Advertisement

ಶ್ರೀರಾಮನ ವನವಾಸ ನೆನಪಿಸಿದ ವ್ರತ; ಗೋಣಿಚೀಲ ತೊಟ್ಟು 11 ದಿನ ಪಾದಯಾತ್ರೆ

06:09 PM Aug 04, 2021 | Team Udayavani |

ಆಳಂದ: ಭಾರತೀಯ ಸಂಸ್ಕೃತಿ, ಪರಂಪರೆ, ಪ್ರಾಚೀನ ಗತವೈಭವ ಸಾರುವ ರಾಮಾಯಣದ ಆದರ್ಶ ಪುರುಷ ಶ್ರೀರಾಮಚಂದ್ರ ಕೈಗೊಂಡಿದ್ದ 14 ವರ್ಷದ ವನವಾಸ ಸ್ಮರಣಾರ್ಥವಾಗಿ ನಿರಗುಡಿ ಗ್ರಾಮದ 14 ಮಂದಿ ಭಕ್ತಾದಿಗಳು ಸೇರಿ ಶ್ರೀರಾಮನ ದೇವಸ್ಥಾನಗಳಿಗೆ ತೆರಳಿ ವನವಾಸ ವ್ರತಾಚರಣೆ ಕೈಗೊಂಡರು.

Advertisement

ತಾಲೂಕಿನ ನಿರಗುಡಿ ಗ್ರಾಮದ ಹನುಮಾನ ದೇವಸ್ಥಾನ ಸಮಿತಿ ಮುಖಂಡರು ದೇಗುಲದ ಶಿಖರ, ಕಳಸಾಹರೋಹಣ ನೆರವೇರಿಸಿ ಬಳಿಕ ನಿರಗುಡಿಯ ಮಲ್ಲಯ್ನಾ ಮುತ್ಯಾ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸುಖ-ಶಾಂತಿ ನೆಲಸುವಂತಾಗಿಸಲು ಎಲ್ಲರೂ ಸೇರಿ 11 ಗ್ರಾಮಗಳಿಗೆ ಪಾದಯಾತ್ರೆ ಕೈಗೊಂಡು ವನವಾಸ ವ್ರತಾಚರಣೆ ಮಾಡಿದರು.

ವನವಾಸದ ವೇಳೆ ಅಂದು ಶ್ರೀರಾಮಚಂದ್ರ ತೊಟ್ಟಿದ್ದ ಗೋಣಿ ಚೀಲ ಹೊದ್ದುಕೊಂಡಿದ್ದನಂತೆ. ಅದೇ ರೀತಿ ಭಕ್ತಾದಿಗಳು ಗೋಣಿ ಚೀಲ ಹೊದ್ದು 11 ದಿನಗಳ ಕಾಲ ಮನೆ ತೊರೆದು ಪಾದಯಾತ್ರೆ ಮೂಲಕ ಬಸವ ಕಲ್ಯಾಣ ತಾಲೂಕಿನ ರಾಮತೀರ್ಥ ಗುಂಡ, ಚಿಂಚೋಳಿ ತಾಲೂಕಿನ ಸಿರಸಂಗಿ, ಉಜಳಂಬಿ, ಬಸವ ಕಲ್ಯಾಣದ ಜಳಕಾಪುರ, ಹಾರಕೂಡ, ಮುಡಬಿವಾಡಿ, ಕಲಬುರಗಿ ತಾಲೂಕಿನ ಕಮಲಾಪುರ, ರಟಗಲ್‌, ವಟವಟಿ, ಮಹಾಗಾಂವ್‌ ಕ್ರಾಸ್‌, ಬಬಲಾದ ಮಠ, ಆಳಂದ ತಾಲೂಕಿನ ಬಾಳಿ, ಕೊರಳ್ಳಿ ಡ್ಯಾಂನ್‌ ಮಲ್ಲಯ್ಯ ಮುತ್ತಾ ಆಶ್ರಮ, ಜಿಡಗಾ ಮಠ, ಖಾನಾಪುರದ ಚನ್ನವೀರ ಮಠಕ್ಕೆ ತೆರಳಿ ಕೊನೆಯದಾಗಿ ನಿರಗುಡಿ ಗ್ರಾಮಕ್ಕೆ ತಲುಪಿ ವ್ರತಾಚರಣೆ ಸಮಾರೋಪ ಕೈಗೊಂಡರು.

ವನವಾಸದಿಂದ ಮರಳಿ ಬಂದ ವ್ರತಾಧಾರಿಗಳಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಕ್ತರು ಡೊಳ್ಳು ಬಾರಿಸಿ, ಭಜನೆ ಮಾಡಿದರೆ, ಸುಮಂಗಲೆಯರು ಕುಂಭ, ಕಳಸ ಹೊತ್ತು ಮೆರವಣಿಗೆಗೆ ಮೆರಗು ನೀಡಿದರು. ನಂತರ ಹನುಮಾನ, ಶ್ರೀ ರಾಮ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮಳೆ, ಬೆಳೆ ಸರಿಯಾಗಿ ಆಗಲಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

ದಶರಥನ ಪತ್ನಿ ಕೈಕೇಯಿ ತನ್ನ ಮಗ ಭರತನಿಗೆ ರಾಜ್ಯಾಭಿಷೇಕ ಮಾಡಬೇಕು ಎನ್ನುವ ಉದ್ದೇಶದಿಂದ ಶ್ರೀ ರಾಮನಿಗೆ 14 ವರ್ಷ ಕಾಲ ವನವಾಸಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಶ್ರೀ ರಾಮಚಂದ್ರ, ಲಕ್ಷ್ಮಣ, ಸೀತೆ ವನವಾಸ ಮುಗಿಸಿ ಮತ್ತೆ ರಾಜ್ಯಾಭಿಷೇಕ ಸ್ವೀಕರಿಸಿದ ಐತಿಹ್ಯವನ್ನು ಮರುಕಳಿಸಿದ ಭಕ್ತಾದಿಗಳು 11 ದಿನಗಳ ಕಾಲ ಸಂಪೂರ್ಣ ಫಲಹಾರ ಮಾತ್ರ ಸೇವಿಸಿ ವ್ರತ ಆಚರಿಸಿದರು. ಪ್ರಮುಖರಾದ ಕಲ್ಯಾಣಿ ಬಿರಾದಾರ, ಸಿದ್ಧು ಯಬರಾಸೆ, ಶಂಕರ ನಾಗೂರೆ, ಪರಮೇಶ್ವರ ಮುರುಮೆ, ದಸ್ತಗೀರ ಬಾವಡೆ, ಮಹೇಶ ಸುತಾರ, ಕಲ್ಲಪ್ಪ ನಿಂಬಾಳ, ಚಂದ್ರಕಾಂತ ಅಣೂರೆ, ಹಸನ ಮುರುಮಕರ್‌, ಶಿವಲಿಂಗಪ್ಪ ಗಡಶೆಟ್ಟಿ, ಸೋಮಲಿಂಗ ಗಾಡೆಕರ್‌, ಪ್ರಭು ಕುರನೆ, ಕಮಲಾಬಾಯಿ ನಾಗೂರೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲೆಂದು ಹನುಮಾನ್‌ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಬಾಬುರಾವ್‌ ಬಿರಾದಾರ ನೇತೃತ್ವದಲ್ಲಿ ವನವಾಸ ವ್ರತಾಚರಣೆ ಕೈಗೊಳ್ಳುವಂತೆ ಶ್ರೀ ಮಲ್ಲಯ್ನಾ ಮುತ್ಯಾ ಸಲಹೆ ನೀಡಿದ್ದರ ಮೇರೆಗೆ ಭಕ್ತಾದಿಗಳು ವನವಾಸ ವ್ರತಾಚರಣೆ ಕೈಗೊಂಡಿದ್ದಾರೆ.
ಆನಂದ ಎಸ್‌. ದೇಶಮುಖ, ನಿರಗುಡಿ

Advertisement

Udayavani is now on Telegram. Click here to join our channel and stay updated with the latest news.

Next