Advertisement

25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1

01:14 PM Nov 01, 2024 | Team Udayavani |

1977ರಲ್ಲಿ ಉಡಾವಣೆಗೊಂಡಿದ್ದ ನಾಸಾದ ವೊಯೇಜರ್ 1 ಬಾಹ್ಯಾಕಾಶ ನೌಕೆ, ದಶಕಗಳ ಕಾಲ ಬಾಹ್ಯಾಕಾಶದಲ್ಲಿ ತನ್ನ ಪ್ರಯಾಣವನ್ನು ನಡೆಸುತ್ತಾ ಬಂದಿತ್ತು. ಆದರೆ, ಅಕ್ಟೋಬರ್ 16, 2024ರಂದು ನಡೆದ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ವೊಯೇಜರ್ 1 ಬಾಹ್ಯಾಕಾಶ ನೌಕೆ ಇದ್ದಕ್ಕಿದ್ದಂತೆ ತನ್ನ ಪ್ರಮುಖ ಎಕ್ಸ್ ಬ್ಯಾಂಡ್ ರೇಡಿಯೋ ಟ್ರಾನ್ಸ್‌ಮಿಟರ್ ಅನ್ನು ಸ್ಥಗಿತಗೊಳಿಸಿ, ಹೆಚ್ಚುವರಿಯಾದ ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರನ್ನು ಚಾಲ್ತಿಗೊಳಿಸಿತು. ಈ ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರನ್ನು 1981ರ ಬಳಿಕ ಇದೇ ಮೊದಲ ವೊಯೇಜರ್ 1 ಬಳಸಿದೆ.

Advertisement

ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಕಡಿಮೆ ಫ್ರೀಕ್ವೆನ್ಸಿಯಲ್ಲಿ (ಆವರ್ತನ) ಕಾರ್ಯಾಚರಿಸುವುದರಿಂದ, ಅದರ ಸಂಕೇತಗಳು ದುರ್ಬಲವಾಗಿರುತ್ತವೆ. ಇದರಿಂದಾಗಿ, ವೊಯೇಜರ್ 1 ಬಾಹ್ಯಾಕಾಶ ನೌಕೆಗೆ ಭೂಮಿಯೊಡನೆ ಸಂಪರ್ಕದಲ್ಲಿರುವುದು ಕಷ್ಟಕರವಾಗಿದೆ. ವೊಯೇಜರ್ 1 ಬಾಹ್ಯಾಕಾಶ ನೌಕೆ ಈಗ 25 ಬಿಲಿಯನ್ ಕಿಲೋಮೀಟರ್ ದೂರದಲ್ಲಿರುವುದರಿಂದ, ನಾಸಾದ ಡೀಪ್ ಸ್ಪೇಸ್ ನೆಟ್‌ವರ್ಕ್‌ಗೆ (ಡಿಎನ್ಎಸ್) ಅದರೊಡನೆ ಸಂಪರ್ಕವನ್ನು ಮರಳಿ ಸ್ಥಾಪಿಸುವುದು ದುಸ್ತರವಾಗಿದೆ.

ಅಂತರತಾರಾ ಬಾಹ್ಯಾಕಾಶ

ನಕ್ಷತ್ರಪುಂಜದ (ಗ್ಯಾಲಕ್ಸಿ) ನಕ್ಷತ್ರಗಳ ನಡುವೆ ಅಂತರತಾರಾ (ಇಂಟರ್‌ಸ್ಟೆಲ್ಲಾರ್) ಬಾಹ್ಯಾಕಾಶವಿದೆ. ಇದು ಬಹುತೇಕ ಖಾಲಿಯಾಗಿ ಕಂಡರೂ, ತೆಳ್ಳನೆಯ ಅನಿಲ, ಧೂಳು ಮತ್ತು ಕಾಸ್ಮಿಕ್ ಕಿರಣಗಳನ್ನು ಒಳಗೊಂಡಿದೆ. ಒಂದು ನಕ್ಷತ್ರದ ಪ್ರಭಾವ ಕೊನೆಗೊಳ್ಳುವ ಸ್ಥಳವಾದ ಹೀಲಿಯೋಪಾಸ್‌ನಲ್ಲಿ ಇದು ಆರಂಭವಾಗುತ್ತದೆ. ಸೂರ್ಯನ ಸೌರ ಮಾರುತ ಕೊನೆಯಾಗುವ ಸ್ಥಳವನ್ನು ಇದಕ್ಕೆ ಉದಾಹರಣೆಯಾಗಿ ಪರಿಗಣಿಸಬಹುದು. ಆಗಸ್ಟ್ 2012ರಲ್ಲಿ ಈ ಗಡಿಗನ್ನು ದಾಟಿದ ವೊಯೇಜರ್ 1, ಅಂತರತಾರಾ ಬಾಹ್ಯಾಕಾಶವನ್ನು ಪ್ರವೇಶಿಸಿದ ಮೊದಲ ಮಾನವ ನಿರ್ಮಿತ ಬಾಹ್ಯಾಕಾಶ ನೌಕೆ ಎನಿಸಿಕೊಂಡಿತು. ಸಾಕಷ್ಟು ಖಾಲಿಯಾಗಿದ್ದರೂ, ಈ ಅಂತರತಾರಾ ಬಾಹ್ಯಾಕಾಶ ನಮ್ಮ ವಿಶ್ವದ ಆಕಾರವನ್ನು ರೂಪಿಸಲು ಅವಶ್ಯಕವಾದ ವಸ್ತುಗಳನ್ನು ಒಳಗೊಂಡಿದೆ.

Advertisement

ವೊಯೇಜರ್ 1 ರಲ್ಲಿ ಎದುರಾದ ತಾಂತ್ರಿಕ ಸಮಸ್ಯೆ ಏನು?

ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ (ಜೆಪಿಎಲ್) ವೊಯೇಜರ್ 1ರ ಹೀಟರ್‌ಗಳನ್ನು ಚಾಲ್ತಿಗೊಳಿಸುವ ಸೂಚನೆ ನೀಡಿದಾಗ ಈ ತೊಂದರೆ ಕಾಣಿಸಿಕೊಂಡಿತು. ಬಾಹ್ಯಾಕಾಶ ನೌಕೆಯಲ್ಲಿ ಸಾಕಷ್ಟು ಶಕ್ತಿ ಇದ್ದಾಗಲೂ, ಈ ಆದೇಶ ಅದರ ದೋಷ ಸಂರಕ್ಷಣಾ ವ್ತವಸ್ಥೆಯನ್ನು ಚಾಲ್ತಿಗೊಳಿಸಿತು. ಇದರಿಂದಾಗಿ, ಬಾಹ್ಯಾಕಾಶ ನೌಕೆ ತನ್ನ ಇಂಧನ ರಕ್ಷಿಸುವ ಸಲುವಾಗಿ, ಎಕ್ಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಸೇರಿದಂತೆ ಅನವಶ್ಯಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಆ ಬಳಿಕ, ಬಾಹ್ಯಾಕಾಶ ನೌಕೆ ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರನ್ನು ಚಾಲನೆಗೊಳಿಸಿತು. ಈ ಹೆಚ್ಚುವರಿ ಬ್ಯಾಂಡ್ ಕಳೆದ ನಾಲ್ಕು ದಶಕಗಳಲ್ಲಿ ಬಳಕೆಯಾಗಿರಲಿಲ್ಲ.

8-12 ಗಿಗಾ ಹರ್ಟ್ಸ್ ಸಾಮರ್ಥ್ಯದ ಎಕ್ಸ್ ಬ್ಯಾಂಡ್ ಹೆಚ್ಚಿನ ಮಾಹಿತಿ ವಿನಿಮಯ ಸಾಮರ್ಥ್ಯ ಹೊಂದಿದ್ದು, ಆಳದ ಬಾಹ್ಯಾಕಾಶ ಯೋಜನೆಗಳಿಗೆ ಸೂಕ್ತವಾಗಿದೆ. ಇದಕ್ಕೆ ಹೋಲಿಸಿದರೆ, ಎಸ್ ಬ್ಯಾಂಡ್ ಕೇವಲ 2-4 ಗಿಗಾ ಹರ್ಟ್ಸ್ ಸಾಮರ್ಥ್ಯ ಹೊಂದಿದ್ದು, ಹೆಚ್ಚು ನಂಬಿಕಾರ್ಹ ಸಂಕೇತಗಳನ್ನು ಒದಗಿಸುತ್ತದೆ. ಆದರೆ ಅದು ಹೆಚ್ಚು ನಿಧಾನವಾಗಿಯೂ, ಕಡಿಮೆ ವ್ಯಾಪ್ತಿಯದಾಗಿರುತ್ತದೆ. ಇಷ್ಟೊಂದು ದೂರದಲ್ಲಿರುವ ಬಾಹ್ಯಾಕಾಶ ನೌಕೆಯೊಡನೆ ಸಂವಹ‌ನ ನಡೆಸುವುದು ಈಗಾಗಲೇ ಸವಾಲಾಗಿದ್ದಾಗ, ಎಕ್ಸ್ ಬ್ಯಾಂಡ್ ಸ್ಥಗಿತತೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು.

ಭೂಮಿಯೊಡನೆ ಸಂವಹನ ಮರು ಸ್ಥಾಪನೆ

ಜೆಪಿಎಲ್‌ನ ತಂಡಕ್ಕೆ ಅಕ್ಟೋಬರ್ 18ರಂದು ಡಿಎಸ್ಎನ್‌ನಲ್ಲಿ ವೊಯೇಜರ್ 1ರ ಸಂಕೇತಗಳು ಬಾರದಿದ್ದಾಗ ಸಮಸ್ಯೆ ಉಂಟಾಗಿರುವುದು ಅರಿವಿಗೆ ಬಂತು. ತಂಡದ ಇಂಜಿನಿಯರ್‌ಗಳಿಗೆ ಬಾಹ್ಯಾಕಾಶ ನೌಕೆ ದೋಷ ರಕ್ಷಣಾ ವ್ಯವಸ್ಥೆಯನ್ನು ಚಾಲ್ತಿಗೊಳಿಸಿರುವುದರಿಂದ ಸಂಕೇತಗಳ ರವಾನೆ ನಿಧಾನಗೊಂಡಿದ್ದು, ಅದು ಭೂಮಿಗೆ ತಲುಪುವುದು ತಡವಾಗುತ್ತಿದೆ ಎಂದು ತಿಳಿಯಿತು. ಸಾಕಷ್ಟು ಪ್ರಯತ್ನ ನಡೆಸಿದ ಬಳಿಕ, ತಂಡಕ್ಕೆ ಒಂದು ದಿನದ ನಂತರ ವೊಯೇಜರ್ 1 ನೌಕೆಯ ಎಸ್ ಬ್ಯಾಂಡ್ ಸಂಕೇತಗಳು ಲಭಿಸಿದವು. ಅವು ವೊಯೇಜರ್ 1 ನೌಕೆ ಸ್ಥಿರವಾಗಿದೆ ಎಂದು ಖಾತ್ರಿಪಡಿಸಿದವು. ಆದರೆ, ಸಂವಹನ ಸಮಸ್ಯೆಗಳು ಹಾಗೇ ಮುಂದುವರಿದು, ಅಕ್ಟೋಬರ್ 19ರಂದು ಎಕ್ಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಸಂಪೂರ್ಣವಾಗಿ ಸ್ಥಗಿತಗೊಂಡಿತು.

ತಂಡ ಬಳಿಕ ಬಹಳ ಕಡಿಮೆ ಸಾಮರ್ಥ್ಯ ಹೊಂದಿರುವ ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಅನ್ನು ನಿರಂತರವಾಗಿ ಬಳಸುವತ್ತ ಗಮನ ಹರಿಸಿತು. ಈ ಹಂತದಲ್ಲಿ ಇಂಜಿನಿಯರ್‌ಗಳು ಅತ್ಯಂತ ದುರ್ಬಲ ಸಂಕೇತವನ್ನು ಗ್ರಹಿಸಲು ಪ್ರಯತ್ನ ನಡೆಸುತ್ತಿದ್ದರಿಂದ, ಡಿಎನ್ಎಸ್ ಪಾತ್ರ ಇನ್ನಷ್ಟು ಪ್ರಮುಖವಾಗಿತ್ತು.

ಡೀಪ್ ಸ್ಪೇಸ್ ನೆಟ್‌ವರ್ಕ್ ಪಾತ್ರವೇನು?

ಜೆಪಿಎಲ್ ನಿರ್ವಹಿಸುವ ಡಿಎನ್ಎಸ್, ವೊಯೇಜರ್ 1ರಂತಹ ಆಳವಾದ ಬಾಹ್ಯಾಕಾಶ ಯೋಜನೆಗಳಲ್ಲಿ ಸಂವಹನಕ್ಕೆ ಅತ್ಯಂತ ಮುಖ್ಯವಾಗಿದೆ. ಇದು ಮೂರು ಪ್ರಮುಖ ಭೂ ಕೇಂದ್ರಗಳಿಂದ ಕಾರ್ಯ ನಿರ್ವಹಿಸುತ್ತದೆ. ಅವೆಂದರೆ:

* ಗೋಲ್ಡ್ ಸ್ಟೋನ್, ಕ್ಯಾಲಿಫೋರ್ನಿಯಾ, ಅಮೆರಿಕಾ.

* ಮ್ಯಾಡ್ರಿಡ್, ಸ್ಪೇನ್

* ಕ್ಯಾನ್‌ಬೆರಾ, ಆಸ್ಟ್ರೇಲಿಯಾ

ಈ ಜಾಗತಿಕ ವ್ಯವಸ್ಥೆ ಬಾಹ್ಯಾಕಾಶ ನೌಕೆಯೊಡನೆ ನಿರಂತರ ಸಂವಹನ ಏರ್ಪಡುವಂತೆ ಮಾಡಿ, ಅದು ಭೂಮಿಯ ಯಾವ ಭಾಗಕ್ಕೆ ಸನಿಹದಲ್ಲಿದೆಯೋ, ಆ ಕೇಂದ್ರಕ್ಕೆ ಸಂವಹನ ನಡೆಸುವಂತೆ ಮಾಡುತ್ತದೆ. ವೊಯೇಜರ್ 1 ಬಾಹ್ಯಾಕಾಶ ನೌಕೆ ಭೂಮಿಯಿಂದ 25 ಬಿಲಿಯನ್ ಕಿಲೋಮೀಟರ್ ದೂರದಲ್ಲಿದ್ದರೂ, ಅದರೊಡನೆ ಮರಳಿ ಸಂಪರ್ಕ ಸಾಧಿಸಲು ಯಶಸ್ವಿಯಾಗಿರುವುದು ಡಿಎನ್ಎಸ್ ಸಾಮರ್ಥ್ಯಕ್ಕೆ, ಬಾಹ್ಯಾಕಾಶ ಸಂವಹನದಲ್ಲಿ ಅದರ ಪಾತ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ದೋಷದ ಮೂಲ ಪತ್ತೆ

ಮೂಲ ಸಂವಹನ ಒಂದು ಬಾರಿ ಮರಳಿ ಸ್ಥಾಪನೆಗೊಂಡ ಬಳಿಕ, ಜೆಪಿಎಲ್ ತಂಡ ದೋಷ ರಕ್ಷಣಾ ವ್ಯವಸ್ಥೆ ಚಾಲನೆಗೊಳ್ಳಲು ಕಾರಣವೇನು ಎಂದು ಹುಡುಕಾಡಲು ಆರಂಭಿಸಿತು. ಅಕ್ಟೋಬರ್ 22ರಂದು, ಅವರು ಎಸ್ ಬ್ಯಾಂಡ್ ಟ್ರಾನ್ಸ್‌ಮಿಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುವಂತೆ ಆದೇಶ ನೀಡಿದರು. ಸಂಪೂರ್ಣ ಸಮಸ್ಯೆಯ ಮೌಲ್ಯಮಾಪನ ಇನ್ನೂ ನಡೆಯುತ್ತಿದ್ದು, ಸಂಪೂರ್ಣ ಸಮಸ್ಯೆ ಏನೆಂದು ಅರ್ಥ ಮಾಡಿಕೊಳ್ಳಲು ಕೆಲವು ದಿನಗಳು, ಅಥವಾ ವಾರಗಳೇ ಬೇಕಾಗಬಹುದು.

ವೊಯೇಜರ್ 1ರ ಪಯಣ ಮತ್ತು ಸಾಧನೆಗಳು

1977ರಲ್ಲಿ ಉಡಾವಣೆಗೊಂಡ ವೊಯೇಜರ್ 1, ಬಾಹ್ಯಾಕಾಶ ಅನ್ವೇಷಣೆಯಲ್ಲಿ ನಾಯಕನಾಗಿದೆ. ಆಗಸ್ಟ್ 2012ರಲ್ಲಿ ಅಂತರತಾರಾ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ವೊಯೇಜರ್ 1, ಈ ಸಾಧನೆ ಮಾಡಿದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ದ್ರವ ಹೈಡ್ರಾಜಿಲ್ ಅನ್ನು ಇಂಧನವಾಗಿ ಹೊಂದಿರುವ ವೊಯೇಜರ್ 1, ಸಣ್ಣ ಪ್ರಮಾಣದಲ್ಲಿ ಅನಿಲವನ್ನು ದಹಿಸಿ ತನ್ನ ಸ್ಥಾನವನ್ನು ಸರಿಪಡಿಸಿಕೊಳ್ಳುತ್ತದೆ. ಇದು ಭೂಮಿಯ ಚಲನೆಗೆ ಸರಿಯಾಗಿ ಹೊಂದಿಕೊಳ್ಳಲು ದಿನಕ್ಕೆ ಇಂತಹ 40 ಅನಿಲ ದಹನಗಳ ಅವಶ್ಯಕತೆಯಿದೆ. ಜೆಪಿಎಲ್‌ನಲ್ಲಿರುವ ತಂಡ ಈ ಕಾರ್ಯಾಚರಣೆಗಳನ್ನು ಜಾಗರೂಕವಾಗಿ ನಿರ್ವಹಿಸುತ್ತಾ, ಬಾಹ್ಯಾಕಾಶ ನೌಕೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಖಾತ್ರಿಪಡಿಸುತ್ತಾರೆ.

ವೊಯೇಜರ್ 1ರ ಭವಿಷ್ಯವೇನು?

ವೊಯೇಜರ್ 1 ಅಂತರತಾರಾ ಬಾಹ್ಯಾಕಾಶದಲ್ಲಿ ಇನ್ನಷ್ಟು ಒಳ ಪ್ರವೇಶಿಸಲಿದೆ. ಆದ್ದರಿಂದ, ನಾಸಾದ ಯೋಜನಾ ತಂಡ ಅದರೊಡನೆ ನಿರಂತರ ಸಂಪರ್ಕ ಹೊಂದಿ, ಸಾಧ್ಯವಾದಷ್ಟೂ ವೈಜ್ಞಾನಿಕ ಮಾಹಿತಿಗಳನ್ನು ಕಲೆಹಾಕುವ ಗುರಿ ಹೊಂದಿದೆ. ಇತ್ತೀಚಿನ ಟ್ರಾನ್ಸ್‌ಮಿಟರ್ ಸಮಸ್ಯೆ ಇಂತಹ ಸುದೀರ್ಘ ಬಾಹ್ಯಾಕಾಶ ಯೋಜನೆಗಳಲ್ಲಿ ಎದುರಾಗುವ ಸವಾಲುಗಳೇನು ಎಂಬುದನ್ನು ತೋರಿದೆ. ಆದರೂ, ನಾಸಾದ ಇಂಜಿನಿಯರ್‌ಗಳ ಸತತ ಪ್ರಯತ್ನದ ಪರಿಣಾಮವಾಗಿ, 1981ರ ಬಳಿಕ ಬಳಕೆಗೆ ಬರದ ಎಸ್ ಬ್ಯಾಂಡ್ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಈ ಸಾಧನೆ, ವೊಯೇಜರ್ 1 ತನ್ನ ಐತಿಹಾಸಿಕ ಯೋಜನೆಯನ್ನು ಮುಂದುವರಿಸುತ್ತಾ, ಜಗತ್ತಿನ ಕುರಿತು ಅಮೂಲ್ಯ ಮಾಹಿತಿಗಳನ್ನು ಇನ್ನಷ್ಟು ಒದಗಿಸಲಿದೆ ಎನ್ನುವುದನ್ನು ಖಾತ್ರಿಪಡಿಸಿದೆ.

ವೊಯೇಜರ್ 1ರ ಪಯಣ ಮಾನವರ ಕುತೂಹಲ ಮತ್ತು ದೃಢ ನಿಶ್ಚಯಗಳಿಗೆ ಸಾಕ್ಷಿಯಾಗಿದೆ. ಬಾಹ್ಯಾಕಾಶದಲ್ಲಿ ಬಹುತೇಕ 47 ವರ್ಷಗಳನ್ನು ಕಳೆದ ಬಳಿಕ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡರೂ, ವೊಯೇಜರ್ 1 ಬ್ರಹ್ಮಾಂಡದ ಕುರಿತ ನಮ್ಮ ಗ್ರಹಿಕೆಗಳನ್ನು ಇನ್ನಷ್ಟು ಶ್ರೀಮಂತವಾಗಿಸಲಿದೆ.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Advertisement

Udayavani is now on Telegram. Click here to join our channel and stay updated with the latest news.

Next