Advertisement

ಮತ ಎಣಿಕೆ: ಕುತೂಹಲಕ್ಕೆ ಇಂದು ತೆರೆ

07:29 AM May 23, 2019 | Team Udayavani |

ಬಾಗಲಕೋಟೆ: ಲೋಕಸಭೆ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಜಿಲ್ಲೆಯ ಜನರಿಗೆ ಹಾಗೂ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳಿಗೆ ಗುರುವಾರ ಮಧ್ಯಾಹ್ನದ ಹೊತ್ತಿಗೆ ಕುತೂಹಲಕ್ಕೆ ತೆರೆ ಬೀಳಲಿದೆ.

Advertisement

ಹೌದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಟ್ಟು 14 ಜನ ಅಭ್ಯರ್ಥಿಗಳು ಕಣದಲ್ಲಿದ್ದು, ಬಿಜೆಪಿ- ಕಾಂಗ್ರೆಸ್‌ ನೇರ ಪೈಪೋಟಿ ಎದುರಿಸಿದ್ದವು. ಅಲ್ಲದೇ ಈ ಬಾರಿ ಬಾದಾಮಿ ಕ್ಷೇತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿರುವ ಕಾರಣ, ಕಾಂಗ್ರೆಸ್‌ ಕೂಡ, ಗೆಲುವಿನ ವಿಶ್ವಾಸ ಬೆಟ್ಟದಷ್ಟು ಇಟ್ಟುಕೊಂಡಿದೆ.

ಅಲೆಯೋ- ಅದೃಷ್ಟವೋ: ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, ಕಳೆದ 2004ರಿಂದ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಮೂರು ಅವಧಿಯಲ್ಲೂ ಒಂದೊಂದು ಅಲೆಯಲ್ಲಿ ಗೆದ್ದು ಬಂದಿದ್ದಾರೆ ಎಂಬ ಮಾತು ಅವರ ಬೆನ್ನಿಗಿದೆ. ಈ ಬಾರಿಯೂ ಮೋದಿಯ ಅಲೆಯಲ್ಲಿ 4ನೇ ಬಾರಿ ಗೆದ್ದು, ಲೋಕಸಭೆ ಪ್ರವೇಶಿಸುವ ಹುಮ್ಮಸ್ಸಿನಲ್ಲಿ ಬಿಜೆಪಿಯ ಗದ್ದಿಗೌಡರಿದ್ದರೆ, ಸತತ 3 ಬಾರಿ ಸೋಲಿನ ಕಹಿ ಅನುಭವ ಬದಿಗಿಟ್ಟು, ಮೊದಲ ಪ್ರಯತ್ನದಲ್ಲೇ ಲೋಕಸಭೆ ಕ್ಷೇತ್ರ ಗೆಲ್ಲಬೇಕೆಂಬ ಅದೃಷ್ಟ ಪರೀಕ್ಷೆಯಲ್ಲಿ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಇದ್ದಾರೆ.

ಬಿಜೆಪಿಯ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ, ಮೂರು ಬಾರಿ ಗೆದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಯಾವ ಕೆಲಸವೂ ಮಾಡಿಲ್ಲ. ಕ್ಷೇತ್ರದ ಜನರಿಗೆ ಐದು ವರ್ಷಕ್ಕೊಮ್ಮೆ ಮುಖ ತೋರಿಸುತ್ತಾರೆ ಎಂದು ಕಾಂಗ್ರೆಸ್‌ ಪ್ರಚಾರ ನಡೆಸಿದ್ದರೆ, ಬಿಜೆಪಿ ಕೂಡ ಪ್ರಧಾನಿ ನರೇಂದ್ರ ಅವರ ಕಾರ್ಯವೈಖರಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮತ್ತು ಅವರ ಪತಿಯ ನಡವಳಿಕೆ ಕುರಿತ ಅಂಶಗಳನ್ನು ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು.

Advertisement

ಸತತ ಮೂರು ಬಾರಿ ರಡ್ಡಿ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದ ಕಾಂಗ್ರೆಸ್‌, ಈ ಬಾರಿ ಲಿಂಗಾಯತ, ಅದರಲ್ಲೂ ರಾಜ್ಯದಲ್ಲೇ ಏಕೈಕ ಮಹಿಳಾ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾಗಿ ಪ್ರಚಾರ ಪಡೆದಿತ್ತು. ಇನ್ನು ಪುಣ್ಯಕೋಟಿ ಗೋವಿನ ಕಥೆಯಂತಿರುವ ಪಿ.ಸಿ. ಗದ್ದಿಗೌಡರಿಗೆ ಎಲ್ಲಾ ಪಕ್ಷದಲ್ಲೂ ಸಮಾನ ಮನಸ್ಕರರು ಹಾಗೂ ಸ್ನೇಹಿತ ಬಳಗವಿದ್ದು, ಅದನ್ನೇ ಒಳ ಹೊಡೆತ ನೀಡಲು, ಈ ಬಾರಿಯೂ ಅವರನ್ನೇ ಅಭ್ಯರ್ಥಿಯನ್ನಾಗಿ ಬಿಜೆಪಿ ಮಾಡಿತ್ತು. ಈ ಬಾರಿ ಒಂದೆಡೆ ಅಲೆಯ ಮಾತಿದ್ದರೆ, ಇನ್ನೊಂದೆಡೆ ಜಾತಿಯ ಅಸ್ತ್ರ ಹೆಚ್ಚು ಗುಪ್ತಗಾಮಿನಿಯಂತೆ ಕೆಲಸ ಮಾಡಿತ್ತು.

ಯಾರು ಆಗ್ತಾರೇ 17ನೇ ಸಂಸದ: ಕಳೆದ ಏಪ್ರಿಲ್ 23ರಂದು ಮತದಾನ ಮುಗಿದಿದ್ದು, ಅಲ್ಲಿಂದ ಬರೋಬ್ಬರಿ ಒಂದು ತಿಂಗಳವರೆಗೆ ಕುಳಿತಲ್ಲಿ, ನಿಂತಲ್ಲಿ ಯಾರು ಗೆಲ್ಲುತ್ತಾರೆ, ಯಾವ ಕ್ಷೇತ್ರದಲ್ಲಿ ಯಾರು ಎಷ್ಟು ಲೀಡ್‌ ಪಡೆಯಬಹುದೆಂಬ ರಾಜಕೀಯ ಚರ್ಚೆಗಳೇ ನಿರಂತರ ನಡೆದಿದ್ದವು. ಮೇ 23ರ ಗುರುವಾರ ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲೆಯ ಜನರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಬಾಗಲಕೋಟೆ, ಹುನಗುಂದ, ಬಾದಾಮಿ, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರಗಳು ಒಳಗೊಂಡಿದ್ದು, ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ 17ನೇ ಸಂಸದರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ತೀವ್ರ ಕುತೂಹಲದಲ್ಲಿ ಜನರಿದ್ದಾರೆ.

ಯಾರಿಗೆ ಗುರುವಾರ ಬಲ: ಫಲಿತಾಂಶ ಬರುವ ಮುನ್ನವೇ ಅಭ್ಯರ್ಥಿಗಳ ಸಹಿತ, ರಾಜಕೀಯ ಪಕ್ಷಗಳು, ಬೆಟ್ಟಿಂಗ್‌ ಕಟ್ಟಿದ ಹಲವರು ಇಬ್ಬರು ಅಭ್ಯರ್ಥಿಗಳ ಗುರುಬಲದ ಬಗ್ಗೆಯೂ ಪರೀಕ್ಷೆ ಮಾಡಿಸಿದ್ದರು ಎನ್ನಲಾಗಿದೆ. ನಾಮಪತ್ರ ಸಲ್ಲಿಸಲು ಏ.4 (ಗುರುವಾರ) ಕೊನೆ ದಿನವಿದ್ದು, ಮತದಾನ ಏ.23 ಮಂಗಳವಾರವಿತ್ತು. ಫಲಿತಾಂಶ ಮೇ 23ರ ಗುರುವಾರ ಹೊರ ಬೀಳುತ್ತಿದೆ. ಹೀಗಾಗಿ ಗುರುವಾರದ ಗುರುಬಲ ಯಾವ ಅಭ್ಯರ್ಥಿಗೆ ಗುರುಬಲವಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ಒಟ್ಟಾರೆ, ಒಂದು ತಿಂಗಳಿಂದ ತೀವ್ರ ಕುತೂಹಲದಿಂದ ಕಾಯುತ್ತಿದ್ದ ಜನರಿಗೆ ಮೇ 23ರ ಗುರುವಾರ ಫಲಿತಾಂಶ ಉತ್ತರ ಕೊಡಲಿದೆ. ಯಾರಿಗೆ ಅಲೆಯ ಬಲ ಅಥವಾ ಹೊಸ ಪ್ರಯತ್ನದಲ್ಲೇ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ ಅವರಿಗೆ ಅದೃಷ್ಟ ಕೈ ಹಿಡಿಯುತ್ತಾ ಎಂಬ ತುಕೂಹಲಕ್ಕೆ ತೆರೆ ಬೀಳಲಿದೆ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next