Advertisement

ಮತದಾನ ಜಾಗೃತಿ ಗೀತೆ ಬಿಡುಗಡೆ

04:19 PM May 04, 2018 | |

ಧಾರವಾಡ: ಮತದಾನ ಜಾಗೃತಿಗಾಗಿ ಉತ್ತರ ಕರ್ನಾಟಕದ ಜನರನ್ನು ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯು ಸಂತತ ಟ್ರಸ್ಟ್‌ನ ಯುವಕರು ಹೊರ ತಂದಿರುವ ‘ಬಂದೇಬಿಡ್ತು ಇಲೆಕ್ಷನ್ನು ಮಾಡ್ರಿ ಒಳ್ಳೆ ಸೆಲೆಕ್ಷನ್ನು’ ಜಾಗೃತಿ ಗೀತೆಯ ಡಿವಿಡಿಯನ್ನು ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ, ಜಿಪಂ ಸಿಇಒ ಸ್ನೇಹಲ್‌ ಆರ್‌ ಲೋಕಾರ್ಪಣೆಗೊಳಿಸಿದರು.

Advertisement

ಈ ವೇಳೆ ಮಾತನಾಡಿದ ಜಿಪಂ ಸಿಇಒ ಸ್ನೇಹಲ್‌, ಸ್ಥಳೀಯ ಪ್ರತಿಭೆಗಳು ಉತ್ತರ ಕರ್ನಾಟಕದ ಅಸ್ಮಿತೆಯೊಂದಿಗೆ ಮನೋಜ್ಞವಾಗಿ ನಿರ್ಮಿಸಿರುವ 3.5 ನಿಮಿಷಗಳ ಜಾಗೃತಿ ಗೀತೆಯು ಲೋಕಾರ್ಪಣೆಯಾಗಿದೆ. ಎಲ್ಲ ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲದ ಮೂಲಕ ಜಿಲ್ಲೆಯ ಜನರನ್ನು ವಿಶೇಷವಾಗಿ ಯುವ ಜನರನ್ನು ಮತದಾನದತ್ತ ಸೆಳೆಯಲು ಈ ಗೀತೆ ಸಹಕಾರಿಯಾಗಲಿದೆ. ನಾಗರಾಜ ಪಾಟೀಲ, ಮಹಾನಂದ ದೇಸಾಯಿ ನೇತೃತ್ವದಲ್ಲಿ ಸಂತತ ಟ್ರಸ್ಟ್‌ನ ಯುವಕರ ಕಾರ್ಯ ಶ್ಲಾಘನೀಯವಾಗಿದೆ. ಸ್ವಯಂ ಪ್ರೇರಣೆಯಿಂದ ಅವರು ಈ ಸೃಜನಶೀಲ ಗೀತೆಯನ್ನು ಲಭ್ಯ ಸೀಮಿತ ಸಂಪನ್ಮೂಲಗಳಿಂದ ತಯಾರಿಸಿದ್ದಾರೆ ಎಂದರು.

ಮೇ 5ರಂದು ಧಾರವಾಡದ ರೋಟರಿ ಕ್ಲಬ್‌, ಎಸ್‌ಡಿಎಂ ಇಂಜಿನಿಯರಿಂಗ್‌ ಕಾಲೇಜ್‌, ಶ್ರೇಯಾ ನರ್ಸಿಂಗ್‌ ಕಾಲೇಜುಗಳ ಸಹಯೋಗದಲ್ಲಿ ವಾಕ್‌ಥಾನ್‌ ಹಾಗೂ ಸ್ಕೇಟಿಂಗ್‌ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9:30ಗಂಟೆಗೆ ಮಲ್ಲಿಕಾರ್ಜುನ ಮನಸೂರ ಕಲಾಭವನ ಆವರಣದಿಂದ ಜಾಥಾ ಹೊರಡಲಿದೆ ಎಂದರು.

ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿಯಾಗಿರುವ ಡಿಸಿಎಫ್‌ ಮಹೇಶಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದರು.ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಸಂತತ ಟ್ರಸ್ಟ್‌ನ ನಾಗರಾಜ ಪಾಟೀಲ, ಮಹಾನಂದಾ ಗೋಸಾವಿ, ಗೋಪಾಲ್‌ ಉಣಕಲ್‌, ನಯನ ಮೇಟಿ, ಸಮುದ್ರ ಪಟ್ಟಣಶೆಟ್ಟಿ, ವಿನೋದ ನಾಯಕ ಸೇರಿದಂತೆ ಜಾಗೃತಿ ಗೀತೆ ನಿರ್ಮಿಸಿದ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನ ಆಗಿರುವ ನಗರ ಪ್ರದೇಶಗಳ 21 ಕಡೆಗಳಲ್ಲಿ ಬೀದಿ ನಾಟಕ, ಡೊಳ್ಳು ಕುಣಿತ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಬಾರಿ ಮಹಿಳಾ ಮತದಾರರನ್ನು ಪ್ರೋತ್ಸಾಹಿಸಲು ಜಿಲ್ಲಾದ್ಯಂತ 15 ಗುಲಾಬಿ (ಸಖೀ) ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ಪೊಲೀಸರು ಸೇರಿದಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗಳನ್ನು ಮಹಿಳೆಯರನ್ನೇ ನೇಮಿಸಲಾಗುತ್ತದೆ.
.ಸ್ನೇಹಲ್‌ ರಾಯಮಾನೆ,
ಅಧ್ಯಕ್ಷೆ, ಜಿಲ್ಲಾ ಸ್ವೀಪ್‌ ಸಮಿತಿ, ಧಾರವಾಡ

Advertisement
Advertisement

Udayavani is now on Telegram. Click here to join our channel and stay updated with the latest news.

Next