ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಟ್ಟದ ಅಂತರ್ ವಿ.ವಿ. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆತಿಥೇಯ ಮಂಗಳೂರು ವಿ.ವಿ. ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಶುಕ್ರವಾರ ನಡೆದ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ಕುರುಕ್ಷೇತ್ರ ವಿ.ವಿ. ತಂಡವು ಭಾರತೀ ವಿದ್ಯಾಪೀಠ ವಿ.ವಿ. ತಂಡದ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿತು. ಅನಂತರ ನಡೆದ ಯುನಿವರ್ಸಿಟಿ ಆಫ್ ಕ್ಯಾಲಿಕಟ್ ಮತ್ತು ಎಂಜಿಕೆವಿ ವಾರಣಾಸಿ ತಂಡಗಳ ನಡುವಿನ ಪಂದ್ಯದಲ್ಲಿ ಕ್ಯಾಲಿಕಟ್ ವಿ.ವಿ. ತಂಡ 3-1 ಅಂತರದಲ್ಲಿ ಜಯ ದಾಖಲಿಸಿಕೊಂಡಿತು.
3ನೇ ಪಂದ್ಯದಲ್ಲಿ ಎಸ್‌ಆರ್‌ಎಂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ತಂಡವು ಡಾ| ಬಿಎಎಂ ಯೂನಿವರ್ಸಿಟಿ ಔರಂಗಾಬಾದ್ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿತು. ಕೊನೆಯ ಪಂದ್ಯದಲ್ಲಿ ಮಂಗಳೂರು ವಿ.ವಿ. ತಂಡವು ಮದ್ರಾಸ್ ವಿ.ವಿ. ತಂಡದ ವಿರುದ್ಧ 3-1 ಅಂತರದ ಜಯ ದಾಖಲಿಸಿತು.
ಮಂಗಳೂರು ತಂಡವು ಮೊದಲೆರಡು ಸೆಟ್ ಜಯ ಸಾಧಿಸಿದ್ದು, 3ನೇ ಸೆಟ್‌ನಲ್ಲಿ ಮದ್ರಾಸ್ ವಿ.ವಿ. ತಂಡ ಜಯ ಕಂಡು ಕೊಂಡಿತು. 4ನೇ ಸೆಟ್‌ನಲ್ಲಿ ಮಂಗಳೂರು 35-33 ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟದ ಜತೆಗೆ ಸಮಾರೋಪ ಸಮಾರಂಭವೂ ನಡೆಯಲಿದೆ.