ಬೆಂಗಳೂರು: ಮತದಾರರ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿದ್ದ ಚಿಲುಮೆ ಸಂಸ್ಥೆಯ ಕೆ. ರವಿಕುಮಾರ್ನ ಆಪ್ತ ಲೋಕೇಶ್ ನನ್ನು ಕೇಂದ್ರ ವಿಭಾಗದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಲೋಕೇಶ್ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದು ಬಂದಿದೆ. ಈಗ ಹಲಸೂರು ಗೇಟ್ ಠಾಣೆ ಪೊಲೀಸರು ಆತನನ್ನು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದು, ಆತನಿಂದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಗಳು ಹೊರಬೀಳಲಿವೆ ಎಂದು ಮೂಲಗಳು ತಿಳಿಸಿವೆ.
ಚಿಲುಮೆ ಮುಖ್ಯಸ್ಥ ರವಿಕುಮಾರ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿವಿಧ ತಾಂತ್ರಿಕ ತಂಡಗಳು ನಡೆಸುತ್ತಿರುವ ತನಿಖೆ ಮತ್ತು ವಿಚಾರಣೆಯ ಪ್ರತೀ ಹಂತವನ್ನು ಸ್ವತಃ ಡಿಸಿಪಿ ಶ್ರೀನಿವಾಸಗೌಡ ಅವಲೋಕಿಸು ತ್ತಿದ್ದಾರೆ.
ಬಂಧಿತ ಆರೋಪಿಗಳಾದ ಧರ್ಮೇಶ್, ಕೆಂಪೇಗೌಡ ಹೇಳಿಕೆ ಮೇಲೆ ತನಿಖಾ ತಂಡ ಬನಶಂಕರಿಯ ಧರ್ಮೇಶ್ ಕಚೇರಿ ಮತ್ತು ಮನೆಯಲ್ಲಿ ಮಹಜರು ನಡೆಸಿದೆ. ಮಹಜರು ವೇಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆಯ ಕರಾರು ಬಯಲಾಗಿದೆ. ಕರಾರಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳ ಸಾಕ್ಷ್ಯ ಪೊಲೀಸರಿಗೆ ಸಿಕ್ಕಿದೆ.
Related Articles
ಆರ್.ಒ.ಗಳಿಂದ ಮಾಹಿತಿ ಪಡೆದ ಪೊಲೀಸರು
ಪೊಲೀಸರ ಮಹಜರು ಪ್ರಕ್ರಿಯೆ ವೇಳೆ ಕೆಲವು ಕಡತಗಳ ಪರಿಶೀಲನೆ ನಡೆದಿದ್ದು, ಬಿಬಿಎಂಪಿಯಿಂದಲೂ ಕೆಲವು ದಾಖಲೆಗಳನ್ನು ತನಿಖಾ ತಂಡ ಪಡೆದಿದೆ. ಕಡತಗಳ ಪರಿಶೀಲನೆ ವೇಳೆ ಕೆಲವು ಆರ್.ಒ.ಗಳು ಅಧಿಕಾರ ದುರ್ಬಳಕೆ ಮಾಡಿರುವುದು ಪತ್ತೆಯಾಗಿದೆ. ಮತದಾರರ ಗೌಪ್ಯ ಮಾಹಿತಿ ಕಳವು ಗೊತ್ತಿದ್ದೇ ನಡೆದಿದೆಯೇ ಎಂದು ಪೊಲೀಸರಿಗೆ ಅನುಮಾನ ಮೂಡಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಆರ್.ಒ.ಗಳನ್ನ ಕರೆಯಿಸಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರತಿಯೊಂದು ಆಯಾಮದಲ್ಲೂ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.