ಚಾಮರಾಜನಗರ: ಯಳಂದೂರು ತಾಲೂಕಿನ ಅಂಬಳೆ ಅಂಬೇಡ್ಕರ್ ಬಡಾವಣೆಗೆ ರಸ್ತೆ, ಸಾರಿಗೆ, ನ್ಯಾಯ ಬೆಲೆ ಅಂಗಡಿ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲದಿದ್ದರೆ ಏ.18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಚುನಾವಣಾ ತಹಶೀಲ್ದಾರ್ ನಂದೀಶ್ ಅವರಿಗೆ ಬಡಾವಣೆಯ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು. ಅಂಬಳೆ ಅಂಬೇಡ್ಕರ್ ಬಡಾವಣೆಯಿಂದ ಯಳಂದೂರಿಗೆ ಹೋಗುವ ರಸ್ತೆಯ ಕಾಮಗಾರಿಯ ನಡೆಯುತ್ತಿದ್ದು, ಬಡಾವಣೆಯಿಂದ ವೈ.ಕೆ.ಮೋಳೆ ಮಾರ್ಗವಾಗಿ ಯಳಂದೂರಿಗೆ ಹೋಗುವ ರಸ್ತೆ ಹಾಗೂ ಗ್ರಾಮದ ವೀರಶೈವ ಬೀದಿಯಿಂದ ಯಳಂದೂರಿಗೆ ಹೋಗುವ ರಸ್ತೆ ಕಾಮಗಾರಿಯನ್ನು 6 ತಿಂಗಳಿನಿಂದ ಏಕಾಏಕಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಪಂ ಅಧ್ಯಕ್ಷರು, ಪಂಚಾಯಿತಿ ಅಭಿವೃದಿ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಸ್ವಾತಂತ್ರ್ಯ ಬಂದು 72 ವರ್ಷಗಳೇ ಕಳೆದರೂ ನಮ್ಮ ಗ್ರಾಮ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದೆ. ಗ್ರಾಮದಿಂದ ಯಳಂದೂರಿಗೆ ಸುಮಾರು 4 ಕಿ.ಮೀ.ದೂರವಿದ್ದು, ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸುಮಾರು 50 ದಿಂದ 100 ಇದ್ದು, ಇದರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಚಾಮರಾ ಜನಗರ, ಕೊಳ್ಳೇಗಾಲದ ಶಾಲಾ, ಕಾಲೇಜುಗಳಿಗೆ ವ್ಯಾಸಂಗ ಮಾಡುತ್ತಿರುವರಿಂದ ಪ್ರತಿ ದಿನಯಳಂದೂರಿಗೆ ನಡೆದುಕೊಂಡು ಹೋಗಿ ಪ್ರಯಾಣ ಮಾಡಬೇಕಾಗಿದೆ. ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ತುಂಬಾ ಸಮಸ್ಯೆಯಾಗಿದೆ. ಆದರಿಂದ ಕೂಡಲೇ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಅಂಬಳೆ ಗ್ರಾಮದಲ್ಲಿ 2 ನ್ಯಾಯ ಬೆಲೆ ಅಂಗಡಿಗಳಿದ್ದು, ಅಂಬಳೆ ಅಂಬೇಡ್ಕರ್ ಬಡಾವಣೆ 1.5 ಕಿ.ಮೀ ದೂರದಲ್ಲಿ ಪ್ರತ್ಯೇಕವಾಗಿರುತ್ತದೆ. ನಾವುಗಳು ಪ್ರತಿ ತಿಂಗಳ ಪಡಿತರ ಪಡೆಯಲು ಅಂಬಳೆಗೆ, ಒಂದು ದಿನ ಬಯೋಮೆಟ್ರಿಕ್ ಹಾಕಲು ಮತ್ತೂಂದು ಪಡಿತರ ಪಡೆಯಲು ಎರಡು ದಿನ ಕೂಲಿ ಕೆಲಸ ಬಿಟ್ಟು ಹೋಗಬೇಕಾಗಿರುತ್ತದೆ.
ಆದ್ದರಿಂದ ಅಂಬಳೆ ಗ್ರಾಮದಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಠ ಜಾತಿಯ 250ಕ್ಕೂ ಹೆಚ್ಚು ಕುಟುಂಬವನ್ನು ಹೊಂದಿರುವ ಅಂಬೇಡ್ಕರ್ ಬಡಾವಣೆಯಲ್ಲಿ ಸುಮಾರು 250 ರಿಂದ 300 ಪಡಿತರ ಕಾರ್ಡ್‌ಗಳಿದ್ದು, ಪ್ರತ್ಯೇಕವಾಗಿ ಅಂಬೇಡ್ಕರ್ ಬಡಾವಣೆಗೆ ನ್ಯಾಯ ಬೆಲೆ ಅಂಗಡಿ ಮಂಜೂರು ಮಾಡಿಕೊಡುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಮೇಲಿನ ಮೂರು ಸಮಸ್ಯೆಗಳನ್ನು ಈಡೇರಿಸದಿದ್ದಲ್ಲಿ ಏ. 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಅಂಬಳೆ ಅಂಬೇಡ್ಕರ್ ಬಡಾವಣೆಯ ಯಜ ಮಾನರು, ಮಹಿಳಾ ಸ್ವಸಹಾಯ ಸಂಘ, ಅಂಬೇಡ್ಕರ್ ಯುವಜನ ಸಂಘ ಪದಾಧಿಕಾರಿಗಳು, ನಿವಾಸಿಗಳು, ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ. ಬಡಾವಣೆಯ ಮುಖಂಡರಾದ ಎಸ್.ನಂಜುಂಡಸ್ವಾಮಿ, ನಾಗಯ್ಯ, ಪಿ. ಹೊನ್ನಯ್ಯ, ಆರ್.ಮಹೇಶ್, ಎಸ್.ಶಂಕರಪ್ಪ, ಚಾಮರಾಜ ಹಾಜರಿದ್ದರು.