Advertisement

ನಿವೇಶನ ಒದಗಿಸಲು ಕಾಗೋಡು ತಿಮ್ಮಪ್ಪ ಸೂಚನೆ

04:10 PM Apr 18, 2017 | Team Udayavani |

ಮಡಿಕೇರಿ: ಜಿಲ್ಲೆಯಲ್ಲಿ ನಿವೇಶನ ಹಾಗೂ ವಸತಿ ರಹಿತ ಕುಟುಂಬಗಳನ್ನು ಗುರ್ತಿಸಿ ಒಂದು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ.   

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ರವಿವಾರ ನಡೆದ ಸಮಾ ಲೋಚನಾ ಸಭೆಯಲ್ಲಿ ಸಚಿವರು ಮಾತನಾಡಿದರು.  ಆಯಾಯ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಹಾಗೂ ವಸತಿ ರಹಿತರಿಂದ ಅರ್ಜಿ ಪಡೆದು ನಿವೇಶನ ಹಂಚಿಕೆ ಮಾಡಲು ಮುಂದಾಗಬೇಕು. ಈ ಕೆಲಸ ಒಂದು ತಿಂಗಳೊಳಗೆ ಆಗಲೇಬೇಕು. ಇಲ್ಲದಿದ್ದಲ್ಲಿ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಗೋಡು ತಿಮ್ಮಪ್ಪ ಎಚ್ಚರಿಕೆ ನೀಡಿದರು. 

ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡಬೇಕು. ಅಕ್ರಮ-ಸಕ್ರಮ ಸಮಿತಿಯಲ್ಲಿ ಇಬ್ಬರು ಸದಸ್ಯರು ಹಾಜರಾದರೆ ಸಾಕು, ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಸದಸ್ಯರು ಹಾಜರಾಗದಿದ್ದರೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರುವಂತೆ ತಹಶೀಲ್ದಾರರಿಗೆ ಕಂದಾಯ ಸಚಿವರು ನಿರ್ದೇಶನ ನೀಡಿದರು. 

ಅಕ್ರಮ ಸಕ್ರಮ ಯೋಜನೆಯಡಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಈ ತಾಲೂಕಿಗೆ ಹೆಚ್ಚುವರಿ ಸಮಿತಿ ರಚನೆ ಮಾಡಲು ಆದೇಶ ಹೊರಡಿಸಲಾಗುವುದು. ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತುಂಬಾ ವಿಳಂಬ ಮಾಡಲಾಗು ತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಕಂದಾಯ ಇಲಾಖೆಯ ಅರ್ಜಿಗಳು ವಿಳಂಬವಾಗದಂತೆ ನೋಡಿಕೊಳ್ಳುವುದು ಇಲಾಖೆಯ ಎಲ್ಲ ಹಂತದ ಅಧಿಕಾರಿಗಳ ಜವಾಬ್ದಾರಿ ಯಾಗಿದೆ ಎಂದು ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು. 

ಜಿಲ್ಲೆಯಲ್ಲಿ ಆದಿವಾಸಿಗಳ ಜನಸಂಖ್ಯೆ ಎಷ್ಟು, ಅರಣ್ಯ ಹಕ್ಕು ಕಾಯ್ದೆಯಡಿ ಎಷ್ಟು ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ನೀಡಲಾಗಿದೆ. ನಿವೇಶನ ಹಾಗೂ ಭೂಮಿ ಇಲ್ಲದ ಕುಟುಂಬಗಳು ಎಷ್ಟು? ಈ ಬಗ್ಗೆ ಕೂಡಲೇ ಮಾಹಿತಿಯ ಪಟ್ಟಿ ಒದಗಿಸುವಂತೆ ಸಚಿವರು ಸೂಚನೆ ನೀಡಿದರು. 

Advertisement

ಉಳುಮೆಗೆ ತರಬೇತಿ: ಕೆಲವು ಆದಿವಾಸಿಗಳು ಈಗಾಗಲೇ ನೀಡಲಾಗಿರುವ ಜಮೀನನ್ನು ಮಾರಿ ಕೊಂಡಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಆದಿವಾಸಿಗಳ ಹೆಸರಿನಲ್ಲಿಯೇ ಆರ್‌ಟಿಸಿ ಇದೆ, ಆದರೆ ಉಳುಮೆ ಮಾಡುತ್ತಿಲ್ಲ ಎಂದರು. 

ಆದಿವಾಸಿಗಳ ಹೆಸರಿನಲ್ಲಿರುವ ಭೂಮಿಯನ್ನು ಆದಿವಾಸಿಗಳೇ ಉಳುಮೆ ಮಾಡಬೇಕು. ಕೃಷಿ ಚಟುವಟಿಕೆ ಕೈಗೊಳ್ಳಲು ಎತ್ತುಗಳ ಖರೀದಿಗೆ ಸಹಾಯಧನ ನೀಡಲಾಗುವುದು, ಹಾಗೆಯೇ ಉಳು ಮೆಗೆ ತರಬೇತಿಯನ್ನೂ ಸಹ ನೀಡಲಾಗುವುದು ಎಂದು ಸಚಿವರು ತಿಳಿಸಿದರು. 

ಜಿಲ್ಲೆಯಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿರುವ ದೊಡ್ಡ ದೊಡ್ಡ ಪ್ಲಾಂಟೇಷನ್‌ದಾರರು ಇದ್ದು, ಇಂತಹವರನ್ನು ಗುರ್ತಿಸಿ ಮಾಹಿತಿಯ ಪಟ್ಟಿ ಕೊಡಿ, ಅವಕಾಶವಿದ್ದರೆ ಬಡವರಿಗೆ ಭೂಮಿ ಹಂಚಲು ಪ್ರಯತ್ನಿಸಲಾಗುವುದು ಎಂದರು.   

ವಿಧಾನ ಪರಿಷತ್‌ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಕಂದಾಯ ಭೂಮಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.  

ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರಾದ ಪದ್ಮಿನಿ ಪೊನ್ನಪ್ಪ ಅವರು ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ವಿರಾಜಪೇಟೆ ತಾಲ್ಲೂಕಿಗೂ ಉಪ ಸಮಿತಿ ರಚಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು. 

ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ. ರಮೇಶ್‌, ಪ್ರಭಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌, ಉಪ ವಿಭಾಗಾಧಿಕಾರಿ ಡಾ| ನಂಜುಂಡೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್‌, ಭೂ ದಾಖಲೆಗಳ ಉಪ ನಿರ್ದೇಶಕರು, ತಹಶೀಲ್ದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.   

ಕಂದಾಯ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಾರ್ವಜನಿಕ ಹಿತದೃಷ್ಟಿಯ ಹಲವು ಮನವಿಗಳಿಗೆ ಕೂಡಲೇ ಸ್ಪಂದಿಸುವಂತೆ ಸ್ಥಳದಲ್ಲಿಯೇ ಸೂಚನೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next