ಮಹಾನಗರ: ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಬಂದರೂ ಮತಯಂತ್ರಗಳಿಗೆ ಇನ್ನೂ ಆರು ತಿಂಗಳು ಕಾಲ ಭದ್ರತೆ ಮುಂದುವರಿಯಲಿದೆ.
ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶವಿದೆ. ನ್ಯಾಯಾಲಯಕ್ಕೆ ಯಾರಾದರೂ ಆಕ್ಷೇಪಣೆ ಸಲ್ಲಿಸಿ, ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡರೆ ಆ ಕ್ಷಣದಿಂದ ಮತಯಂತ್ರಗಳನ್ನು ಜಿಲ್ಲಾಡಳಿತವು ಅತ್ಯಂತ ಭದ್ರತೆಯಿಂದ ನೋಡಿಕೊಳ್ಳಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೆ ಆ ಯಂತ್ರಗಳ ಮತಗಳನ್ನು ಅಳಿಸುವುದು ಅಥವಾ ಇತರ ಚುನಾವಣೆಗೆ ಬಳಸುವಂತಿಲ್ಲ. ಒಂದುವೇಳೆ ನ್ಯಾಯಾಲಯವು ಮರು ಎಣಿಕೆ ಮಾಡಲು ಸೂಚಿಸಿದರೆ ಅದಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಆ ಕಾರಣಕ್ಕಾಗಿ ಮತಯಂತ್ರಗಳನ್ನು ಆರು ತಿಂಗಳುಗಳ ಕಾಲ ಭದ್ರವಾಗಿ ನೋಡಿಕೊಳ್ಳಲಾಗುತ್ತದೆ.
ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ 448 ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಒಟ್ಟು 448 ಇವಿಎಂ ಮಿಷನ್ ಹಾಗೂ ಹೆಚ್ಚುವರಿಯಾಗಿ 150 ಇವಿಎಂ ಮಿಷನ್‌ಗಳನ್ನು ಬಳಸಲಾಗಿತ್ತು. ಮತ ಎಣಿಕೆ ಗುರುವಾರ ಮಧ್ಯಾಹ್ನ ವೇಳೆಗೆ ರೋಜಾರಿಯೋ ಶಾಲೆಯಲ್ಲಿ ಪೂರ್ಣ ಗೊಂಡಿತ್ತು. ಫಲಿತಾಂಶ ಘೋಷಣೆ ಯಾದ ಬಳಿಕ ಮತ ಯಂತ್ರಗಳನ್ನು ಪೊಲೀಸ್ ಭದ್ರತೆಯ ಮೂಲಕ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ (ಹಳೆಯ ಕಟ್ಟಡ) ಸ್ಟ್ರಾಂಗ್‌ರೂಂನಲ್ಲಿ ಇರಿಸಲಾಗಿದೆ.
ಮತಯಂತ್ರಗಳನ್ನು ಇರಿಸಲಾಗಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಟ್ರಾಂಗ್ ರೂಂ ವ್ಯಾಪ್ತಿಯಲ್ಲಿ ಮುಂದಿನ ದಿನದಲ್ಲಿ ಬಿಗಿಭದ್ರತೆ ಇರುತ್ತದೆ. ಕೊಠಡಿ ಸುತ್ತ ಸಿಸಿ ಕೆಮರಾ ಅಳವಡಿಸಲಾಗಿದೆ. ಪೊಲೀಸ್ ಭದ್ರತೆ ಇರಲಿದೆ. ಯಾವುದೇ ಕಾರಣಕ್ಕೂ ಸ್ಟ್ರಾಂಗ್ ರೂಂ ತೆರೆಯುವಂತಿಲ್ಲ. ಮತ ಎಣಿಕೆ ಆದ ಬಳಿಕ ನ್ಯಾಯಾಲಯದಲ್ಲಿ ಆಕ್ಷೇಪಣೆ ಇಲ್ಲದ ಮತಯಂತ್ರಗಳನ್ನು ಮತ್ತೂಂದು ಚುನಾವಣೆಗೆ ಬಳಸಲಾಗುತ್ತದೆ.
ಈ ಕ್ರಮಗಳು ಮುಗಿದ ಬಳಿಕ ಅಂದರೆ ಆರು ತಿಂಗಳುಗಳ ಬಳಿಕ ಚುನಾವಣ ಆಯೋಗದ ಸೂಚನೆಯಂತೆ ಆ ಮತಯಂತ್ರಗಳನ್ನು ಇತರ ಚುನಾವಣೆಗಳಿಗೆ ಬಳಸುವುದು ಅಥವಾ ಬೇರೆ ಭಾಗಗಳಿಗೆ ಕಳುಹಿಸುವುದು ನಿರ್ಧಾರವಾಗುತ್ತದೆ.
ಮತಯಂತ್ರಕ್ಕೆ ಭದ್ರತೆ
ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸುವ ಸಾಧ್ಯತೆ ಇರುವುದರಿಂದ ಮತಯಂತ್ರಗಳನ್ನು ಆರು ತಿಂಗಳು ಭದ್ರತೆಯಲ್ಲಿ ಇರಿಸಲಾಗುತ್ತದೆ. ಆ ಬಳಿಕ ಚುನಾವಣಾ ಆಯೋಗದ ಆದೇಶದಂತೆ ಕ್ರಮ ಜರಗಿಸಲಾಗುತ್ತದೆ.
- ಗಾಯತ್ರಿ ನಾಯಕ್, ವಿಶೇಷ ಚುನಾವಣಾಧಿಕಾರಿ