Advertisement

ಗೆಲುವಿಗಾಗಿ ಸಂಪುಟ ಮೊಕ್ಕಾಂ, ಹಣ ಬಳಕೆ

12:36 PM Mar 26, 2017 | Team Udayavani |

ಮೈಸೂರು: ಪ್ರಾಮಾಣಿಕ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್‌ ಅವರನ್ನು ವಿನಾಕಾರಣ ಮಂತ್ರಿ ಮಂಡಲದಿಂದ ಕೈಬಿಟ್ಟು ಅಪಮಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಮಂತ್ರಿಗಳನ್ನು ದಲಿತ ಕಾಲೋನಿಗಳಿಗೆ ಬಿಟ್ಟುಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪಮನವಿ ಮಾಡಿದರು.

Advertisement

ಉಪ ಚುನಾವಣೆ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ದೇಬೂರು, ಶಿರಮಳ್ಳಿ, ಕುರಿಹುಂಡಿ, ಚಂದ್ರವಾಡಿ, ಹಾಡ್ಯ, ಹಂಚೀಪುರ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಪರ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು.

ಚುನಾವಣಾ ಬಿಸಿ ಇನ್ನೂ ಶುರುವಾಗಿಲ್ಲ. ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಸಿದ್ದರಾಮಯ್ಯ ಮತ್ತವರ ಇಡೀ ಸಂಪುಟವೇ ಎರಡೂ ಕ್ಷೇತ್ರಗಳಲ್ಲಿ ಠಿಕಾಣಿ ಹೂಡುತ್ತಾರೆ. ಹಣಬಲ, ಜಾತಿಯ ವಿಷಬೀಜ ಬಿತ್ತಿ ಗೆಲ್ಲಬಹುದು ಎಂದು ಹಿಟ್ಲರ್‌ನನ್ನೂ ಮೀರಿಸುವ ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಯಾರು ಬಂದರೂ ಹಾರಹಾಕಿ, ಹಾಲು ಕುಡಿಸಿ ಕಳುಹಿಸುವುದರಿಂದ, ಹೇಗಾದ್ರು ನಡೆಯುತ್ತದೆ ಅಂದು ಕೊಂಡಿದ್ದಾರೆ. ಬೆಂಕಿ ಮಹದೇವುಗೆ ಕಪಾಳಕ್ಕೆ ಹೊಡೆದು ಅಪಮಾನ ಮಾಡಿದ್ದ ಸಿದ್ದರಾಮಯ್ಯ ಈಗ ಅನುಕಂಪದ ಮೇಲೆ ಮತಕೇಳಲು ಬರುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು 2018ರ ಚುನಾವಣೆಯಲ್ಲಿ ಈಗಲ್ಲ ಎನ್ನುವ ಮಾತುಗಳೂ ತ‌ನ್ನ ಕಿವಿಗೆ ಬಿದ್ದಿವೆ.

ಹಿರಿಯ ದಲಿತ ನಾಯಕರಾದ ಪ್ರಸಾದ್‌ ಅವರು ನಮ್ಮ ಜತೆ ಬಂದಿರುವಾಗ ಅವರನ್ನು ಗೆಲ್ಲಿಸದಿದ್ದರೆ, ರಾಜ್ಯದಲ್ಲಿ ತಾನು ಯಾವ ರೀತಿ ತಲೆ ಎತ್ತಿಕೊಂಡು ಓಡಾಡಲಿ, ಸಣ್ಣಪುಟ್ಟ ಬೇಸರಗಳನ್ನು ಬದಿಗಿಟ್ಟು ಪ್ರಸಾದ್‌ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

Advertisement

ದೇವರೇ ಗತಿ ಆ್ಯಂಡ್‌ ಕಂಪನಿಯ ಮೂರ್‍ನಾಲ್ಕು ಜನ ಮಂತ್ರಿಗಳು ಯಾವುದೇ ಯೋಜನೆಯ ಶೇ. 25ರಷ್ಟು ಹಣವನ್ನು ಹಂಚಿಕೊಳ್ಳುತ್ತಿ ರುವುದ ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕತೆ ಹಳೆಕಲ್ಲು-ಹೊಸ ಬಿಲ್‌ ಎಂಬಂತಾಗಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಲೇವಡಿ ಮಾಡಿದರು.

ರಾಜ್ಯದ ಆರೂವರೆ ಕೋಟಿ ಜನರ ಯಜಮಾನನಾಗಿ ಬೆಳಗ್ಗೆ 11ಗಂಟೆಗೆ ಎದ್ದರೆ ರಾಜ್ಯ ಆಳುವುದಕ್ಕಾಗುತ್ತಾ ಎಂದು ಪ್ರಶ್ನಿಸಿದ ಅವರು, ವಿದೇಶ ಪ್ರವಾಸ ಮುಗಿಸಿಬಂದರೂ ಪ್ರಧಾನಿ ಮೋದಿ ಅವರು ಬೆಳಗ್ಗೆ 9ಗಂಟೆಗೆ ಕಚೇರಿಗೆ ಬರುತ್ತಾರೆ. ಆಡಳಿತ ಮಾಡಲು ನಿಮಗೆ ಪುರುಸೊತ್ತೆಲ್ಲಿದೆ ಎಂದು ಜರಿದರು.

ಶ್ರೀನಿವಾಸಪ್ರಸಾದ್‌ ಬೆಳೆಸಿದ ಬಚ್ಚಾ ಧ್ರುವ ನಾರಾಯಣ್‌. ಮಾತ ನಾಡುವಾಗ ಇತಿಮಿತಿ ಇರಬೇಕು, ಮೈಕು ಸಿಕ್ಕಿತೆಂದಾಕ್ಷಣ ಪ್ರಸಾದ್‌ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದಲ್ಲ ಎಂದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಉಪ ಚುನಾವಣೆಯ ಕಾರಣಕ್ಕೆ ವಿವಿಧ ಅಭಿವೃದ್ಧಿ ನಿಗಮಗಳ ಸಾಲದ ಹೆಸರಿನಲ್ಲಿ ನಂಜನಗೂಡಿನ ಜನರ ಮೂಗಿಗೆ ತುಪ್ಪ ಸವರಿದ್ದಾರೆ.

ಸಿದ್ದರಾಮಯ್ಯ ಅವರಿಗೆ ನಿಜವಾದ ಜನಪರ ಕಾಳಜಿ ಇದ್ದರೆ, ಈ ಸಾಲ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲಿ ಎಂದು ಸವಾಲು ಹಾಕಿದರು. ಈ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ಚಿಹ್ನೆ ಕಮಲ ಆಗಿದ್ದರೂ ಕಾಂಗ್ರೆಸ್‌ನವರು ಪ್ರಸಾದ್‌ ಅವರ ಚಿಹ್ನೆ ಬದಲಿಸಿ ಅಪಪ್ರಚಾರ ಮಾಡುತ್ತಿದ್ದಾರೆ.

ಅಂಥದ್ದಕ್ಕೆಲ್ಲ ಕಿವಿಗೊಡದೆ ಪ್ರಸಾದ್‌ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಪ್ರಚಾರದ ವೇಳೆ ಮಾಜಿ ಸಚಿವ ವಿ.ಸೋಮಣ್ಣ, ರೇವುನಾಯಕ ಬೆಳಮಗಿ, ರುದ್ರಪ್ಪ ಲಮಾಣಿ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ, ಬೆಂಕಿ ಮಹದೇವು ಅಳಿಯ ಜಯದೇವ್‌ ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next