Advertisement

ರೇಡಿಯೋದಲ್ಲಿ  ಮಾರ್ದನಿಸಲಿದೆ ಮತದಾನ ಸಂದೇಶ

01:00 AM Mar 22, 2019 | Harsha Rao |

ಉಡುಪಿ: ರೇಡಿಯೋ ಈಗಲೂ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಕೇಳುಗರನ್ನು ಹೊಂದಿದೆ. ಮೊಬೈಲ್‌ ನೆಟ್‌ವರ್ಕ್‌ ಮತ್ತು ಕೇಬಲ್‌ ವಾಹಿನಿಗಳು ತಲುಪದ ಹಾಗೂ ರಸ್ತೆ ಸಂಪರ್ಕ ಇಲ್ಲದ ಕಾಡು-ಗುಡ್ಡಗಾಡು ಪ್ರದೇಶಗಳಲ್ಲಿ ಈಗಲೂ ರೇಡಿಯೋವೇ ಪ್ರಮುಖ ಸಂವಹನ ಸಾಧನ. ರೇಡಿಯೋ ಕೇಳುಗರಲ್ಲಿ ಮತದಾನ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಸ್ವೀಪ್‌ ಸಮಿತಿಯು ನಾಲ್ಕು ವಿನೂತನ ರೀತಿಯ ಜಿಂಗಲ್‌ಗ‌ಳನ್ನು ಸಿದ್ಧಪಡಿಸಿದೆ.
ಮೊದಲ ಜಿಂಗಲ್‌ ತುಳು ಭಾಷೆಯಲ್ಲಿರು ವಂಥದ್ದು, ಯುವ ಜನರನ್ನು ಮುಟ್ಟುವುದು ಇದರ ಉದ್ದೇಶ. ಚುನಾವಣೆಯ ದಿನ ರಜೆ ಇದ್ದು, ಅಂದು ಪ್ರವಾಸ ಹೋಗಬೇಡಿ, ಮತದಾನ ಮಾಡಿ ಎಂಬ ಮತದಾನ ಜಾಗೃತಿಯ ಸಂದೇಶ ನೀಡಲಾಗಿದೆ. 

Advertisement

ಎರಡನೇ ಜಿಂಗಲ್‌ನಲ್ಲಿ ಕುಂದಾಪ್ರ ಕನ್ನಡ ಬಳಕೆಯಾಗಿದೆ. ಯುವ ಮತದಾರರೊಬ್ಬರು ತಾನು ಪ್ರಥಮ ಬಾರಿ ಮತದಾನ ಮಾಡುವುದರ ಜತೆಗೆ ಮತ ಚಲಾಯಿಸಲು ಉತ್ಸುಕತೆ ತೋರದ ಕನಿಷ್ಠ ಇಬ್ಬರನ್ನಾದರೂ ಮತದಾನಕ್ಕೆ ಕರೆದೊಯ್ದು ಸಂದರ್ಭವನ್ನು ಸ್ಮರಣೀಯವನ್ನಾಗಿ ಮಾಡಿಕೊಳ್ಳುತ್ತೇನೆ ಎನ್ನುವ ಎಂಬ ಸಂದೇಶ ಇದೆ. 3ನೆಯದು ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಪ್ರತಿಯೊಬ್ಬರೂ ಮತದಾನ ಮಾಡಿ ಎಂಬ ಸಂದೇಶ ಹೊಂದಿರುವ ಜಿಂಗಲ್‌. ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನೀಡಿರುವ ಮತದಾನ ಕುರಿತ ಸಂದೇಶ 4ನೇ ಜಿಂಗಲ್‌ನಲ್ಲಿದೆ.

ಎಲ್ಲ ಜಿಂಗಲ್‌ಗ‌ಳಲ್ಲಿ ಎ. 18ರಂದು ಉಡುಪಿ, ಕುಂದಾಪುರ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತು ಎ. 23ರಂದು ಬೈಂದೂರು ಕ್ಷೇತ್ರದಲ್ಲಿ ನಡೆಯುವ ಮತದಾನದಲ್ಲಿ ತಪ್ಪದೆ ಭಾಗವಹಿಸಿ ಎಂಬ ಸಂದೇಶ ಇದೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ 2 ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಎಲ್ಲ ಮತದಾರನ್ನೂ ತಲುಪಲು ಸ್ವೀಪ್‌ ಸಮಿತಿ ತಯಾರಿ ನಡೆಸಿದೆ.

ಸಾಮಾಜಿಕ ಜಾಲ ತಾಣದಲ್ಲಿ ಈ ಜಿಂಗಲ್‌ಗ‌ಳು ಈಗಾಗಲೇ ಹರಿದಾಡುತ್ತಿದ್ದು, ಆಕಾಶವಾಣಿಯಲ್ಲಿ ಪ್ರತಿದಿನ ನಿಗದಿತ ಸಮಯದಲ್ಲಿ ಕೇಳುಗರನ್ನು ತಲುಪಲಿದೆ. 

ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಮತ್ತು ಜಿ.ಪಂ. ಸಿಇಒ ಸಿಂಧೂ ಬಿ. ರೂಪೇಶ್‌ ಅವರ ನಿರ್ದೇಶನದಂತೆ ಆಕಾಶವಾಣಿ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್‌, ಯೂ ಟ್ಯೂಬ್‌, ಫೇಸ್‌ ಬುಕ್‌, ಟ್ವಿಟರ್‌ಗಳಲ್ಲಿಯೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸುತ್ತಿರುವ ಜಿ.ಪಂ. ಸಹಾಯಕ ನಿರ್ದೇಶಕ ಜೇಮ್ಸ್‌ ಡಿಸಿಲ್ವಾ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next