Advertisement

ಮತದಾರ ಪಟ್ಟಿ ಪರಿಷ್ಕರಣಾ ಜಾಗೃತಿ

11:23 AM Sep 15, 2019 | Suhan S |

ಗಜೇಂದ್ರಗಡ: ರಾಜ್ಯ ಶಿಕ್ಷಣ ಇಲಾಖೆ, ಜಿಲ್ಲಾ ಸ್ವಿಪ್‌ ಸಮಿತಿ, ಜಿಪಂ ಹಾಗೂ ಬಿ.ಎಸ್‌. ಸಿಂಹಾಸನದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮತದಾರ ಪಟ್ಟಿ ಪರಿಷ್ಕರಣಾ ಜಾಗೃತಿ ಜಾಥಾಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಈ ವೇಳೆ ಸ್ವೀಪ್‌ ಸಮಿತಿ ಯೋಜನಾಧಿಕಾರಿ ಡಾ| ಪಿ.ಎಚ್. ಕ್ಯಾರೇಕೊಪ್ಪ ಮಾತನಾಡಿ, ದೇಶದಲ್ಲಿ ಮತದಾನ ಪಟ್ಟಿಯ ಪಾರದರ್ಶಕ ಪರಿಷ್ಕರಣೆಯಾದಲ್ಲಿ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲಿದೆ ಎನ್ನುವುದು ಪ್ರತಿಯೊಬ್ಬರ ಬಲವಾದ ನಂಬಿಕೆಯಾಗಿದೆ. ಮತದಾರರ ವಿವರ ಶೇ. ನೂರರಷ್ಟು ಸಮರ್ಪಕವಾಗಿರಬೇಕೆಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಮತದಾರರು ತಮ್ಮ ಮತದಾನ ಚೀಟಿಯಲ್ಲಿ ಏನೇ ತಿದ್ದುಪಡಿ ಅಗತ್ಯವಿದ್ದಲ್ಲಿ ನಿಗದಿತ ನಮೂನೆಯಲ್ಲಿ ಸ್ಪಷ್ಟ ಮಾಹಿತಿ ಭರ್ತಿ ಮಾಡಿ ನಾಡಕಚೇರಿ ಅಥವಾ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ಕೆ ಪೂರಕವಾಗಿ ಯುವ ಮತದಾರರು ಸ್ವಯಂ ಪ್ರೇರಿತರಾಗಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಇತ್ಯಾದಿ ಲೋಪಗಳು ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದರು.

ಪ್ರಾಚಾರ್ಯ ಎಸ್‌.ಎಸ್‌. ಕೆಂಚನಗೌಡರ ಮಾತನಾಡಿ, ಮತದಾರರು ತನ್ನ ಮತ ಪಟ್ಟಿಯಲ್ಲಿ ಯಾವುದೇ ದೋಷವಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಆ ಮೂಲಕ ತನ್ನ ಮತಪಟ್ಟಿ ಸ್ಪಷ್ಟವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮತದಾರರ ಪರಿಶೀಲನೆ ಮತ್ತು ದೃಢೀಕರಣಕ್ಕೆ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌ ಸೇರಿ ಇತರೆ ಯಾವುದೇ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ತಿದ್ದುಪಡಿ ಮಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪಟ್ಟದ ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿತು. ಬಳಿಕ ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಿದರು. ಪಿ.ಎಂ. ದಿವಾಣದ, ಹಿತೇಶ ಬಿ, ಸಿದ್ಧೇಶ ಕೆ., ಮಹೇಂದ್ರ ಜಿ., ಮಹಾಂತೇಶ ಜೀವಣ್ಣವರ, ಎಚ್.ಎಚ್. ಮಾದರ, ಎಸ್‌.ಬಿ. ಜಾಲಿಹಾಳ, ವಿಶಾಲ ಭಜೇಂತ್ರಿ, ಬಿ.ವಿ. ಮುನವಳ್ಳಿ, ಆರ್‌.ವಿ. ಮಂತ್ರೋಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next