Advertisement

ಮತದಾನ ಬಹಿಷ್ಕಾರ: ಕುಕ್ಕೆ ಭಕ್ತರಿಂದ ಆಯೋಗಕ್ಕೆ ಪತ್ರ

10:10 PM Apr 10, 2019 | mahesh |

ಸುಬ್ರಹ್ಮಣ್ಯ: ಮಾಸ್ಟರ್‌ ಪ್ಲಾನ್‌ ಯೋಜನೆಯಡಿ ಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಕುಮಾರಧಾರಾ-ಕಾಶಿಕಟ್ಟೆ ನಡುವಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ರಸ್ತೆ ಬದಿ ಇರುವ ಆರು ವಿದ್ಯುತ್‌ ಕಂಬಗಳನ್ನು ಮೆಸ್ಕಾಂ ತಾತ್ಕಾಲಿಕವಾಗಿ ಸ್ಥಳಾಂತರಿಸದೆ ಅಭಿವೃದ್ಧಿಗೆ ಸಹಕರಿಸದಿರುವ ಮೆಸ್ಕಾಂ ಅಧಿಕಾರಿಗಳ ವರ್ತನೆಯಿಂದ ಬೇಸತ್ತಿರುವ ನೂರಾರು ಭಕ್ತರು ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಚಿಂತಿಸಿದ್ದಾರೆ.

Advertisement

ಕುಕ್ಕೆ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಮಾಸ್ಟರ್‌ ಪ್ಲಾನ್‌ ಅಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪಿಡಬ್ಲೂಡಿ ಇಲಾಖೆ ಮೂಲಕ ಟೆಂಡರ್‌ ಆಗಿ ಕೆಲಸವು ಚುನಾವಣೆ ಅಧಿಸೂಚನೆ ಹೊರಡಿಸುವ ಮೊದಲೇ ಆರಂಭವಾಗಿತ್ತು. ರಸ್ತೆ ಕಾಮಗಾರಿ ಆರಂಭದ ಸ್ಥಳದಲ್ಲಿ ಆರು ಕಂಬಗಳನ್ನು ತುರ್ತಾಗಿ ಸ್ಥಳಾಂತರಿಸಿ ತ್ವರಿತ ಕಾಮಗಾರಿಗೆ ಅನುವು ಮಾಡಿಕೊಡಬೇಕಿದೆ. ಈ ಕುರಿತು ದೇವಸ್ಥಾನದಿಂದ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದು, ಹಣ ಭರಿಸುವ ಕುರಿತು ಒಪ್ಪಿಗೆಯನ್ನು ನೀಡಲಾಗಿದೆ.

ಮೆಸ್ಕಾಂ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಕಾರಣವೊಡ್ಡಿ ಕಂಬಗಳನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡುತ್ತಿಲ್ಲ. ಚುನಾವಣಾಧಿಕಾರಿಗಳಿಗೂ ದೇವಸ್ಥಾನದ ಕಡೆಯಿಂದ ಮನವಿ ನೀಡಿ ಅನುಮತಿ ಕೇಳಲಾಗಿದೆ. ಇದುವರೆಗೂ ಅದಕ್ಕೆ ಉತ್ತರ ಬಂದಿಲ್ಲ. ಕಂಬ ತೆರವುಗೊಳಿಸದೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ರಸ್ತೆ ಅಗೆದಿರಿಸಲಾಗಿದ್ದು ಸಾರ್ವಜನಿಕರ ಓಡಾಟಕ್ಕೆ ಅನನುಕೂಲವಾಗುತ್ತಿದೆ. ಕುಮಾರಧಾರಾ ಸ್ವಾಗತ ಗೋಪುರದಿಂದ ರಸ್ತೆಗೆ ಜಲ್ಲಿ ಹಾಕದೆ ಧೂಳು, ಕೆಸರು ತುಂಬಿಕೊಂಡು ಸಂಚರಿಸಲು ಕಷ್ಟವಾಗಿದೆ.

ಕ್ರಮ ಜರಗಿಸಿ
ತತ್‌ಕ್ಷಣಕ್ಕೆ ಆರಂಭ ಹಂತದ ಆರು ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಿದಲ್ಲಿ ಕಾಮಗಾರಿ ಮುಂದುವರೆಸಲು ಅನುಕೂಲವಾಗುತ್ತದೆ. ಮೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ಸಾರ್ವಜನಿಕರಿಗೆ, ಭಕ್ತರಿಗೆ ತೊಂದರೆಯಾಗುತ್ತಿದೆ. ಹೀಗಾಗಿ, ನಾವು ಈ ಬಾರಿಯ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ. ಅಭಿವೃದ್ಧಿಗೆ ಅಡ್ಡಿಪಡಿಸಿ, ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕು. ಕಂಬಗಳನ್ನು ಶೀಘ್ರ ಸ್ಥಳಾಂತರಿಸುವ ವ್ಯವಸ್ಥೆ ಆಗಬೇಕು ಇತ್ಯಾದಿ ಬೇಡಿಕೆ ಇರಿಸಿಕೊಂಡು ಭಕ್ತರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ನೂರಕ್ಕೂ ಅಧಿಕ ಮಂದಿ ಸಹಿ ಮಾಡಿರುವ ಬಹಿಷ್ಕಾರದ ಮನವಿಯನ್ನು ಚುನಾವಣಾ ಆಯೋಗ ಹಾಗೂ ಇತರ ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next