ಚಿಕ್ಕಬಳ್ಳಾಪುರ: ಜಿಲ್ಲೆಯ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಅನರ್ಹ ಶಾಸಕ ಸುಧಾಕರ್ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ. ಪ್ರತ್ಯಾರೋಪದಲ್ಲಿ ತೊಡಗಿರುವುದು ಒಂದಡೆಯಾದರೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ 150 ನೇ ಜನ್ಮ ಜಯಂತಿ ದಿನವಾದ ಬುಧವಾರ ಜಿಲ್ಲಾ ಕಾಂಗ್ರೆಸ್ ಉಪ ಚುನಾವಣೆ ಕಚೇರಿ ತೆರೆಯುವ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಿದೆ.
ಚಿಕ್ಕಬಳ್ಳಾಪುರ ಬಿಬಿ ರಸ್ತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಉದ್ಘಾಟಿಸಿದರು.
ಕೈಗೆ ಬಂದು ಶ್ರೀಮಂತರಾದವರೇ ಜಾಸ್ತಿ:
ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಪಕ್ಷಕ್ಕೆ ಬಂದು ಶ್ರೀಮಂತರಾದವರೇ ಹೆಚ್ಚು, ಇವತ್ತು ಪಕ್ಷ ಬಡವಾಗಿರಬಹುದು. ಇಂದಲ್ಲ ನಾಳೆ ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಸ್ಥಳೀಯ ಅನರ್ಹ ಶಾಸಕ ಸುದಾಕರ್ ಕೂಡ ಪಕ್ಷ ಅಧಿಕಾರದಲ್ಲಿ ಇದ್ದಾಗ ಚೆನ್ನಾಗಿಯೇ ಲೂಟಿ ಮಾಡಿ ಈಗ ಪಕ್ಷ ಅಧಿಕಾರದಲ್ಲಿ ಇಲ್ಲ ಎಂದು ಅಧಿಕಾರ ಇರುವ ಬಿಜೆಪಿ ಕಡೆಗೆ ಹೋಗಿದ್ದಾರೆಂದು ಸುಧಾಕರ್ ವಿರುದ್ದ ಕೈ ನಾಯಕರು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿ ನಂದಿ ಅಂಜಿನಪ್ಪ, ಯಲುವಹಳ್ಳಿ ರಾಮಚಂದ್ರಪ್ಪ, ಗಂಗರೇ ಕಾಲುವೆ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಅನುಸೂಯಮ್ಮ, ಮುಖಂಡರಾದ ಲಾಯರ್ ನಾರಾಯಣಸ್ವಾಮಿ, ಅಡ್ಡಗಲ್ ಶ್ರೀಧರ್, ಮಂಚನಬಲೆ ಇಸ್ಮಾಯಿಲ್, ಸುರೇಶ್, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಮುನೇಗೌಡ, ಚಿಂತಾಮಣಿಯ ಈರಪ್ಪರೆಡ್ಡಿ, ಅಂತಾವುಲ್ಲಾ ಸೇರಿದಂತೆ ಮತ್ತಿತರರು ಇದ್ದರು.