ಭಾರತದಲ್ಲಿ ಮೊಬೈಲ್ ಫೋನ್‌ಗಳನ್ನು ಅಂಗಡಿಗಳಲ್ಲಿ ಹೆಚ್ಚಾಗಿ ಮಾರಾಟ ಮಾಡುವ ಬ್ರಾಂಡ್‌ಗಳಲ್ಲಿ ವಿವೋ ಸಹ ಪ್ರಮುಖ ಸ್ಥಾನ ಪಡೆದಿದೆ. ಇದು ಹೊರತಂದಿರುವ ಹೊಸ ಮೊಬೈಲ್ ವಿವೋ ವಿ17 ನಾಳೆಯಿಂದ (ಡಿ.17) ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಫೋನ್‌ನ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ..
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಅಂಗಡಿಗಳ ಮೂಲಕ ಮಾರಾಟವಾಗುವ ಮೊಬೈಲ್‌ಗಳಲ್ಲಿ ವಿವೋ ಮತ್ತು ಒಪ್ಪೋ ಮುಂಚೂಣಿಯಲ್ಲಿವೆ. ಈ ಹಿಂದೆ, ಅನೇಕ ಬಾರಿ ಹೇಳಿದಂತೆ ವಿವೋ ಮತ್ತು ಒಪ್ಪೋ ಒಡೆತನ, ಚೀನಾದ “ಬಿಬಿಕೆ ಎಲೆಕ್ಟ್ರಾನಿಕ್ಸ್’ ಎಂಬ ಕಂಪೆನಿಯದ್ದು. ಅತ್ಯುತ್ಛ ದರ್ಜೆಯ ಬ್ರಾಂಡ್ ಆದ ಒನ್‌ಪ್ಲಸ್ ಹಾಗೂ ಆನ್‌ಲೈನ್ ಮಾರಾಟಕ್ಕೆಂದೇ ಮೀಸಲಾದ ರಿಯಲ್‌ಮಿ ಒಡೆತನ ಕೂಡ ಈ ಬಿಬಿಕೆ ಕಂಪೆನಿಯದೇ. ಹಿಂದೂಸ್ತಾನ್ ಲೀವರ್ ಕಂಪೆನಿ ಹೇಗೆ ಬೇರೆ ಬೇರೆ ಹೆಸರಿನಲ್ಲಿ ಸೋಪುಗಳನ್ನು ಮಾರಾಟ ಮಾಡುತ್ತಾ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಿದೆಯೋ ಹಾಗೆ ಬಿಬಿಕೆ ಕೂಡ ನಾಲ್ಕು ಮೊಬೈಲ್ ಬ್ರಾಂಡ್‌ಗಳ ಹೆಸರಿನಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿದೆ.
ಸ್ಪೆಷಲ್ “ವಿ’ ಸರಣಿ: ಸಾಮಾನ್ಯವಾಗಿ ಯಾವುದೇ ಮೊಬೈಲ್ ಅಂಗಡಿಗೆ ಹೋದರೂ ಅಲ್ಲಿ, ವಿವೋ, ಒಪ್ಪೋ ಮೊಬೈಲ್‌ಗಳ ಜಾಹೀರಾತು ಫಲಕಗಳು ಎದ್ದು ಕಾಣುತ್ತವೆ. ಆನ್‌ಲೈನ್‌ನಲ್ಲಿ ಕೊಳ್ಳಲು ಹಿಂಜರಿಯುವ ಭಾರತೀಯ ಗ್ರಾಹಕನ ಮನದಿಂಗಿತ ಅರಿತಿರುವ ಕಂಪನಿ, ಅಂಗಡಿ ಮಾರಾಟಕ್ಕಾಗಿಯೇ ವಿವೋ- ಒಪ್ಪೋ ಬ್ರಾಂಡ್‌ಗಳನ್ನು ಸೃಷ್ಟಿಸಿದೆ. ವಿವೋ ಬ್ರಾಂಡ್‌ನಲ್ಲಿ “ವಿ’ ಸರಣಿಯಲ್ಲಿ ಹೆಚ್ಚು ವೈಶಿಷ್ಟ್ಯಗಳನ್ನು ನೀಡಲಾಗುತ್ತದೆ. ಅಂಥದ್ದೇ ಒಂದು ಹೊಸ ಫೋನ್ ಇದೀಗ ಬಿಡುಗಡೆಯಾಗಿದ್ದು, ನಾಳೆಯಿಂದ (ಡಿಸೆಂಬರ್ 17) ಮಾರಾಟಕ್ಕೆ ಅಂಗಡಿಗಳಲ್ಲಿ ದೊರಕುತ್ತದೆ. ಹಾಗೆಯೇ ಅಮೆಜಾನ್, ಫ್ಲಿಪ್‌ಕಾರ್ಟ್, ಪೇ-ಟಿಎಂ, ಟಾಟಾ ಕ್ಲಿಕ್, ಅಲ್ಲದೇ ವಿವೋ ಇ- ಸ್ಟೋರ್ ಇತ್ಯಾದಿ ಆನ್‌ಲೈನ್ ಸ್ಟೋರ್‌ಗಳಲ್ಲೂ ಲಭ್ಯವಾಗಲಿವೆ. ಇದರ ದರ 22,990 ರೂ. ಒಂದೇ ಆವೃತ್ತಿ ಹೊಂದಿದೆ.
ಅಮೋಲೆಡ್ ಡಿಸ್‌ಪ್ಲೇ: ಈ ಮೊಬೈಲು ಅಮೊಲೆಡ್ ಪರದೆಯನ್ನು ಹೊಂದಿದೆ. ಹೀಗಾಗಿ ಮೊಬೈಲ್‌ನ ಚಿತ್ರ, ವಿಡಿಯೋಗಳು ಶ್ರೀಮಂತವಾಗಿ ಕಾಣುತ್ತವೆ. ಈ ಅಮೊಲೆಡ್‌ಗಾಗಿ ಇ3 ಒಎಲ್‌ಇಡಿ ಹೊಂದಿದೆ. ಇದು ಶೇ. 42ರಷ್ಟು ನೀಲಿ ಬೆಳಕನ್ನು ಸೋಸಿ, ನಿಮ್ಮ ಕಣ್ಣಿಗೆ ಆಯಾಸವಾಗದಂಥ ಬೆಳಕು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಂದಹಾಗೆ, ಪರದೆಯ ವಿಸ್ತೀರ್ಣ 6.44 ಇಂಚು. ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ. ಮುಂದಿನ ಕ್ಯಾಮರಾಕ್ಕೆ ಮೊಬೈಲ್ ಒಳಗಿನಿಂದ ಚಿಮ್ಮುವ ಕ್ಯಾಮರಾ ಫ್ಯಾಷನ್ ಬಹಳ ಬೇಗನೆ ಹಳೆಯದಾಗುತ್ತಿದೆ! ಹಾಗಾಗಿ ಇದರಲ್ಲಿ ಪರದೆಯ ಮೂಲೆಯಲ್ಲಿ ಬರುವ ಪಂಚ್ ಹೋಲ್ ಕ್ಯಾಮರಾ ಅಳವಡಿಸಲಾಗಿದೆ. ಹಾಗಾಗಿ ಇದರಲ್ಲಿ ಯಾವುದೇ ನಾಚ್ ಇಲ್ಲದೇ ಪರದೆ ಪೂರ್ಣ ಚಿತ್ರ ಮೂಡುತ್ತದೆ. ಪರದೆಯ ಮೇಲೆಯೇ ಬೆರಳಚ್ಚು ಸ್ಕ್ಯಾನರ್ ನೀಡಲಾಗಿದೆ.
ಪ್ರೊಸೆಸರ್, ರ್ಯಾಮ್: ಕ್ಯಾಮರಾಕ್ಕೆ ಆದ್ಯತೆ ನೀಡಿರುವ ವಿವೋ, ಈ ಮೊಬೈಲ್‌ಗೆ ಸ್ವಲ್ಪ ಹೆಚ್ಚಿನ ದರವನ್ನೇ ಇಟ್ಟಿದೆ. ಆದರೆ, ಆ ದರಕ್ಕೆ ತಕ್ಕಂಥ ದರ್ಜೆಯ ಪ್ರೊಸೆಸರ್ ನೀಡಿಲ್ಲ. ಇದರಲ್ಲಿ ಸ್ನಾಪ್‌ಡ್ರಾಗನ್ 675 ಪ್ರೊಸೆಸರ್‌ಅನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ 600 ಸರಣಿಯ ಪ್ರೊಸೆಸರ್‌ಅನ್ನು ಮಧ್ಯಮ ದರ್ಜೆಯ ಅಂದರೆ 20,000 ರೂ. ಒಳಗಿನ ಫೋನ್‌ಗಳಿಗೆ ಅಳವಡಿಸಲಾಗುತ್ತದೆ. ವಿವೋ17, 128 ಜಿಬಿ. ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್ ಒಳಗೊಂಡಿದೆ. ಹೆಚ್ಚು ರ್ಯಾಮ್ ಮತ್ತು ಹೆಚ್ಚು ಇನ್‌ಬಿಲ್ಟ್ ಸ್ಟೋರೇಜ್ ಬೇಕೆನ್ನುವವರಿಗೆ ಸೂಕ್ತವಾಗಿದೆ.
ಬ್ಯಾಟರಿ: ಬ್ಯಾಟರಿ ವಿಭಾಗದಲ್ಲಿಯೂ ವಿ17 ನಿರಾಸೆ ಮೂಡಿಸುವುದಿಲ್ಲ. ಇದು 4500 ಎಂ.ಎ.ಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ ವೇಗದ ಚಾರ್ಜರ್ ಸೌಲಭ್ಯ ಸಹ ನೀಡಲಾಗಿದೆ. ಟೈಪ್ ಸಿ ಪೋರ್ಟ್ ನೀಡಲಾಗಿದೆ. ವಿ17 ಒಟ್ಟು ಎರಡು ಬಣ್ಣಗಳಲ್ಲಿ ಲಭ್ಯವಿದೆ. ಒಂದು ಕಪ್ಪು ಮತ್ತೊಂದು ಬಿಳಿ.
ವಿವೋ ವಿ17 ವೈಶಿಷ್ಟ್ಯ: ಈ ಫೋನನ್ನು ಉತ್ತಮ ಕ್ಯಾಮರಾ ಸಲುವಾಗಿಯೇ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದರಲ್ಲಿ ಹಿಂಬದಿಯೇ ಒಟ್ಟು ನಾಲ್ಕು ಕ್ಯಾಮರಾಗಳಿವೆ. 48 ಮೆಗಾಪಿಕ್ಸಲ್‌ನ ಮುಖ್ಯ ಸೆನ್ಸರ್ ಕ್ಯಾಮರಾ ಇದ್ದು, 8 ಮೆ.ಪಿ. ವೈಡ್ ಆ್ಯಂಗಲ್ (ಕಡಿಮೆ ಅಂತರದಲ್ಲಿ ಹೆಚ್ಚು ಜನರ ಸೆರೆ ಹಿಡಿಯುವ) ಲೆನ್ಸ್, 2 ಮೆ.ಪಿ. ಮ್ಯಾಕ್ರೋ (ಸೂಕ್ಷ್ಮ ವಿವರಗಳನ್ನು ಹಿಡಿದಿಡುವ) ಲೆನ್ಸ್, 2 ಮೆ.ಪಿ. ಬೊಕೆ ಎಫೆಕ್ಟ್ (ಬ್ಯಾಕ್‌ಗ್ರೌಂಡ್ ಬ್ಲಿರ್- ಹಿಂಬದಿ ಮಸುಕು ಮಾಡುವ ಸಾಮರ್ಥ್ಯ)ಲೆನ್ಸ್ ಇದೆ. ಸೂಪರ್ ನೈಟ್ ಮೋಡ್‌ನಲ್ಲಿ ರಾತ್ರಿ ವೇಳೆ ಮಸುಕು ಬೆಳಕಿನಲ್ಲೂ ಅತ್ಯಂತ ಸ್ಪಷ್ಟವಾದ ಫೋಟೋಗಳನ್ನು ತೆಗೆಯಬಹುದು ಎಂದು ಕಂಪೆನಿ ಹೇಳಿದೆ. ಸೆಲ್ಫಿಗೆಂದೇ 32 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮರಾ ನೀಡಲಾಗಿದೆ. ಇದರಲ್ಲೂ ಮಸುಕು ಬೆಳಕಿನಲ್ಲಿ ಸ್ಪಷ್ಟ ಚಿತ್ರ ಮೂಡುತ್ತದೆಂದು ತಿಳಿಸಿದೆ.
* ಕೆ. ಎಸ್. ಬನಶಂಕರ ಆರಾಧ್ಯ