Advertisement

ಮಾಹಿತಿ ಕದಿಯಲು ಚಿಲುಮೆ ಪಕ್ಕಾ ಪ್ಲ್ಯಾನ್

02:17 PM Nov 22, 2022 | Team Udayavani |

ಬೆಂಗಳೂರು: ಮತದಾರರ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಕೇವಲ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದ್ದ ಚಿಲುಮೆ ಸಂಸ್ಥೆ, ಮಾಹಿತಿ ಸಂಗ್ರಹ, ತನ್ನ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡುವುದು, ಮೊಬೈಲ್‌ ಆ್ಯಪ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡುವುದು ಸೇರಿ ಹಲವು ವಿಚಾರಗಳ ಬಗ್ಗೆ ಮೊದಲೇ ಯೋಜನೆ ರೂಪಿಸಿತ್ತು.

Advertisement

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದ ಚಿಲುಮೆ ಸಂಸ್ಥೆ ಮತದಾರರ ಜಾತಿ, ಧರ್ಮ, ಅವರ ಉದ್ಯೋಗ, ಚುನಾವಣೆಯಲ್ಲಿ ಯಾರಿಗೆ ಮತ ಹಾಕಲಾಗುತ್ತದೆ ಎಂಬಿತ್ಯಾದಿ ವಿವರ ಸಂಗ್ರಹಿಸಿದ ಆರೋಪ ಎದುರಾಗಿದೆ.

ಹೀಗಾಗಿ ಚಿಲುಮೆ ಸಂಸ್ಥೆಗೆ ನಗರ ಜಿಲ್ಲಾ ಚುನಾವಣಾಧಿ ಕಾರಿಯಿಂದ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾ ಗಿತ್ತು. ಆದರೀಗ ಚಿಲುಮೆ ಸಂಸ್ಥೆ ಮತದಾರರ ಮಾಹಿತಿ ಸಂಗ್ರಹಕ್ಕೆ ಪಕ್ಕಾ ಪ್ಲ್ರಾನ್‌ ಮಾಡಿಕೊಂಡೇ ಬಿಬಿಎಂಪಿಯಿಂದ ಅನುಮತಿ ಪಡೆದಿತ್ತು ಎಂಬುದು ಬಹಿರಂಗವಾಗುತ್ತಿದೆ. ಅದರಲ್ಲೂ ಮತದಾರರ ಜಾಗೃತಿ ಕಾರ್ಯಕ್ಕೆ ಮಾನವ ಸಂಪನ್ಮೂಲ ಒದಗಿಸಲು ಮುಂದಾಗಿದ್ದ ಸಮನ್ವಯ ಟ್ರಸ್ಟ್‌ ಜತೆಗೆ ಚಿಲುಮೆ ಸಂಸ್ಥೆ ಮಾಡಿಕೊಳ್ಳಲು ಉದ್ದೇಶಿಸಿದ್ದ ಒಪ್ಪಂದದ ದಾಖಲೆಯಲ್ಲಿ ಎಲ್ಲವೂ ಉಲ್ಲೇಖವಾಗಿದೆ.

ಐಡಿ ಸಿಗುತ್ತದೆಂದು ಮೊದಲೇ ಹೇಳಲಾಗಿತ್ತು: ಒಪ್ಪಂದದ ದಾಖಲೆಯಲ್ಲಿರು ವಂತೆ ಮತಗಟ್ಟೆ ಸಮೀಕ್ಷೆಗೆ ಸಮನ್ವಯ ಸಂಸ್ಥೆ ಕಳುಹಿಸಿಕೊಡುವ ಸಿಬ್ಬಂದಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಹೀಗೆ ಗುರುತಿನ ಚೀಟಿ ಪಡೆಯುವವರು ತಮಗೆ ನೀಡಲಾದ ಮತಗಟ್ಟೆಯ ವ್ಯಾಪ್ತಿಯಲ್ಲಿ 12 ದಿನಗಳೊಳಗೆ ಪ್ರತಿ ಮನೆಗೂ ತೆರಳಿ ಸರ್ವೆ ನಡೆಸ ಬೇಕು. ಅದಕ್ಕೂ ಮುನ್ನ 3 ದಿನಗಳ ಕಾಲ ಸರ್ವೆ ಮಾಡುವ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಉಲ್ಲೇಖೀಸಲಾಗಿದೆ. ಅಲ್ಲದೇ, ಸರ್ವೆ ಮಾಡಿದ ನಂತರ ಸಂಗ್ರಹಿಸುವ ಮಾಹಿತಿಯನ್ನು ಸಮೀಕ್ಷೆದಾರರು ಮಾತ್ರ ಬಳಸಬಹುದಾದ ವೋಟರ್‌ ಸರ್ವೆ ಮೊಬೈಲ್‌ ಆ್ಯಪ್‌ನಲ್ಲಿ ನಮೂದಿಸಬೇಕು ಎಂದೂ ತಿಳಿಸಲಾಗಿದೆ.

ಒಂದು ವೋಟರ್‌ ಐಡಿಗೆ 25 ರೂ. ದರ ನಿಗದಿ: ಚಿಲುಮೆ ಸಂಸ್ಥೆ ಸಿದ್ಧಪಡಿಸಿದ್ದ ಕರಡು ಒಪ್ಪಂದದ ದಾಖಲೆಯಲ್ಲಿ ಒಂದು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಿದರೆ 25 ರೂ., ಮತ ದಾರರ ಹೆಸರು ಸೇರ್ಪಡೆಯ ಫಾರಂ-6 ಹಾಗೂ ಮತದಾರರ ಪಟ್ಟಿಯಲ್ಲಿ ವಿವರ ಬದಲಾವಣೆ ಅಥವಾ ಹೆಸರು ತೆಗೆದು ಹಾಕುವ ಫಾರಂ -7 ಭರ್ತಿ ಮಾಡಿಸಿಕೊಂಡದರೆ ಒಂದು ಫಾರಂಗೆ 13 ರೂ. ನೀಡುವುದಾಗಿ ತಿಳಿಸಲಾಗಿತ್ತು. ಅಲ್ಲದೆ ಮತದಾರರಲ್ಲದವರನ್ನು ಗುರುತಿಸಿದರೂ ತಲಾ 10 ರೂ. ನೀಡುವುದಾಗಿ ಹೇಳಲಾಗಿತ್ತು. ಅದರ ಜತೆಗೆ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳಿಗೂ ಈ ಪ್ರಕ್ರಿಯೆಯಿಂದ ಹಣ ಪಾವತಿಸುವ ಬಗ್ಗೆಯೂ ಉಲ್ಲೇಖೀಸಲಾಗಿದ್ದು, 5 ರೂ.ನಿಂದ 15 ರೂ.ವರೆಗೆ ಪಾವತಿಸಬೇಕು ಎಂದು ತಿಳಿಸಲಾಗಿದೆ.

Advertisement

ಅಕ್ರಮದ ಬಗ್ಗೆ ಎರಡು ತಿಂಗಳ ಹಿಂದೆಯೇ ಮಾಹಿತಿ: ಸದ್ಯ ಅಕ್ರಮದ ಕುರಿತು ಮೊದಲು ದೂರು ನೀಡಿದ್ದ ಸಮನ್ವಯ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಮಂಗಳಾ ಕಳೆದ ಎರಡು ತಿಂಗಳ ಹಿಂದೆ ಅಂದರೆ ಸೆ. 20ರಂದೇ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೂ ಬಿಬಿಎಂಪಿ ಅಧಿಕಾರಿಗಳು ಆ ವಿಷಯದ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೊನೆಗೆ ಅಕ್ರಮದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆರಂಭವಾದ ನಂತರ ನವೆಂಬರ್‌ ಮೊದಲ ವಾರದ ಚಿಲುಮೆ ಸಂಸ್ಥೆ ಅನುಮತಿ ರದ್ದು ಮಾಡಿ, ಪ್ರಕರಣ ದಾಖಲಿಸಲಾಯಿತು. ‌

ಚಿಲುಮೆ ಸಂಸ್ಥೆ ಮತದಾರರಿಗೆ ಜಾಗೃತಿ ಮೂಡಿಸುವ ಕುರಿತು ಜನರನ್ನು ಕಳುಹಿಸುವಂತೆ ಕೋರಿತ್ತು. ಅದಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿದ್ದ ಕರಡು ಒಪ್ಪಂದ ಪ್ರತಿಯಲ್ಲಿ ಮತದಾರರ ಮಾಹಿತಿ ಸಂಗ್ರಹ ಸೇರಿ ಇನ್ನಿತರ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖೀಸಲಾಗಿತ್ತು. ಹೀಗಾಗಿ ಈ ಬಗ್ಗೆ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. -ಸುಮಂಗಳಾ, ಸಮನ್ವಯ ಟ್ರಸ್ಟ್‌ನ ಎಂಡಿ

Advertisement

Udayavani is now on Telegram. Click here to join our channel and stay updated with the latest news.

Next