ನೆಲಮಂಗಲ: ದೇಶದಲ್ಲಿ ಪ್ರಜಾಪ್ರಭುತ್ವ ಗೆಲ್ಲಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ರೋಟರಿ ತಾಲೂಕು ಅಧ್ಯಕ್ಷ ಮಂಜುನಾಥ್ ಪಾಟೀಲ್ ಸಲಹೆ ನೀಡಿದರು. ಪಟ್ಟಣದ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಮತದಾನ ಜಾಗೃತಿ ರ್ಯಾಲಿಯಲ್ಲಿ ಮಾತನಾಡಿದರು.
ಮತದಾನ ಮಾಡುವುದು ನಮ್ಮ ಕರ್ತವ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕು. ಶೇಕಡಾ ನೂರು ಮತದಾನವಾದರೆ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಮತವನ್ನು ಪುಡಿಗಾಸಿನ ಆಮಿಷಗಳಿಗೆ ಮಾರಿಕೊಳ್ಳದೇ ಕರ್ತವ್ಯವೆಂದು ಅರಿತು ಮತದಾನ ಮಾಡಿದರೆ ಮುಂದಿನ ಐದು ವರ್ಷ ದೇಶದ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.
ತಾಲೂಕು ರೋಟರಿ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಒಂದು ಮತ ರಾಷ್ಟ್ರದ ಐದು ವರ್ಷದ ಭವಿಷ್ಯವನ್ನು ರೂಪಿಸುತ್ತದೆ ಎಂದರೆ ನಮ್ಮ ನಿರ್ಧಾರ ಉತ್ತಮವಾಗಿರಬೇಕು. ಅಮೂಲ್ಯವಾದ ಮತವನ್ನು ಮಾರಿಕೊಳ್ಳದೇ ಉತ್ತಮ ಅಭ್ಯರ್ಥಿಗೆ ಮತದಾನ ಮಾಡಬೇಕೆಂದರು.
ಪರಿಸರ ಸ್ನೇಹಿ ಬ್ಯಾಗ್ ವಿತರಣೆ: ಜನರು ಸಂತೆ ಹಾಗೂ ಮಾರುಕಟ್ಟೆಗಳಿಗೆ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪಾಸ್ಟಿಕ್ ಚೀಲಗಳನ್ನು ತರುವುದನ್ನು ಮನಗಂಡ ತಾಲೂಕು ರೋಟರಿ ಸಂಸ್ಥೆಯವರು, ಪರಿಸರ ಸಂರಕ್ಷಣೆಗಾಗಿ ಬಟ್ಟೆ ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಆಗಮಿಸಿದ್ದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸ್ಟುಡಿಯೋ ಮಂಜುನಾಥ್, ರೋಟರಿಯನ್‌ಗಳಾದ ಸಿ.ಪ್ರದೀಪ್, ಮಂಜುನಾಥ್. ಕೆ.ಬಾಲಾಜಿ, ಮಲ್ಲಾಪುರ ಮಾರಯ್ಯ, ಎನ್.ಜಿ.ನಾಗರಾಜು, ಗಂಗರಾಜು, ಬಾಲಾಜಿ ಮತ್ತಿತರರು ಹಾಜರಿದ್ದರು.