ಹೊಸಪೇಟೆ: ಮತದಾನ ಮಾಡುವುದು ಸಂವಿಧಾನ ನೀಡಿದ ಹಕ್ಕು. ಅದನ್ನು ಚಲಾಯಿಸಬೇಕು ಮತ್ತು ಬೇರೆಯವರು
ಚಲಾಯಿಸಲು ಮನವಿ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಗಾರ್ಗಿ ಜೈನ್ ಕರೆ ನೀಡಿದರು. ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ವೃತ್ತದಲ್ಲಿ ವಿಕಾಸ ಯುವಕ ಮಂಡಳ ಶನಿವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿಗಾಗಿ “ಮತದಾನ ಸಂಕಲ್ಪ’ ಸಹಿ ಅಭಿಯಾನಕ್ಕೆ ‘ನಾನು ಮತ ಹಾಕುತೇನೆ ಮತ್ತು ಮತ ಹಾಕಲು ಮನವಿ ಮಾಡುತ್ತೇನೆ ಎಂದು ಬರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ಉತ್ತಮ ದೇಶ ನಿರ್ಮಾಣದಲ್ಲಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು. ಆ ಮೂಲಕ ದೇಶದ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು.
ಮಂಡಳದ ಅಧ್ಯಕ್ಷ ಗೋಸಲ ಬಸವರಾಜ್ ಮಾತನಾಡಿ, ಮತದಾನ ನಮ್ಮ ಹಕ್ಕು. ಅದನ್ನು ಚಲಾಯಿಸುವಂತೆ ಸರ್ಕಾರದ ಹೊರತಾಗಿ ಪ್ರತಿಯೊಬ್ಬರು ಮತದಾರರನ್ನು ಜಾಗೃತಿಗೊಳಿಸಬೇಕಾಗಿದೆ. ಮಂಡಳ ಈ ನಿಟ್ಟನಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದಂತೆ ಕಾರ್ಯಕ್ರಮ ರೂಪಿಸಿದ್ದೇವೆ. ಪ್ರತಿಯೊಬ್ಬರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಮಾಡುವುದು ನಮ್ಮ ಆಶಯವಾಗಿದೆ ಎಂದರು.
ತಹಶೀಲ್ದಾರ್ ಗಂಗಪ್ಪ , ಡಿವೈಎಸ್‌ಪಿ ರವಿಕುಮಾರ್, ಪೌರಾಯುಕ್ತ ರಮೇಶ್ ಹೊಸಪೇಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ .ಡಿ.ಜೋಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುಪ್ರಸಾದ್, ಮಾಜಿ ನಗರಸಭಾ ಸದಸ್ಯ ಪೂಜಾರಿ ದುರಗಪ್ಪ, ಮಂಡಳದ ಹಿರಿಯ ಸದಸ್ಯ ಗುರುರಾಜ್ ದೇಶಪಾಂಡೆ, ಕೆ.ಸಂಗ್ರಾಮ್, ಶ್ರೀನಿವಾಸ, ಬಂಡೆ ಸಂತೋಷಕುಮಾರ್ ಎಂ.ಡಿ. ನಾಗರಾಜ್, ಡಿ. ಪ್ರಶಾಂತ, ರಿಯಾಜ್, ಚಂದ್ರಶೇಖರ, ಪಿ.ಯಲ್ಲೇಶ್, ವೀರಭದ್ರ, ಬಿ.ಪ್ರಶಾಂತ, ಅನಂತ ಜೋಶಿ ಇದ್ದರು.
ಉತ್ಸಾಹ: ಅಂಬೇಡ್ಕರ್ ಜಯಂತಿಯಲ್ಲಿ ಮತದಾನದ ಬಗ್ಗೆ ಅರಿವು ಮುಡಿಸುವ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅನೇಕ ಹರ್ಷ ವ್ಯಕ್ತಪಡಿಸುತ್ತಾ ಸಂವಿಧಾನ ಶಿಲ್ಪಿಯ ಮುಂದೆ ಸಂಕಲ್ಪ ಮಾಡುವ ಮೂಲಕ ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗುವಂತೆ ಮಾಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಸರ್ಕಾರದ ಹೊರತಾಗಿ ಸಂಘಟನೆಗಳು ಸ್ಪಯಂ ಸ್ಫೂರ್ತಿಯಿಂದ ಇಂತಹ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ಸರ್ಕಾರದ ಆಶಯಗಳನ್ನು ಸಾರ್ಥಕಗೊಳಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.