Advertisement

ಮತದಾರರ ಪಟ್ಟಿ ಪರಿಷ್ಕರಣೆ ಪವಿತ್ರ ಕಾರ್ಯ: ಡಿಸಿ ಶರತ್‌

11:25 AM Sep 02, 2019 | Team Udayavani |

ಕಲಬುರಗಿ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪವಿತ್ರವಾದದ್ದು. ಹೀಗಾಗಿ ಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿಕೊಂಡಿರುವ ಬಿ.ಎಲ್.ಒ.ಗಳು ಜಾಗೃತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಶರತ್‌ ಬಿ.ಎಲ್.ಒ.ಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೆ. 1 ರಿಂದ 30ರ ವರೆಗೆ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ-2020ರ ಅಂಗವಾಗಿ ಅಧಿಕಾರಿಗಳ ಮತ್ತು ಬಿ.ಎಲ್.ಒಗಳ ಸಭೆ ನಡೆಸುವ ಮೂಲಕ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ದೋಷರಹಿತ ಮತದಾರ ಪಟ್ಟಿ ಮೂಲ ಆಧಾರವಾಗಿದೆ. ಇದನ್ನು ಅರಿತು ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್‌ ಸಿಇಓ ಹಾಗೂ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಪಿ. ರಾಜಾ ಮಾತನಾಡಿ, ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ನಿಗದಿತ ಗುರಿ ಸಾಧನೆಗೆ ಸ್ವೀಪ್‌ ಸಮಿತಿಯಿಂದ ಎಲೆಕ್ಟೋರಲ್ ಲಿಟ್ರಸಿ ಕ್ಲಬ್‌ ಸದಸ್ಯರಾಗಿರುವ ಮಕ್ಕಳಿಂದ ಪ್ರಭಾತಫೇರಿ, ಜಾಥಾ, ಪೋಸ್ಟರ್‌, ಕರಪತ್ರ ಹಂಚಿಕೆ ಸೇರಿದಂತೆ ಇನ್ನಿತರ ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ವೋಟರ್‌ ಹೆಲ್ಪ್ಲೈನ್‌ ಆ್ಯಪ್‌ ಕುರಿತು ಬಿ.ಎಲ್.ಒ.ಗಳಿಗೆ ಸೆಪ್ಟೆಂಬರ್‌ 4ರ ನಂತರ ತರಬೇತಿ ನೀಡಲಾಗುತ್ತದೆ. ರಾಜಕೀಯ ಪಕ್ಷದ ನಾಯಕರು ಬ್ಲಾಕ್‌ ಲೆವೆಲ್ ಏಜೆಂಟರುಗಳನ್ನು ನೇಮಿಸಿ ಪರಿಷ್ಕರಣೆ ಕಾರ್ಯಕ್ಕೆ ಸಾಥ್‌ ನೀಡಬೇಕು ಎಂದರು.

Advertisement

ರಾಜಕೀಯ ಮುಖಂಡರಾದ ದೊಡ್ಡಪ್ಪಗೌಡ ಪಾಟೀಲ, ಮೊಹಮ್ಮದ್‌ ಆಲಂ, ಶರಣಪ್ಪ ಮಮಶೆಟ್ಟಿ ಮತದಾರರ ಪಟ್ಟಿಯಲ್ಲಿ ಕಂಡುಬರುವ ವಿವಿಧ ನ್ಯೂನತೆಗಳನ್ನು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶರಣ್ಣಪ್ಪ ಮಾತನಾಡಿ, ಸಮಗ್ರ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವು ಸೆ. 1 ರಿಂದ 30ರ ವರಗೆ ನಡೆಯಲಿದ್ದು, ಬಿ.ಎಲ್.ಓ.ಗಳು ಮನೆ-ಮನೆ ಭೇಟಿ ನೀಡಿ ಪರಿಷ್ಕರಣಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಅ. 15 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿ ಅ. 30ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದರು.

ಐ.ಎ.ಎಸ್‌ ಪ್ರೊಬೇಷನರಿ ಅಧಿಕಾರಿ ಡಾ| ಗೋಪಾಲಕೃಷ್ಣ ರಾಘವೇಂದ್ರ ಹಾಗೂ ಆಯಾ ತಾಲೂಕಿನ ತಹಶೀಲ್ದಾರರು, ಸಹಾಯಕ ಚುನಾವಣಾ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು, ಬಿ.ಎಲ್.ಒ.ಗಳು ಇದ್ದರು.

ಇದೇ ಸಂದರ್ಭದಲ್ಲಿ Electors verification program (EVP) ಚಟುವಟಿಕೆಯ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next