Advertisement

ಮತದಾರರು ಬಿವೈಆರ್, ಹಾಲಪ್ಪ ಮುಖ ನೋಡಿ ಮತ ಹಾಕಿಲ್ಲ; ಬೇಳೂರು ವ್ಯಂಗ್ಯ

05:59 PM Jun 10, 2024 | Shreeram Nayak |

ಸಾಗರ: ಲೋಕಸಭಾ ಚುನಾವಣೆಯಲ್ಲಿ 26 ಸಾವಿರ ಮತ ಬಿಜೆಪಿಗೆ ಲೀಡ್ ಬಂದಿದೆ ಎಂದು ಕಾರ್ಯಕರ್ತರು ಹೆದರಬೇಡಿ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರು ಬಿಜೆಪಿಗೆ ಮತ ನೀಡಿದ್ದಾರೆಯೇ ವಿನಾ ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ಮುಖ ನೋಡಿ ಮತ ಹಾಕಿಲ್ಲ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

Advertisement

ಇಲ್ಲಿನ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಪಕ್ಷದ ಜೊತೆ ಸದಾ ಇರುವ, ಕಾರ್ಯಕರ್ತರು ಆಯ್ಕೆ ಮಾಡುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕಿತ್ತು ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಆದರೆ ಹೈಕಮಾಂಡ್ ಟಿಕೆಟ್ ನೀಡಿದ ಅಭ್ಯರ್ಥಿ ಪರವಾಗಿ ನಾವೆಲ್ಲಾ ಕೆಲಸ ಮಾಡಿದ್ದೇವೆ. ಆದರೂ ಸೋಲಾಗಿದೆ. ಸೋಲಿನ ಬಗ್ಗೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರಬಹುದು. ಆದರೆ ಮುಂದಿನ ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ನಗರಸಭೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಈ ಗೋಪಾಲಕೃಷ್ಣ ಬೇಳೂರಿಗೆ ಇದೆ. ಅದನ್ನು ತಡೆಯುವ ತಾಕತ್ತು ಹಾಲಪ್ಪರಿಗೆ ಇದ್ದರೆ ತಡೆಯಲಿ ಎಂದು ಸವಾಲು ಹಾಕಿದ ಬೇಳೂರು, ಕ್ಷೇತ್ರವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹರತಾಳು ಹಾಲಪ್ಪ ಹೇಳುತ್ತಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳ ಗಲಾಟೆ ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಹಾಲಪ್ಪ ರೀತಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸಭೆಗೆ ನುಗ್ಗಿ ಅಮಾಯಕರ ಮೇಲೆ ಹಲ್ಲೆ ಮಾಡಿಸುವಂತಹ ರೀತಿಯಲ್ಲಿ ಕಾನೂನು ಹದಗೆಟ್ಟಿಲ್ಲ ಎಂದು ಟಾಂಗ್ ನೀಡಿದರು.

ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದರು. ಇದೀಗ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಸ್ಥಿರವಿಲ್ಲ. ಸ್ವತಃ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಶಿಕಾರಿಪುರ ಕ್ಷೇತ್ರದಲ್ಲಿ ಮತಕ್ಕೆ 2 ಸಾವಿರ ರೂ. ಕೊಟ್ಟರೂ ಬಿ.ವೈ.ರಾಘವೇಂದ್ರ ಕಡಿಮೆ ಅಂತರದಲ್ಲಿ ಗೆಲ್ಲಲು ಕಾರಣ ಏನು ಎಂದು ಅವರು ಸ್ಪಷ್ಟಪಡಿಸಬೇಕು.

Advertisement

ಒಂದು ವರ್ಷದ ಮೊದಲು ಇಂಡಿಯಾ ಒಕ್ಕೂಟ ರಚನೆಯಾಗಿದ್ದರೆ ದೇಶದಲ್ಲಿ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿತ್ತು. ಇದೀಗ ದೇಶದಲ್ಲಿ ಮೋದಿಯವರ ಜನಪ್ರಿಯತೆ ಕಡಿಮೆಯಾಗಿದೆ. ಕೇವಲ 240 ಸ್ಥಾನ ಮಾತ್ರ ಬಿಜೆಪಿಗೆ ಬಂದಿದ್ದು, ವಾಸ್ತವವಾಗಿ ನರೇಂದ್ರ ಮೋದಿಯವರು ಪ್ರಧಾನಿಪಟ್ಟ ಸ್ವೀಕರಿಸಬಾರದಿತ್ತು ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟೇ ಕಷ್ಟಪಟ್ಟರೂ ಅಭ್ಯರ್ಥಿ ಪರವಾಗಿ ಹೆಚ್ಚು ಮತ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಯಕರ್ತರು ಅಭ್ಯರ್ಥಿಯಾಗಿದ್ದರೆ ಹೆಚ್ಚು ಸೂಕ್ತವಿತ್ತು. ಕಾರ್ಯಕರ್ತರು ಬಯಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಲೋಕಸಭಾ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ನೀಡಿದ್ದು ಸೋಲಿಗೆ ಕಾರಣವಾಗಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು. ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದೆ ಹೋದಲ್ಲಿ ಪಕ್ಷ ಜೀವಂತವಾಗಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕಾರ್ಯಕರ್ತರ ಮಾತಿಗೆ ಮನ್ನಣೆ ಕೊಡುವಂತೆ ಆಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಕೆಲವು ಸೋಲಿನ ನೈತಿಕ ಹೊಣೆ ಹೊತ್ತು ಮಧು ಬಂಗಾರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರೆ ಇನ್ನು ಕೆಲವರು ಬಂಗಾರಪ್ಪ ಅವರ ಕುಟುಂಬದ ವೈಯಕ್ತಿಕ ಜಗಳ ಚುನಾವಣೆ ಮೇಲೆ ಪ್ರಭಾವ ಬೀರಿದೆ ಎಂದು ಅಭಿಪ್ರಾಯಿಸಿದರು. ಇನ್ನಷ್ಟು ಕಾರ್ಯಕರ್ತರು ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಸೈಯದ್ ಜಾಕೀರ್ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐ.ಎನ್.ಸುರೇಶಬಾಬು, ಅಶೋಕ್ ಬೇಳೂರು, ರವಿಕುಮಾರ್ ಎಚ್.ಎಂ., ಕೆ.ಹೊಳೆಯಪ್ಪ, ಬಿ.ಎ.ಇಂದೂಧರ ಗೌಡ, ಪ್ರಭಾವತಿ ಚಂದ್ರಕಾಂತ್, ಮಕ್ಬೂಲ್ ಅಹ್ಮದ್, ಚಂದ್ರಮೌಳಿ, ಉಷಾ ಎನ್. ಇನ್ನಿತರರು ಹಾಜರಿದ್ದರು. ಚೇತನರಾಜ್ ಕಣ್ಣೂರು ಸ್ವಾಗತಿಸಿದರು. ಮೈಕಲ್ ಡಿಸೋಜ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next