Advertisement

ಮತದಾನ: ಜಿಲ್ಲೆಗೆ ಪಿರಿಯಾಪಟ್ಟಣ ನಂ.1

02:21 PM May 14, 2018 | Team Udayavani |

ಮೈಸೂರು: ತೀವ್ರ ಕುತೂಹಲ ಮೂಡಿಸಿರುವ ವಿಧಾನಸಭಾ ಚುನಾವಣೆಯಲ್ಲಿ ನಗರ ಪ್ರದೇಶದ ಜನರು ಮತದಾರರು ತಮ್ಮ ಹಕ್ಕು ಚಲಾಯಿಸಲು ನಿರಾಸಕ್ತಿ ತೋರಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ನಗರದ ಮೂರು ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತದಾನ ನಡೆದಿದೆ.

Advertisement

ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಪುರುಷರು 12,51,642, ಮಹಿಳೆಯರು 12,41,576 ಹಾಗೂ ಇತರರು 189 ಮಂದಿ ಸೇರಿದಂತೆ ಒಟ್ಟು 24,93,407 ಮಂದಿ ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇವರಲ್ಲಿ 9,39,706 ಪುರುಷರು, 9,06,679 ಮಹಿಳೆಯರು ಹಾಗೂ 12 ಮಂದಿ ಇತರರು ಸೇರಿದಂತೆ ಒಟ್ಟು 18,46,397 ಮಂದಿ ಮತದಾನ ಮಾಡಿದ್ದಾರೆ.

ಒಟ್ಟಾರೆ ಜಿಲ್ಲಾದ್ಯಂತ ಶೇ.74.05 ಮತದಾನ ನಡೆದಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಪಿರಿಯಾಪಟ್ಟಣದಲ್ಲಿ ಶೇ.85.80 ಹೆಚ್ಚಿನ ಮತದಾನ ನಡೆದಿದೆ. ಇದರೊಂದಿಗೆ ಹೆಚ್ಚಿನ ಮತದಾನದ ತಾಲೂಕು ಎಂಬ ಹೆಗ್ಗಳಿಕೆ ಪಡೆದಿರುವುದು ಗಮನಾರ್ಹ ಸಂಗತಿ.

ನಗರ ಜನರ ನಿರಾಸಕ್ತಿ: ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಹೋಲಿಸಿದರೆ ನಗರ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಿಂದ ದೂರ ಸರಿದಿದ್ದಾರೆ. ಅದರಲ್ಲೂ ಅಕ್ಷರಸ್ಥರು, ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನಲಾಗುತ್ತಿದ್ದ ನಗರದ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಕಡಿಮೆ ಮತದಾನ ನಡೆದಿದೆ.

ಈ ಪೈಕಿ 2,47,082 ಮತದಾರರಿರುವ ಕೃಷ್ಣರಾಜ ಕ್ಷೇತ್ರದಲ್ಲಿ 1,45,196 ಮಂದಿ ಮಾತ್ರವೇ ಮತದಾನ ಮಾಡಿದ್ದು, ಶೇ.58.76 ಮತದಾನ ನಡೆದಿದೆ. ಇನ್ನು ಚಾಮರಾಜ ಕ್ಷೇತ್ರದ 2,35,647 ಮತದಾರರಲ್ಲಿ 1,39,455 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ ಶೇ.59.18 ಮತದಾನವಾಗಿದೆ. ಇನ್ನು ನಗರ ವ್ಯಾಪ್ತಿಗೊಳಪಡುವ ನರಸಿಂಹರಾಜ ಕ್ಷೇತ್ರದಲ್ಲೂ ಹೆಚ್ಚಿನ ಪ್ರಮಾಣದ ಮತದಾನ ನಡೆದಿಲ್ಲ.

Advertisement

ಕ್ಷೇತ್ರದ ಒಟ್ಟು 2,62,300 ಮತದಾರರಲ್ಲಿ 1,60,957 ಮಂದಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದ್ದು, ಪರಿಣಾಮ ಶೇ.61.36 ಮತಗಳು ಚಲಾವಣೆಗೊಂಡಿವೆ. ಈ ಮೂರು ಕ್ಷೇತ್ರಗಳ ಶೇಖವಾರು ಅಂಕಿಅಂಶಗಳ ಪ್ರಕಾರ ಪುರುಷ ಹಾಗೂ ಮಹಿಳಾ ಮತದಾರರು ಸಮಾನವಾಗಿ ಮತದಾನದಿಂದ ಹೊರಗುಳಿದಿರುವುದು ಕಂಡುಬರುತ್ತಿದೆ.

ಕ್ಷೇತ್ರವಾರು ವಿವರ: ಜಿಲ್ಲೆಯ ಹನ್ನೊಂದು ಕ್ಷೇತ್ರಗಳಲ್ಲಿ ಪಿರಿಯಾಪಟ್ಟಣದಲ್ಲಿ ಅತಿ ಹೆಚ್ಚು ಶೇ.85.80 ಮತದಾನವಾಗಿರುವುದು ಗಮನಾರ್ಹ. ಕೆ.ಆರ್‌.ನಗರ ಶೇ.84.79, ಹುಣಸೂರು ಕ್ಷೇತ್ರದಲ್ಲಿ ಶೇ.82.73, ಹೆಗ್ಗಡದೇವನಕೋಟೆ ಶೇ.79.11, ನಂಜನಗೂಡು ಶೇ.78.16, ಚಾಮುಂಡೇಶ್ವರಿ ಶೇ.76.05, ಕೃಷ್ಣರಾಜ ಶೇ.58.76, ಚಾಮರಾಜ ಶೇ.59.18, ನರಸಿಂಹರಾಜ ಶೇ.61.43, ವರುಣ ಕ್ಷೇತ್ರದಲ್ಲಿ ಶೇ.78.59, ತಿ.ನರಸೀಪುರ ಶೇ.78.08 ಮತದಾನ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next