ಕನ್ನಡದಲ್ಲಿ ಪರಿಸರ ಕಾಳಜಿ ಕುರಿತು ಈಗಾಗಲೇ ಅನೇಕ ಚಿತ್ರಗಳು ಬಂದಿವೆ. ಆ ಸಾಲಿಗೆ ಹೀಗೊಂದು “ವೃಕ್ಷಂ’ ಹೆಸರಿನ ಚಿತ್ರವೂ ಸೇರಿದೆ. ಕಳೆದ ಮಂಗಳವಾರ ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ “ವೃಕ್ಷಂ’ ಚಿತ್ರತಂಡವು ಒಂದು ಹಾಡನ್ನು ತೋರಿಸುವ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಈ ಅಪರೂಪದ ಕಾರ್ಯಕ್ರಮಕ್ಕೆ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ, ಸಾಲುಮರದ ತಿಮ್ಮಕ್ಕ ಇತರರು ಸಾಕ್ಷಿಯಾದರು.
ಚಿತ್ರದ ಹಾಡಿಗೆ ಚಾಲನೆ ನೀಡಿದ ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ, “ಈಗಂತೂ ಹೊಡಿ,ಬಡಿ, ಪ್ರೀತಿ, ಕುಣಿತ ಸೂತ್ರವಿರುವ ಚಿತ್ರಗಳೇ ಹೆಚ್ಚು. ಅವುಗಳ ನಡುವೆ ಪರಿಸರ ಕಾಳಜಿ ಇರುವಂತಹ ಸದಭಿರುಚಿಯ ಚಿತ್ರ ನಿರ್ಮಾಣ ಆಗಿರುವುದು ನಿಜಕ್ಕೂ ಖುಷಿಯ ವಿಷಯ. ಭೂಮಿ, ಗಿಡ, ಮರ ಇದನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಇಂತಹ ಚಿತ್ರದ ಮೂಲಕವಾದರೂ ಒಂದಷ್ಟು ಜಾಗೃತಿ ಮೂಡಲಿ’ ಎಂದರು ವೆಂಕಟೇಶಮೂರ್ತಿ.
“ನನಗೆ ಮಕ್ಕಳ ಭಾಗ್ಯ ಇಲ್ಲ ಎಂಬ ಚಿಂತೆಯೇ ಇಲ್ಲ. ಯಾಕೆಂದರೆ, ಮರಗಳೇ ನನ್ನ ಮಕ್ಕಳೆಂದುಕೊಂಡಿದ್ದೇನೆ. ಹುಲಿಕಲ್ಲುನಿಂದ ಕುದೂರುವರೆಗೆ ಸುಮಾರು ನಾಲ್ಕು ಕಿಲೋಮೀಟರ್ ಉದ್ದಕ್ಕೆ ಸಸಿಗಳನ್ನು ನೆಟ್ಟಿದ್ದು, ಇಂದು ಅವೆಲ್ಲವೂ ಮರಗಳಾಗಿವೆ. ಅವುಗಳನ್ನು ನೋಡುವುದೇ ನನಗೆ ಎಲ್ಲಿಲ್ಲದ ಸಂತಸ.
ಪ್ರತಿ ಮನೆಯಲ್ಲೂ ಪೋಷಕರು ತಮ್ಮ ಮಕ್ಕಳ ಮೂಲಕ ಸಸಿ ನೆಟ್ಟು, ಪರಿಸರದ ಜಾಗೃತಿ ಮೂಡಿಸಿ’ ಎಂದು ಹೇಳಿದ್ದು ಸಾಲುಮರದ ತಿಮ್ಮಕ್ಕ. ನಂತರ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಖೀಲ್ ಮಂಜು, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಕಲಾ ನಿರ್ದೇಶಕ ದಿನೇಶ್ ಮಂಗಳೂರು, ನಟಿ ನೀತು, ಎಂ.ನಾಗರಾಜ ಇತರರು ಸಿನಿಮಾ ಕುರಿತು ಮಾತನಾಡಿದರು.
ಆದಿತ್ಯ ಕುಣಿಗಲ್ ಕಥೆ, ಚಿತ್ರಕಥೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಸಂಕಲನಕ್ಕೂ ಕೈ ಹಾಕಿದ್ದಾರೆ. ಇದು ಮಕ್ಕಳಿಗಾಗಿ ಮಾಡಿದ ಚಿತ್ರ ಎಂಬುದು ನಿರ್ದೇಶಕರ ಮಾತು. ಮರಗಳಿಗೂ ಜೀವ ಇರುತ್ತೆ ಎಂದು ಅಜ್ಜಿಯಿಂದ ತಿಳಿದ ಮಕ್ಕಳು ಸಸಿ ನೆಟ್ಟು, ಮರಗಳ ರಕ್ಷಣೆಗೆ ಮುಂದಾಗುತ್ತಾರೆ. ಅವುಗಳನ್ನು ಕಡಿಯುವವರ ವಿರುದ್ಧ ಹೋರಾಟ ನಡೆಸಿ, ಹೇಗೆ ಅದಕ್ಕೆ ಕಡಿವಾಣ ಹಾಕುತ್ತಾರೆ ಎಂಬುದು ಚಿತ್ರದ ಸಾರಾಂಶವಂತೆ.
ಕೊಡಚಾದ್ರಿ, ಸಂತೆ ಕಟ್ಟಹಳ್ಳಿ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿರುವ ಚಿತ್ರದಲ್ಲಿ ತೇಜಸ್ವಿನಿ, ಅನಗ, ಅಮೋಘ, ವಸಂತ, ಕೃಷ್ಣಮೂರ್ತಿ ಮತ್ತು ವಾಣಿ ನಟಿಸಿದ್ದಾರೆ. ಎಂ.ಗಾಯಿತ್ರಿ ಆದಿತ್ಯ ನಿರ್ಮಾಣ ಮಾಡಿದ್ದಾರೆ. ಸಿದ್ಧಾರ್ಥ್ ಸಾಹಿತ್ಯ ಸಂಭಾಷಣೆ ಬರೆದಿದ್ದಾರೆ. ಸಮೀರ್ ಕುಲಕರ್ಣಿ ಸಂಗೀತವಿದೆ.