Advertisement

ಅಭ್ಯರ್ಥಿಗಳ ಭವಿಷ್ಯಕ್ಕೆ ಇಂದು ಮತ

03:50 PM Aug 31, 2018 | Team Udayavani |

ರಾಯಚೂರು: ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ಏಳು ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ
ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇತ್ತ ಸ್ಪರ್ಧಾಕಾಂಕ್ಷಿಗಳು ಕೂಡ ತಮ್ಮ ಪ್ರಚಾರ ಅಂತ್ಯಗೊಳಿಸಿದ್ದು, ಎಲ್ಲರ ಚಿತ್ತ ಮತದಾನದತ್ತ ನೆಟ್ಟಿದೆ.

Advertisement

ಜಿಲ್ಲೆಯ ಒಟ್ಟು 175 ಸ್ಥಾನಗಳಲ್ಲಿ ಸಿಂಧನೂರು  ನಗರಸಭೆಯಲ್ಲಿ ಎರಡು ಹಾಗೂ ದೇವದುರ್ಗ ಪುರಸಭೆಯಲ್ಲಿ ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಹೀಗಾಗಿ ಉಳಿದ 172 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಒಟ್ಟು 716 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಜಿಲ್ಲಾಡಳಿತ ಚುನಾವಣೆಗೆ ಸಕಲ ರೀತಿಯಲ್ಲಿ
ಸಿದ್ಧತೆ ಮಾಡಿಕೊಂಡಿದ್ದು, ಗುರುವಾರ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲೆಯ ಏಳು ಸ್ಥಳೀಯ ಸಂಸ್ಥೆಗಳಿಗೆ ಆ.31ರಂದು
ಚುನಾವಣೆ ನಡೆಯಲಿದ್ದು. ಒಟ್ಟು 414 ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ವರಂತೆ ಹೆಚ್ಚುವರಿ ಶೇ.10ರಷ್ಟು ಆಧಾರದಡಿ ಎರಡು ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿದ್ದು, ಗುರುವಾರ ಮಸ್ಟರಿಂಗ್‌ ನಡೆಸಲಾಗಿದೆ ಎಂದು ವಿವರಿಸಿದರು.

ರಾಯಚೂರಿನಲ್ಲಿ 212, ಮಾನ್ವಿಯಲ್ಲಿ 43, ಮುದಗಲ್‌ 23, ದೇವದುರ್ಗ 26, ಲಿಂಗಸುಗೂರಲ್ಲಿ 31, ಹಟ್ಟಿಯಲ್ಲಿ 15 ಹಾಗೂ ಸಿಂಧನೂರಿನಲ್ಲಿ 66 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಕ್ಕಳಿಗೆ ಅನನುಕೂಲವಾಗುವ ರೀತಿಯಲ್ಲಿ ಶಾಲೆಗಳನ್ನು ನಡೆಸದಂತೆ ರಜೆ ಘೋಷಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಂಪ್ರಾದಾಯಿಕ ಸೂಕ್ಷ್ಮಾತೀಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿತ್ತು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಆಗ ಗುರುತಿಸಿದ್ದ ಕೇಂದ್ರಗಳನ್ನೇ ಪುನಃ ಸೂಕ್ಷ್ಮಾ ಕೇಂದ್ರಗಳೆಂದು ಗುರುತಿಸಿದ್ದು, ವಿಶೇಷ ಭದ್ರತೆ ಒದಗಿಸಲಾಗಿದೆ ಎಂದರು.

ಕೆಲವೆಡೆ ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಅಕ್ಕಿ ಹಂಚುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಅವುಗಳನ್ನು
ಪರಿಶೀಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಮೈಕ್ರೋ ಅಬ್ಸರ್ವರ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

Advertisement

ಕತ್ತಲ್‌ ರಾತ್ರಿ ಕರಾಮತ್ತು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ವಿಚಾರ ಜೋರಾಗಿ ಸದ್ದು ಮಾಡಿತ್ತು.  ಅದರ ಬೆನ್ನಲ್ಲೇ ಬಂದ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೂ ಅದರ ಬಿಸಿ ತಟ್ಟಿದೆ. ಈ ಬಾರಿಯೂ ಮತದಾರರಿಗೆ ಹಣದ ಆಮಿಷವೊಡ್ಡಲಾಗುತ್ತಿದೆ ಎನ್ನಲಾಗುತ್ತಿದೆ. ಚುನಾವಣೆ ಮುನ್ನಾ ದಿನವಾದ ಗುರುವಾರ ರಾತ್ರಿ ಕತಲ್‌ ರಾತ್ರಿ ಕರಾಮತ್ತು ನಡೆಯಲಿದೆ ಎಂಬ ಗಾಳಿಸುದ್ದಿಗಳು ಜೋರಾಗಿ ಹರಡಿದ್ದವು. ಕುಟುಂಬಕ್ಕೆ ಒಂದು ಸಾವಿರ ರೂ., ಎರಡು ಸಾವಿರ ನೀಡುತ್ತಾರೆ, ವೋಟಿಗೆ ಐದು ನೂರು ರೂ. ಹೀಗೆ ತರಹೇವಾರಿ ರೀತಿಯ ಮಾತುಗಳು ಕೇಳಿ ಬಂದವು. ಆದರೆ, ಈ ಬಾರಿ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಹಣಬಲ ಎಷ್ಟರ ಮಟ್ಟಿಗೆ ಕೆಲಸ ಮಾಡುವುದೋ ನೋಡಬೇಕು. 

ಜಾತಿಗಳೇ ಹೈಜಾಕ್‌..?: ಇನ್ನು ಕೆಲ ನಾಯಕರು ದೊಡ್ಡ ಜನಸಂಖ್ಯೆ ಹೊಂದಿರುವ ಜಾತಿಗಳನ್ನೇ ಹೈಜಾಕ್‌ ಮಾಡುವ
ಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆ ಸಮುದಾಯಕ್ಕೆ ಏನಾದರೂ ದೊಡ್ಡ ಕೊಡುಗೆ ನೀಡುವ ಆಶ್ವಾಸನೆ ನೀಡಿದ್ದಲ್ಲದೇ ಮುಂಗಡ ಹಣ ನೀಡಿ ವಿಶ್ವಾಸ ಗಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಎಲ್ಲರೂ ತಮ್ಮನ್ನೇ ಬೆಂಬಲಿಸುವಂತೆ ಒತ್ತಡ ಹೇರಿ, ಜಾತಿ ದಾಳ ಪ್ರಯೋಗಿಸಿದ್ದಾರೆ. ಆದರೆ, ಮೀಸಲಾತಿ ಬಂದ ಕ್ಷೇತ್ರಗಳಲ್ಲಿ ಮಾತ್ರ ಒಂದೇ ಸಮುದಾಯದವರ ಮಧ್ಯೆ ಕಾದಾಟ ಏರ್ಪಟ್ಟ ಕಾರಣ ಆ ಜಾತಿ ಮತಗಳೇ ಹರಿದು ಹಂಚಿದ್ದು, ಉಳಿದ ಜಾತಿಗಳ ಓಲೈಕೆ ಮಾಡಿದ್ದಾರೆ ಆಕಾಂಕ್ಷಿಗಳು. 

Advertisement

Udayavani is now on Telegram. Click here to join our channel and stay updated with the latest news.

Next