ಹುಣಸೂರು: ಅಂಬೇಡ್ಕರ್ ಆಶಯದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಬಲ ಅಸ್ತ್ರವಾಗಿದ್ದು, ದಸಂಸ ದಲಿತ ಕಾಲೋನಿ ಮತ್ತು ಗಿರಿಜನ ಹಾಡಿಗಳಲ್ಲಿ ಮತದಾನ ಕರಪತ್ರ ವಿತರಿಸಿ ಜಾಗೃತಿ ಮೂಡಿಸಲಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಸ್ವಾಮಿ ತಿಳಿಸಿದರು.
ಮತದಾನದ ಜಾಗೃತಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಗ್ಧ ಮತ್ತು ಅನಕ್ಷರಸ್ಥ ದಲಿತ ಮತ್ತು ಗಿರಿಜನರು ಮತದಾನದ ಮಹತ್ವವನ್ನೇ ತಿಳಿಯದೇ ಮತಗಟ್ಟೆ ಬಳಿಯೇ ಹೋಗುತ್ತಿಲ್ಲ. ಅಂಬೇಡ್ಕರ್ ಆಶಯದ ಸಮಾಜ ಇದಲ್ಲ.
ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಸಿಕ್ಕಿರುವ ಮೊದಲ ಹಕ್ಕಾಗಿದೆ. ಈ ನಿಟ್ಟಿನಲ್ಲಿ ಸಮಿತಿಯು ಚುನಾವಣಾ ದಿನದವರೆಗೂ ತಾಲೂಕಿನ ಪ್ರತಿ ಹಳ್ಳಿಯಲ್ಲೂ ಸಂಚರಿಸಿ ಮತದಾನದ ಮಹತ್ವವನ್ನು ಸಾರುವ ಕರಪತ್ರಗಳನ್ನು ವಿತರಿಸಿ ಮತದಾನಕ್ಕೆ ಮನವೊಲಿಸುವ ಕಾರ್ಯ ಮಾಡಲಿದೆ ಎಂದು ಹೇಳಿದರು.
ಬಹಿಷ್ಕಾರ ಪರಿಹಾರವಲ್ಲ: ಗಿರಿಜನ ಮುಖಂಡ ಜೆ.ಟಿ.ರಾಜಪ್ಪ ಮಾತನಾಡಿ, ಗಿರಿಜನ ಹಾಡಿಗಳಲ್ಲಿ ಕೆಲ ಸ್ವಯಂಸೇವಾ ಸಂಸ್ಥೆಗಳ ಚಿತಾವಣೆಯಿಂದ ಮತದಾನ ಬಹಿಷ್ಕಾರದಂತಹ ಘೋಷಣೆಗಳು ಕೇಳಿ ಬರುತ್ತಿವೆ. ಮತದಾನ ಬಹಿಷ್ಕಾರದಿಂದ ಸಮಸ್ಯೆ ಬಗೆಹರಿಯಲ್ಲ. ಬದಲಿಗೆ ಒಂದಾಗಿ ಹೋರಾಟ ನಡೆಸಿ ಸೌಲಭ್ಯ ಪಡೆದುಕೊಳ್ಳಬೇಕು. ಮತದಾನ ಬಹಿಷ್ಕಾರದಂತಹ ಕ್ರಮಗಳಿಗೆ ಮುಂದಾಗುವುದು ಬೇಡ ಎಂದು ಮನವಿ ನೀಡಿದರು.
ದಲಿತ ಮುಖಂಡ ದೇವರಾಜ್ ಮಾತನಾಡಿ, ಮೇ 10ರವೆರೆಗೂ ಸಮಿತಿ ಸದಸ್ಯರು ಪ್ರತಿ ಗ್ರಾಮಗಳಲ್ಲೂ ಸಂಚರಿಸಿ ಜನರನ್ನು ಮತದಾನ ಮಾಡುವಂತೆ ಜಾಗೃತಿಗೊಳಿಸುತ್ತಾರೆ ಎಂದರು. ನೇರಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಅಯ್ಯನಕೆರೆ ಹಾಡಿಯ ಶಿವಣ್ಣ, ದಲಿತ ಮುಖಂಡರಾದ ರಮೇಶ್, ಕಾಂತರಾಜು ಇತರರಿದ್ದರು.