Advertisement

Election: ಗಲಭೆ, ಚಕಮಕಿ ನಡುವೆ ಮತದಾನ- ಮಧ್ಯಪ್ರದೇಶದ ಅಲ್ಲಲ್ಲಿ ಘರ್ಷಣೆ

11:34 PM Nov 17, 2023 | Team Udayavani |

ರಾಯ್‌ಪುರ್‌/ಭೋಪಾಲ: ಪಂಚ ರಾಜ್ಯಗಳ ಪೈಕಿ ಅತೀದೊಡ್ಡ ರಾಜ್ಯ ಮಧ್ಯಪ್ರದೇಶದ 230 ಕ್ಷೇತ್ರಗಳಿಗೆ ಮತದಾನ ಶುಕ್ರವಾರ ಅಲ್ಲಲ್ಲಿ ಘರ್ಷ ಣೆ, ಮಾತಿನ ಚಕಮಕಿಗಳ ನಡುವೆ 6 ಗಂಟೆಗೆ ಮುಕ್ತಾಯವಾಗಿದೆ. ಅನಂತರವೂ ಸರತಿಯಲ್ಲಿ ಇದ್ದವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಶೇ.73.72 ಹಕ್ಕು ಚಲಾವಣೆಯಾಗಿದೆ.
ಒಂದೇ ಹಂತದಲ್ಲಿ ನಡೆದ ಮಧ್ಯಪ್ರದೇಶ ಮತದಾನದ ವೇಳೆ ಛತರ್‌ಪುರ್‌ ಜಿಲ್ಲೆಯ ರಾಜ್‌ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿಯ ನಿಕಟವರ್ತಿಯನ್ನು ಹತ್ಯೆ ಮಾಡಲಾಗಿದೆ. ಈ ಘಟನೆಗೆ ಬಿಜೆಪಿ ಕಾರಣ ಎಂದು ಕೆಲವು ಕಿಡಿಗೇಡಿಗಳು ವಾಹನಗಳನ್ನು ಬಡಿಗೆಗಳಿಂದ ಧ್ವಂಸಗೊಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಇಂದೋರ್‌ ಜಿಲ್ಲೆಯ ಮಾಹೋವ್‌ನಲ್ಲಿ 2 ಗುಂಪುಗಳ ನಡುವೆ ಘರ್ಷಣೆ ನಡೆದು ಐವರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸ್ಪರ್ಧಿಸುತ್ತಿರುವ ದಿಮಾನಿ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದು ಇಬ್ಬರಿಗೆ ಗಾಯಗಳಾಗಿವೆ.

ಗುಂಡು ಹಾರಾಟ: ಮೆಘಾಂವ್‌ ಕ್ಷೇತ್ರದಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರಿಂದ ಬಿಜೆಪಿ, ಆಪ್‌ನ ಬೆಂಬಲಿಗರಿಗೆ ಗಾಯಗಳಾಗಿವೆ. ಜಬುವಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗುರಿಯಾಗಿ ಇರಿಸಿಕೊಂಡು ಕಲ್ಲು ಎಸೆದಿದ್ದರಿಂದ ಅವರ ಭದ್ರತಾ ಸಿಬಂದಿಗೆ ಗಾಯಗಳಾಗಿವೆ.

ಬಹಿಷ್ಕಾರ: ಮಾಜಿ ಸಿಎಂ ಕಮಲ್‌ನಾಥ್‌ ಅವರ ಛಿಂದ್ವಾಡಾ ವಿಧಾನಸಭಾ ಕ್ಷೇತ್ರದ ಶಾಪುರ್‌ ಗ್ರಾಮದ ಸ್ಥಳೀಯರು ಮತದಾನದಿಂದ ದೂರ ಉಳಿದಿದ್ದಾರೆ. ಒಟ್ಟು 1,063 ಮಂದಿ ಇರುವ ಜನರ ಪೈಕಿ ಒಬ್ಬ ಮಾತ್ರ ಸಂಜೆ 6 ಗಂಟೆಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ. ಸ್ಥಳೀಯರಾಗಿರುವ ನೀರಜ್‌ ಬಂಟಿ ಪಟೇಲ್‌ ಎಂಬುವರಿಗೆ ಟಿಕೆಟ್‌ ನೀಡದೆ ಇದ್ದುದರಿಂದ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದರು.

ಛತ್ತೀಸ್‌ಗಢದಲ್ಲಿ ಶೇ.68.15 ಮತ: ಛತ್ತೀಸ್‌ಗಢದಲ್ಲಿ ನಡೆದ ಎರಡನೇ ಹಂತದಲ್ಲಿ 70 ಕ್ಷೇತ್ರಗಳಿಗೆ ನಡೆದ ಮತದಾನದ ವೇಳೆ ನಕ್ಸಲೀಯರು ಹಿಂಸಾಕೃತ್ಯಗಳನ್ನು ನಡೆಸಿದರೂ, ಶೇ. 68.15 ಮತದಾನವಾಗಿದೆ. ನಕ್ಸಲೀಯರು ನಡೆಸಿದ ಐಇಡಿ ಸ್ಫೋಟದಿಂದಾಗಿ ಇಂಡೋ-ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಪಡೆಯ ಯೋಧ ಹುತಾತ್ಮರಾಗಿದ್ದಾರೆ. ಗರಿಯಾಬಂದ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚುನಾವಣ ಸಿಬಂದಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಐಟಿಬಿಪಿ ಸಿಬಂದಿಯನ್ನು ನಿಯೋಜಿಸಲಾಗಿತ್ತು. ನ.7ರಂದು 20 ಕ್ಷೇತ್ರಗಳಿಗೆ ನಡೆದಿದ್ದ ಮೊದಲ ಹಂತದಲ್ಲಿ ಶೇ.78ರಷ್ಟು ಹಕ್ಕು ಚಲಾವಣೆಯಾಗಿತ್ತು.

Advertisement

ಮಹಿಳೆಯರೇ ನಿರ್ವಹಿಸುವ ಬೂತ್‌
ಛತ್ತೀಸ್‌ಗಢದ ರಾಯ್‌ಪುರ ಉತ್ತರ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳೆಯರೇ ಬೂತ್‌ ಅನ್ನು ನಿರ್ವಹಿಸಿದ್ದಾರೆ. ಈ ಬಗ್ಗೆ ಹೊಸದಿಲ್ಲಿಯಲ್ಲಿ ಚುನಾವಣ ಆಯೋಗವೇ ಮಾಹಿತಿ ನೀಡಿದೆ. ಒಟ್ಟು 201 ಮತಗಟ್ಟೆಗಳಲ್ಲಿ ಮಹಿಳೆಯರೇ ಪೂರ್ಣ ಪ್ರಮಾಣದಲ್ಲಿ ಮತದಾನ ಪ್ರಕ್ರಿಯೆಯನ್ನು ನಿರ್ವಹಿಸಿದ್ದಾರೆ. ಒಟ್ಟು 1,046 ಮಂದಿ ನಾರೀ ಮಣಿಯರು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೊಂದೆಡೆ ಇಂದೋರ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಪೋಲಿಂಗ್‌ ಬೂತ್‌ ಅನ್ನು ಚುನಾವಣ ಆಯೋಗ ಸ್ಥಾಪಿಸಿತ್ತು. ಈ ಮೂಲಕ ಅಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಲ್ಲದೆ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಅದಕ್ಕೆ ಉತ್ತಮ ರೀತಿಯ ಸ್ಪಂದನೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next