ಮಾಸ್ಕೋ: ಕಳೆದ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಈಗಲೂ ಮುಂದುವರಿದಿದೆ. ಯುದ್ಧಭೂಮಿಯಲ್ಲಿ ಉಕ್ರೇನಿಯನ್ ಯಶಸ್ಸು ಪಡೆಯುತ್ತಿರುವ ಸುದ್ದಿಗಳ ನಡುವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ 70 ನೇ ಹುಟ್ಟುಹಬ್ಬವನ್ನು ಯಾವುದೇ ಆಡಂಬರವಿಲ್ಲದೆ ಆಚರಿಸಿದರು.
ಪುಟಿನ್ ಹುಟ್ಟುಹಬ್ಬಕ್ಕೆ ಅವರ ನಿಕಟ ಮಿತ್ರ, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ನೀಡಿದ ಉಡುಗೊರೆ ಇದೀಗ ಸುದ್ದಿ ಮಾಡುತ್ತಿದೆ. ಅದುವೇ ಟ್ರಾಕ್ಟರ್.
ಮಾಧ್ಯಮ ವರದಿಗಳ ಪ್ರಕಾರ, ಶುಕ್ರವಾರ ಉಭಯ ನಾಯಕರು ಪುಟಿನ್ ತವರು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿರುವ ಕಾನ್‌ಸ್ಟಾಂಟಿನ್ ಅರಮನೆಯಲ್ಲಿ ಭೇಟಿಯಾದರು. ಈ ವೇಳೆ ಲುಕಾಶೆಂಕೊ ಅವರು ಬೆಲಾರಸ್ ನಿರ್ಮಿತ ಟ್ರಾಕ್ಟರ್ ನ್ನು ಉಡುಗೊರೆಯಾಗಿ ರಷ್ಯಾದ ಅಧ್ಯಕ್ಷರಿಗೆ ನೀಡಿದರು.
ಇದನ್ನೂ ಓದಿ:ಟಿ20 ವಿಶ್ವಕಪ್ ಗೆ ಭಾರತ ತಂಡದೊಂದಿಗೆ ಹೊರಟ ಇಬ್ಬರು ಎಡಗೈ ವೇಗಿಗಳು
1994 ರಿಂದ ಬೆಲಾರಸನ್ನು ಆಳುತ್ತಿರುವ ಲುಕಾಶೆಂಕೊ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅದೇ ಮಾದರಿಯ ಟ್ರ್ಯಾಕ್ಟರನ್ನು ತನ್ನ ಸ್ವಂತ ತೋಟದಲ್ಲಿ ಬಳಸಿದ್ದೇನೆ ಎಂದು ಹೇಳಿದರು.
ವಿಶೇಷ ಏನೆಂದರೆ ರಷ್ಯಾ-ಉಕ್ರೇನ್ ಯುದ್ಧದ ಆರಂಭಿಕ ಹಂತದಲ್ಲಿ, ಪ್ರತಿರೋಧದ ಸಂಕೇತವಾಗಿ ಉಕ್ರೇನ್ ಟ್ರಾಕ್ಟರನ್ನು ಬಳಸಿತ್ತು. ರಷ್ಯಾದ ಟ್ಯಾಂಕ್‌ಗಳನ್ನು ಎಳೆಯುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.