Advertisement

ಸಾಮಾಜಿಕ ಜಾಲತಾಣದಲ್ಲಿ ಮತದಾನ ಬಹಿಷ್ಕಾರ ಆಂದೋಲನ

07:15 AM Mar 18, 2019 | |

ಚನ್ನರಾಯಪಟ್ಟಣ: ತಾಲೂಕಿನನುಗ್ಗೆಹಳ್ಳಿ,ಹಿರೀಸಾವೆ ದಂಡಿಗನಹಳ್ಳಿ ಹೋಬಳಿ ಹಲವು ಮಂದಿ ಯುವಕರು ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಸಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Advertisement

ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುವ ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿ ಕಾಚೇನಹಳ್ಳಿ ಏತನೀರಾವರಿ ರಾಜಕೀಯ ಮೇಲಾಟಕ್ಕೆ ಬಲಿಯಾಗಿದೆ. ಮೂರು ದಶಕದಿಂದ ಕಾಮಗಾರಿ ಮುಕ್ತಾಯವಾಗಿಲ್ಲ. ಆಲಗೊಂಡನಹಳ್ಳಿ ಹಾಗೂ ನಾರಾಯಣಪುರ ಏತನೀರಾವರಿ ಕಾಮಗಾರಿ ಮುಕ್ತಾಯವಾಗಿದ್ದರೂ ಕ್ಷೇತ್ರ ಶಾಸಕರು, ಸಂಸದರು ಉದ್ಘಾಟಿಸುವ ಗೋಜಿಗೆ ಹೋಗಿಲ್ಲವೆಂದು ಆಕ್ರೋಶ ವ್ಯಕ್ತವಾಗುತ್ತಿದೆ. 

ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನುಗ್ಗೇಹಳ್ಳಿ ಹಾಗೂ ಹಿರೀಸಾವೆಯಲ್ಲಿ ನೀರಿನ ಸಮಸ್ಯೆಯಿದ್ದರೂ ಎರಡೂ ಹೋಬಳಿಯ ಏತನೀರಾವರಿ ಕಾಮಗಾರಿ ದಶಕದಿಂದ ಆಮೆ ವೇಗದಲ್ಲಿ ನಡೆಯುತ್ತಿವೆ. 

ಏತ ನೀರಾವರಿ ವಿಳಂಬ: ಸುಮಾರು 57 ಕೋಟಿ ರೂ. ವೆಚ್ಚದಲ್ಲಿ ಜನಿವಾರ ಕೆರೆಯಿಂದ ಹಿರೀಸಾವೆ-ಜುಟ್ಟನಹಳ್ಳಿ ಭಾಗದ 26 ಕೆರೆಗಳಿಗೆ ನೀರು ತುಂಬಿಸುವ ಏತನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಗಿ ಮಂದಗತಿಯಲ್ಲಿ ಸಾಗುತ್ತಿದೆ. 

ಹಿರೀಸಾವೆ ಹೋಬಳಿ ದಿಡಗ ಹಾಗೂ ಕಬ್ಬಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿಯೂ ಏತನೀವಾರಿ ಯೋಜನೆ ಕಾಮಗಾರಿ ಕುಂಟಿತವಾಗಿರುವ ಬಗ್ಗೆ ಕರಪತ್ರಗಳು ಮಾಡಿ ಹಂಚಲಾಗಿರುವುದಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಕರಪತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತವಾಗುತ್ತಿದೆ. 

Advertisement

ಕಾಮಗಾಗಿ ನೆನಗುದಿಗೆ: ಬಾಗೂರು ಸಮೀಪದಲ್ಲಿ ಹರಿಯುತ್ತಿರುವ ಹೇಮಾವತಿ ನಾಲೆಯಿಂದ ನುಗ್ಗೇಹಳ್ಳಿ ಹೋಬಳಿ 11 ಕೆರೆಗೆ ಪೈಪ್‌ ಮೂಲಕ ನೀರು ತುಂಬಿಸಲು 17.67 ಕೋಟಿ ರೂ. ವೆಚ್ಚದಲ್ಲಿ ಏತನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಗಿ ದಶಕಗಳು ಕಳೆದಿದ್ದು ಕಾಮಗಾರಿ ನೆನಗುದಿಗೆ ಬಿದ್ದಿದೆ. ಅಂತರ್ಜಲ ಕುಸಿದಿದ್ದು ತೆಂಗಿನ ತೋಟಕ್ಕೆ ನೀರಿಲ್ಲದೆ ಮರಗಳ ಸುಳಿ ನಾಶವಾಗುತ್ತಿವೆ. 

ಫೇಸ್‌ ಬುಕ್‌ ಪೇಜ್‌: ನುಗ್ಗೆಹಳ್ಳಿ ಏತನೀರಾವರಿ ಹೋರಾಟ ಸಮಿತಿ ಎಂಬ ಫೇಸ್‌ ಬುಕ್‌ ಪೇಜ್‌ ತೆರೆದಿದ್ದು ನುಗ್ಗೆಹಳ್ಳಿ ಹೋಬಳಿ ಜನತೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಕೃಷಿ ಚಟುವಟಿಕೆ ಕುಂಠಿತವಾಗಲು ಕಾರಣವೇನು ಎನ್ನುವ ಸಮಗ್ರ ಮಾಹಿತಿ ಇದರಲ್ಲಿ ಹಾಕಲಾಗಿದೆ. ಈ ಬಾರಿ ಚುನಾವಣೆ ಬಹಿಷ್ಕರಿಸಿ ರಾಜಕಾರಣಿಗಳಿಗೆ ತಕ್ಕ ಉತ್ತರ ನೀಡಲು ಯುವ ಜನತೆ ಆಂದೋಲನ ಆರಂಭಿಸಿದ್ದಾರೆ.

ಹಿರೀಸಾವೆ-ಜುಟ್ಟನಹಳಿ ಏತನೀರಾವರಿ ಯೋಜನೆ ಕಾಮಗಾರಿ ಶೇ.80 ರಷ್ಟು ಮುಕ್ತಾಯವಾಗಿದೆ. ನುಗ್ಗೆಹಳ್ಳಿ ಏತನೀವಾರಿ ಯೋಜನೆ ಪೈಪ್‌ ಲೈನ್‌ ಅಳವಡಿಸಲು ಕೆಲ ರೈತರು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಕಾಮಗಾರಿ ಸ್ಥಗಿತವಾಗಿದೆ. ಚುನಾವಣೆ ಬಹಿಷ್ಕಾರ ಮಾಡುವುದರಿಂದ ಕಾಮಗಾರಿ ಚುರುಕಾಗುವುದಿಲ್ಲ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು. 
-ಎಂ.ಎ.ಗೋಪಾಲಸ್ವಾಮಿ, ನೀರಾವರಿ ಇಲಾಖೆ ಸಂಸದೀಯ ಕಾರ್ಯದರ್ಶಿ.

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next