂರು ಜಿಲ್ಲೆ ಕೆರೆಗಳಿಗಾಗಿ ತುಮಕೂರು ತಾಲೂಕಿನ ಹೊನ್ನುಡುಕೆಯಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತದೆ. ಅದರಿಂದ ನೀರನ್ನು ಪಂಪ್‌ ಮಾಡಲು ಪ್ರತ್ಯೇಕ ಪಂಪ್‌ಸೆಟ್‌ಗಳನ್ನು ಅಳವಡಿಸಲಾಗುತ್ತದೆ. ಅದರ ಪ್ರಕಾರ ನಾಯಂಡಹಳ್ಳಿ ಪಂಪ್‌ನಲ್ಲಿ ಪ್ರತಿದಿನ ಕಾರ್ಯನಿರ್ವಹಿಸುವ 4 ಪಂಪ್‌ಗಳು ಹಾಗೂ 2 ಹೆಚ್ಚುವರಿ ಪಂಪ್‌ಗ್ಳನ್ನು ಅಳವಡಿಸಲಾಗುತ್ತದೆ. ಅದೇ ರೀತಿ ವೀರಾಂಜನಿಪುರ ಮತ್ತು ಹೊನ್ನುಡುಕೆಯಲ್ಲಿ ತಲಾ 3 ಪಂಪ್‌ಗ್ಳನ್ನು ಅಳವಡಿಸಿ, ಅವುಗಳಿಂದ ನೀರನ್ನು ಕೆರೆಗಳಿಗೆ ಹರಿಸಲಾಗುತ್ತದೆ.

ವೃಷಭಾವತಿ ಕಣಿವೆಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರು ಶುದ್ಧೀಕರಿಸಿ ವಾಪಸ್‌ ವೃಷಭಾವತಿಗೆ ಬಿಡಲಾಗುತ್ತಿದೆ. ಹೀಗಾಗಿ ಶುದ್ಧೀಕರಿಸಿದ ನೀರನ್ನು ಮರುಬಳಕೆ ಮಾಡುವ ಸಲುವಾಗಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು 97 ಕೆರೆಗಳಿಗೆ ವೃಷಭಾವತಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿ.ಪಿ. ಸಂಜೀವ್‌ರಾಜು, ಸೂಪರಿಟೆಂಡೆಂಡ್‌ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ ಬೆಂಗಳೂರು ವೃತ್ತ

ಗಿರೀಶ್‌ ಗರಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next