Advertisement

ವಿವೇಕಾನಂದರ ಜೀವನದ ಮಹಾಪಾತ್ರ ಚಿಕ್ಕಮಗಳೂರಿನ ಅಳಸಿಂಗ ಪೆರುಮಾಳ್‌!

04:57 AM Jan 12, 2018 | |

ಸ್ವಾಮಿ ವಿವೇಕಾನಂದರ ಜೀವನದಲ್ಲಿ ಶ್ರೀರಾಮಕೃಷ್ಣ ಪರಮಹಂಸ ನಿರ್ಣಾಯಕ ಪಾತ್ರ. ಅವರ ಜೀವನದ ಸರ್ವಸ್ವವೂ ಅವರೇ. ಆದರೂ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿದ ಅಳಸಿಂಗ ಪೆರುಮಾಳ್‌ ಅವರು ವಿವೇಕಾನಂದರ ಜೀವನದ ಮಹಾತಿರುವಿಗೆ ಕಾರಣ ಎನ್ನುವುದನ್ನು ಮರೆಯಲು ಸಾಧ್ಯವೇ ಇಲ್ಲ. ಸರ್ವಧರ್ಮ ಸಮ್ಮೇಳನಕ್ಕೆ ಹೋಗಬೇಕೋ, ಬೇಡವೋ ಎಂಬ ಬಗ್ಗೆ ವಿವೇಕಾನಂದರಿಗೆ ಗೊಂದಲವಿದ್ದಾಗ, ಹಗಲುರಾತ್ರಿ ಅವರ ಬೆನ್ನುಬಿದ್ದು ಒಪ್ಪಿಸಿದ್ದೇ ಅಳಸಿಂಗರು. ಅಷ್ಟು ಮಾತ್ರವಲ್ಲ ಅದಕ್ಕೆ ಬೇಕಾದ ಹಣ ಸಂಗ್ರಹ ಮಾಡಿದ್ದೂ ಅವರೇ.

Advertisement

ಆದರೆ ಅಂತಹ ಅಳಸಿಂಗರ ನೆನಪುಗಳನ್ನು ಕರ್ನಾಟಕ ಸರ್ಕಾರ ಉಳಿಸಿಕೊಂಡಿಲ್ಲ. ಚಿಕ್ಕಮಗಳೂರು ನಗರದ ಹೃದಯ ಭಾಗವಾದ ಬಸವನಹಳ್ಳಿಯಲ್ಲಿ ಅಳಸಿಂಗರು ಹುಟ್ಟಿ, ಬಾಲ್ಯವನ್ನೂ ಕಳೆದಿದ್ದರು. ಈಗ ಆ ಪ್ರದೇಶದಲ್ಲಿ ಅವರ ಮನೆಯಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಅಲ್ಲಿನ ಜನರಿಗೂ ಅದರ ಪರಿವೆಯಿಲ್ಲ. ಸ್ವಾತಂತ್ರ್ಯ ಬಂದ ಮೇಲಾದರೂ ಅಲ್ಲಿನ ನಗರಪಾಲಿಕೆ, ಜಿಲ್ಲಾ ಪಂಚಾಯಿತಿ, ರಾಜ್ಯ ಸರ್ಕಾರಗಳು ಅಳಸಿಂಗರ ನೆನಪುಗಳನ್ನು ಉಳಿಸಿಕೊಳ್ಳುವುದಕ್ಕೆ ಶ್ರಮಿಸಿದ ಉದಾಹರಣೆಗಳು ಸಿಕ್ಕುವುದಿಲ್ಲ. ಇದು ಬೇಸರದ ಸಂಗತಿ.

ಅಳಸಿಂಗರ ಹಿನ್ನೆಲೆ: ಅಳಸಿಂಗರ ಪೂರ್ವಿಕರು ಮಂಡ್ಯದವರು. ಅಲ್ಲಿಂದ ಚಿಕ್ಕಮಗಳೂರಿಗೆ ಬಂದ ಅವರ ತಂದೆ ಮಂಡಯಂ ಚಕ್ರವರ್ತಿ ನರಸಿಂಹಾಚಾರ್ಯರು ನಗರಪಾಲಿಕೆಯಲ್ಲಿ ಗುಮಾಸ್ತ ಹುದ್ದೆಯಲ್ಲಿದ್ದರು. ಬಹಳ ಬಡತನದಲ್ಲಿದ್ದರು. 1865ರಲ್ಲಿ ಮದ್ದೂರಿನ ನರಸಿಂಹಸ್ವಾಮಿಯ ಕೃಪೆಯಿಂದ ಅಳಸಿಂಗ ಜನಿಸಿದರು (ನಂಬಿಕೆ). ನರಸಿಂಹ ಎಂದೇ ಹೆಸರಿಡಲು ತಂದೆ ಇಚ್ಛಿಸಿದರೂ, ತನ್ನ ಪತಿಯ ಹೆಸರಾದ್ದರಿಂದ ತಾಯಿ ಒಪ್ಪಲಿಲ್ಲ. ಆದ್ದರಿಂದ ನರಸಿಂಹ ಅರ್ಥವೇ ಬರುವ ಅಳಸಿಂಗ ಪೆರುಮಾಳ್‌ (ಅಳ-ಸುಂದರವಾದ, ಸಿಂಗ-ಸಿಂಹ, ಪೆರುಮಾಳ್‌-ದೇವರು)ಎಂಬ ಹೆಸರನ್ನು ಇಡಲಾಯಿತು.

1872ರಿಂದ 1875ರ ನಡುವೆ ಅಳಸಿಂಗರ ಕುಟುಂಬ ತಮಿಳುನಾಡಿನ ಮದ್ರಾಸ್‌ಗೆ ತೆರಳಿತು. ಅಲ್ಲಿ ಹಣ ಬರುವ ಉದ್ಯೋಗ ಸಿಕ್ಕಿದ್ದು ಇದಕ್ಕೆ ಕಾರಣ. ಇದೇ ಜಾಗದಲ್ಲಿ 1892ರಲ್ಲಿ ವಿವೇಕಾನಂದ ಮತ್ತು ಅಳಸಿಂಗರ ಮಿಲನವಾಯಿತು. ಮನ್ಮಥಾನಾಥ ಭಟ್ಟಾಚಾರ್ಯ ಎನ್ನುವವರ ಮನೆಯಲ್ಲಿ ಅಳಸಿಂಗರ ತಮ್ಮ ಗುರುಗಳನ್ನು ಭೇಟಿ ಮಾಡಿದರು. ಅಲ್ಲಿಂದಲೇ ನಿಕಟಗೊಂಡ ಸಂಬಂಧ ಅವರ ಸಾವಿನವರೆಗೂ ಮುಂದುವರೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next