ಕದ್ರಿಪಾರ್ಕ್: ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರತಿಯೊಬ್ಬರೂ ರಾಷ್ಟ್ರಭಕ್ತಿ ಮೆರೆಯಬೇಕು ಎಂದು ಮಾಜಿ ಸೈನಿಕ ಬ್ರಿ| ಐ. ಎನ್. ರೈ ಹೇಳಿದರು.
ದ.ಕ. ಜಿಲ್ಲಾ ಸ್ವೀಪ್ ಸಮಿತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಆಕಾಶವಾಣಿ ಮಂಗಳೂರು, ರೋಟರ್ಯಾಕ್ಟ್ ಮಂಗಳೂರು ಸಿಟಿಯ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ನಡೆದ “ನಡಿಗೆ ಮತದಾನದೆಡೆಗೆ- ವಾಕ್ ವಿತ್ ಟಾಕ್’ ಕಾರ್ಯಕ್ರಮವನ್ನು ಅವರು ಗುರುವಾರ ಉದ್ಘಾಟಿಸಿದರು.
ದೇಶ ರಕ್ಷಣೆ, ಭದ್ರತೆ ಮತ್ತು ಸಮಗ್ರ ಬದಲಾವಣೆ, ಅಭಿವೃದ್ಧಿಗೆ ಬಲಿಷ್ಠ ಸರಕಾರ ಆಳ್ವಿಕೆಗೆ ಬರಲು ಪ್ರತಿಯೊಬ್ಬರೂ ಮತದಾನ ಮಾಡಬೇಕು. ಎಲ್ಲರೂ ಮತದಾನ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮಾದರಿಯಾಗಬೇಕು ಎಂದರು.
ನಮ್ಮ ದೇಶದ ಚುನಾವಣೆಯನ್ನು ಇಡೀ ಜಗತ್ತು ನೋಡುತ್ತಿದೆ. ಪ್ರತೀ ಮತವೂ ದೇಶದ ಭವಿಷ್ಯ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮತ ದಾರರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ| ಸೆಲ್ವಮಣಿ ಆರ್., ಕ.ಸಾ.ಪ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ನಟ ದೇವದಾಸ್ ಕಾಪಿಕಾಡ್, ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ| ಮುರಳೀ ಮೋಹನ್ ಚೂಂತಾರು, ಆಕಾಶವಾಣಿ ಮುಖ್ಯಸ್ಥೆ ಉಷಾಲತಾ ಸರಪಾಡಿ, ಲೆಕ್ಕ ಪರಿಶೋಧಕ ಶಾಂತರಾಮ ಶೆಟ್ಟಿ, ರೋಟರ್ಯಾಕ್ಟ್ ಅಧ್ಯಕ್ಷ ಗಣೇಶ್, ಕಲಾವಿದೆ ಶಬರಿ ಗಾಣಿಗ, ಕ್ರೀಡಾ ಸಾಧಕ ಪ್ರದೀಪ್ ಆಚಾರ್ಯ, ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ, ರೇಡಿಯೋ ಕೇಳುಗರ ಸಂಘದ ರಾಮರಾವ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಆಕಾಶ ವಾಣಿಯ ಕಾರ್ಯಕ್ರಮ ಸಂಯೋಜಕ ಡಾ| ಸದಾನಂದ ಪೆರ್ಲ ನಿರೂಪಿಸಿದರು.