Advertisement

ಜು.1ರಿಂದ ಮತದಾರರ ನೋಂದಣಿ ವಿಶೇಷ ಅಭಿಯಾನ

01:30 PM Jun 02, 2017 | Team Udayavani |

ದಾವಣಗೆರೆ: ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ನಿಟ್ಟಿನಲ್ಲಿ 18-19 ವಯೋಮಾನದವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ವಿಶೇಷ ಆಂದೋಲನ ಜು.1ರಿಂದ 31 ರ ವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ. 

Advertisement

18-19 ವಯೋಮಾನದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅನುಕೂಲವಾಗುವಂತೆ ಜಿಲ್ಲೆಯ ಪಿಯು, ಪದವಿ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ, ಸಂವಾದದ ಮೂಲಕ ವಿಶೇಷ ಆಂದೋಲನ ನಡೆಸಲಾಗುವುದು. ವಿವಿಧ ಕಾರಣದಿಂದ ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ 18-19 ವಯೋಮಾನದವರನ್ನು ಪುನಾಃ ಪಟ್ಟಿಗೆ ಸೇರಿಸುವ ಕಾರ್ಯ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ದಾವಣಗೆರೆ ಜಿಲ್ಲೆಯಲ್ಲಿ 1.1.2017ರಂತೆ ಇರುವ 15,76,875 ಮತದಾರರಲ್ಲಿ 18-19 ವಯೋಮಾನದವರ ಸಂಖ್ಯೆ 10,146 ಮಾತ್ರ. ಮತದಾರರ ಪಟ್ಟಿಯಲ್ಲಿ 18-19 ವಯೋಮಾನದ ಮತದಾರರ ನೋಂದಣಿ ಗೊಳಿಸುವಲ್ಲಿ ಇರುವ ಅಂತರ ಹೆಚ್ಚಾಗಿದೆ. ವಿಶೇಷ ಆಂದೋಲನದ ಮೂಲಕ ಆ ಮತದಾರರನ್ನು ಹೆಚ್ಚಿನ ಮಟ್ಟದಲ್ಲಿ ಸೇರಿಸಿಕೊಳ್ಳಲಾಗುವುದು.

ಕೇಂದ್ರ ಚುನಾವಣಾ ಆಯೋಗ ಭಾವಚಿತ್ರವಿರುವ ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಕಾರ್ಯಕ್ರಮ ಸದುಪಯೋಗಪಡಿಸುವ ನಿಟ್ಟಿನಲ್ಲಿ No voters to be left behind…ಎಂಬ ಧ್ಯೇಯಘೋಷದೊಂದಿಗೆ ವಿಶೇಷ ಆಂದೋಲನ ಹಮ್ಮಿಕೊಂಡಿದೆ ಎಂದು ತಿಳಿಸಿದರು. 1.1. 2017ಕ್ಕೆ 18 ವರ್ಷ ತುಂಬುವ ಎಲ್ಲರು ನಮೂನೆ-6 ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

2 ಕಡೆಯಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದಲ್ಲಿ ಒಂದು ಕಡೆ ತೆಗೆಸಿಹಾಕಬಹುದು. ಸಾರ್ವಜನಿಕರು ಆನ್‌ಲೈನ್‌ //www.nvsp.in ಮೂಲಕ ಹೆಸರು ನೋಂದಾಯಿಸಬಹುದು. ಮೊಬೈಲ್‌ ಆ್ಯಪ್‌ ಮುಖಾಂತರ ಅರ್ಜಿ ನಮೂನೆ ಭರ್ತಿ ಮಾಡುವ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ.

Advertisement

ಗ್ರಾಮೀಣ ಭಾಗದಲ್ಲೂ 18-19 ವಯೋಮಾನದ ಮತದಾರರು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದಕ್ಕೆ ಎಲ್ಲಾ ರೀತಿಯ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಮೊದಲ ಹಂತದ ನಂತರ ಎರಡನೇ ಹಂತದಲ್ಲಿ ಕಾಲೇಜುಗಳಲ್ಲಿ ಸಂವಾದದ ಮೂಲಕ ಜಾಗೃತಿ ಮೂಡಿಸಲಾಗುವುದು.

ಸಾರ್ವಜನಿಕರು ಟೋಲ್‌ ಫ್ರೀ ನಂಬರ್‌: 1950 ಮೂಲಕ ಮತದಾರರ ಪಟ್ಟಿಯಲ್ಲಿನ ಕುಂದುಕೊರತೆಗಳ ಬಗ್ಗೆ ವಿಚಾರಿಸಬಹುದು ಎಂದು ತಿಳಿಸಿದರು. ಜಾಗೃತಿ, ಸಂವಾದ ಕಾರ್ಯಕ್ರಮದ ನಡುವೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮತ್ತಿತರ ಕಾರ್ಯದ ಬಗ್ಗೆ ಜಾಗೃತಿ ಮೂಡಿಸುವರು.

ಜನವರಿ ಹಾಗೂ ಜುಲೈನಲ್ಲಿ ಈ ರೀತಿಯ ವಿಶೇಷ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಚುನಾವಣಾ ತಹಶೀಲ್ದಾರ್‌ ಪ್ರಸಾದ್‌, ಮಹಾನಗರ ಪಾಲಿಕೆ ಉಪ ಆಯುಕ್ತ ರವೀಂದ್ರ ಮಲ್ಲಾಪುರ ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next