ನರಗುಂದ: ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ತನ್ನ ತತ್ವ, ಸಿದ್ಧಾಂತಗಳಡಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕಾದರೆ ವಿಧಾನ ಪರಿಷತ್ ನಲ್ಲಿ ಸ್ಪಷ್ಟ ಬಹುಮತ ಬೇಕು. ಅಂತಹ ರೈತಪರ ಆಡಳಿತಕ್ಕೆ ಪರಿಷತ್‌ನಲ್ಲಿ ಬಿಜೆಪಿ ಬಲಪಡಿಸಲು ಕೈಜೋಡಿಸಬೇಕೆಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮತದಾರರಲ್ಲಿ ಮನವಿ ಮಾಡಿದರು.
ಗುರುವಾರ ತಮ್ಮ ಗೃಹ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ ಪರ ಪ್ರಚಾರಾರ್ಥ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಪಂ, ಪುರಸಭೆ ಮತದಾರರು, ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಸಚಿವರು ಮಾತನಾಡಿದರು.
ಪ್ರಸಕ್ತ ಚುನಾವಣೆಯ 25 ಸ್ಥಾನಗಳಲ್ಲಿ ಕನಿಷ್ಟ 15 ಸ್ಥಾನಗಳಲ್ಲಿ ನಾವು ಗೆಲುವು ಸಾ ಧಿಸಬೇಕಿದೆ. ಅಂದಾಗ ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಮೇಲ್ಮನೆಯಲ್ಲಿ ಬಹುಮತದೊಂದಿಗೆ ಅಂಗೀಕಾರ ಕೈಗೊಳ್ಳಲು ಸಹಕಾರಿಯಾಗುತ್ತದೆ. ಸಜ್ಜನ ರಾಜಕಾರಣಿ ಪ್ರದೀಪ ಶೆಟ್ಟರ ಅವರಿಗೆ ತಮ್ಮ ಬೆಂಬಲದ ಆಶೀರ್ವಾದ ಬೇಕು ಎಂದು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಇದೊಂದು ಪ್ರತಿಷ್ಠಿತ ಚುನಾವಣೆಯಾಗಿದೆ. ಮತ ಹಾಕುವ ಸಂದರ್ಭದಲ್ಲಿ ನಿಮ್ಮ ಗ್ರಾಮಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏನು ಸೌಲಭ್ಯ ನೀಡಿವೆ. ಏನೆಲ್ಲಾ ಸುಧಾರಣೆಗಳಾಗಿವೆ ಎಂಬುದನ್ನು ಮತದಾರರು ಆಲೋಚಿಸಬೇಕು. ಪ್ರತಿ ಹಳ್ಳಿಯಲ್ಲಿ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರು, ಪ್ರಮುಖ ಯೋಜನೆಗಳು ನಮ್ಮ ಸರ್ಕಾರಗಳ ಸಾಧನೆಯಾಗಿದೆ ಎಂದು ಹೇಳಿದರು.
ಅಭ್ಯರ್ಥಿ ಪ್ರದೀಪ ಶೆಟ್ಟರ ಮಾತನಾಡಿ, ಸರ್ಕಾರದ ಮಹತ್ವದ ಯೋಜನೆಗಳ ವಿವರಣೆ ನೀಡಿ, ನನಗೆ ಆಶೀರ್ವಾದ ಮಾಡುವ ಮೂಲಕಪರಿಷತ್‌ನಲ್ಲಿ ನಮ್ಮ ಪಕ್ಷಕ್ಕೆ ಬಲಪಡಿಸಬೇಕೆಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಎಂ.ಎಸ್.ಕರಿಗೌಡ್ರ ಮಾತನಾಡಿದರು. ಬಿಜೆಪಿ ನರಗುಂದ ಮಂಡಲ ಅಧ್ಯಕ್ಷ ಗುರಪ್ಪ ಆದೆಪ್ಪನವರ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರ.ಕಾ.ಮಹೇಶ ಟೆಂಗಿನಕಾಯಿ, ಜಿಲ್ಲಾ ಪ್ರ. ಕಾ.ಚಂದ್ರಶೇಖರ ದಂಡಿನ, ಮುತ್ತಣ್ಣ ಜಂಗಣ್ಣವರ, ನೀಲಪ್ಪಗೌಡ ದಾನಪ್ಪಗೌಡ್ರ, ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ವಿ.ಎಸ್ .ಹಿರೇಮಠ, ಎಂ.ಎಸ್.ಪಾಟೀಲ, ಎ.ಎಂ.ಹುಡೇದ, ಬಿ.ಬಿ.ಐನಾಪೂರ, ಬಾಬುಗೌಡ ತಿಮ್ಮನಗೌಡ್ರ, ಎಸ್.ಬಿ.ಕರಿಗೌಡ್ರ, ರುದ್ರಗೌಡ ಆಡೂರ, ಎನ್. ಕೆ.ಸೋಮಾಪೂರ, ಪ್ರಕಾಶಗೌಡ ತಿರಕನಗೌಡ್ರ ಮುಂತಾದವರು ಹಾಜರಿದ್ದರು.
ರಾಜ್ಯದ ರಸ್ತೆಗಳು ಬಹಳಷ್ಟು ಹಾಳಾಗಿವೆ. ಹಿಂದಿನ ಲೋಕೋಪಯೋಗಿ ಸಚಿವರು ಇಟ್ಟ ಬೇಡಿಕೆಯಾದ 3,600 ಕೋಟಿ ರೂ.ಅನುದಾನ ಒದಗಿಸುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಗದಗ ಮತ್ತು ನರಗುಂದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ರಾಜ್ಯದ ಎಲ್ಲ ರಸ್ತೆಗಳ ಸುಧಾರಣೆಯ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಹಂತ ಹಂತವಾಗಿ ಈಡೇರಿಸಲಾಗುವುದು.
ಸಿ.ಸಿ.ಪಾಟೀಲ,
ಲೋಕೋಪಯೋಗಿ ಸಚಿವರು