Advertisement

ವಿವೇಕಾನಂದರು ಭಾರತೀಯ ಸಂಸ್ಕೃತಿಯ ಪ್ರತೀಕ

07:29 AM Jan 23, 2020 | mahesh |

ಸುಳ್ಯ: ಸಮಾಜಕ್ಕೆ ಶಾಂತಿ, ಸೌಹಾರ್ದತೆ, ಸಮಾನತೆಯನ್ನು ಸಾರಿದ, ಯುವ ಸಮುದಾಯಕ್ಕೆ ದಾರಿದೀಪವಾದ ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಸುಳ್ಯದ ತಹಶೀಲ್ದಾರ್‌ ಕುಂಞಿ ಅಹಮ್ಮದ್‌ ಅಭಿಪ್ರಾಯಪಟ್ಟರು.

Advertisement

ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಮಂಗಳೂರು, ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕ ಹಾಗೂ ವಿಕ್ರಮ ಯುವ ಮಂಡಲ ಜಯನಗರ ಇವುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಪ್ರಯುಕ್ತ ನೆಹರೂ ಮೆಮೋರಿಯಲ್‌ ಕಾಲೇಜಿನಲ್ಲಿ ಹಮ್ಮಿಕೊಂಡ ವಿಷಯಾಧಾರಿತ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮ ಅರಿವಿನಿಂದ ಪ್ರಗತಿಯೆಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ವ ಧರ್ಮ ಸಮನ್ವಯತೆಯನ್ನು ಸಾರಿದ ವಿವೇಕಾನಂದರು ಯುವಕರಿಗೆ ಮಾರ್ಗದರ್ಶಕರಾದುದ್ಲಲದೇ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ, ಗೌರವವನ್ನು ಕಲ್ಪಿಸಿದವರು. ಮಹಿಳೆಯರನ್ನು ಗೌರವಿಸದ ಸಮಾಜ ನಾಗರಿಕತೆಯೆಡೆ ಸಾಗುವುದಿಲ್ಲ ಎಂದು ಸಾರಿದವರು ವಿವೇಕಾನಂದರು. ಆ ನಿಟ್ಟಿನಲ್ಲಿ ಅರಿವಿನಿಂದ ಪ್ರಗತಿಯೆಡೆಗೆ ಎನ್ನುವ ಉತ್ತಮ ಶೀರ್ಷಿಕೆಯ ಅಡಿಯಲ್ಲಿ ಮೂಡಿ ಬರುವ ಈ ಕಾರ್ಯಕ್ರಮ ಯುವಜನತೆ ಯಶಸ್ವಿ ಜೀವನ ಸಾಗಿಸಲು ಸಹಾಯಕವಾಗಲಿ ಎಂದರು.

ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಗಿರಿಧರ ಗೌಡ ಮಾತನಾಡಿ, ದೇಶ ಕಟ್ಟುವ ಶಕ್ತಿ ಯುವಕರಲ್ಲಿದೆ. ಯುವಕರು ಮನಸ್ಸು ಮಾಡಿದರೆ ಸದೃಢ ಭಾರತ ನಿರ್ಮಾಣ ಸಾಧ್ಯ. ಯುವ ಶಕ್ತಿ ತಪ್ಪು ದಾರಿ ಹಿಡಿದರೆ ಇಡೀ ಮನುಕುಲವೇ ನಿರಾಶಾದಾಯಕವಾಗುತ್ತದೆ. ಉತ್ತಮ ಗುಣ ನಡತೆ, ಆದರ್ಶಗಳಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ. ತಮ್ಮನ್ನು ತಾವು ತಿದ್ದಿಕೊಳ್ಳುವ ಮೂಲಕ ಜಗತ್ತಿನಲ್ಲಿ ಪರಿವರ್ತನೆ ಕಾಣೋಣ. ಇಂತಹ ಉತ್ತಮ ಕಾರ್ಯಕ್ರಮದ ಆಯೋಜನೆ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗೆ ಪ್ರೇರಣೆಯಾಗಲಿ ಎಂದರು.

ಪ್ರೇರಕ ಶಕ್ತಿ
ಕೆವಿಜಿ ಕ್ಯಾಂಪಸ್‌ನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಜವರೇಗೌಡ ಡಿ. ಮಾತನಾಡಿ, ಭಾರತ ದೇಶವನ್ನು ವಿಶ್ವ ಸಮುದಾಯದಲ್ಲಿ ಅತ್ಯುನ್ನತಕ್ಕೇರಿಸಬೇಕು ಎಂದು ಜಗತಿನಾದ್ಯಂತ ದೇಶದ ಸಂಸ್ಕೃತಿಯನ್ನು ಪರಿಚಯಿಸಿದ ದೇಶ ಭಕ್ತ ಸಂತ- ಸ್ವಾಮಿ ವಿವೇಕಾನಂದರು. ದೇಶ ಭಕ್ತಿಯನ್ನು ಜನತೆಯಲ್ಲಿ ಹುಟ್ಟು ಹಾಕಿದುದಲ್ಲದೇ, ದೇಶದ ಜನರೆಲ್ಲ ಜಾಗೃತರಾಗಬೇಕು. ದೇಶದ ಜನರೆಲ್ಲ ಒಂದಾಗಬೇಕು. ಆಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಯುವಕರಿಗೆ ಪ್ರೇರಕ ಶಕ್ತಿಯಾದ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ನಡೆಸುವ ಒಂದು ದಿನದ ಈ ಕಾರ್ಯಕ್ರಮ ಯುವಜನತೆಗೆ ಸ್ಫೂರ್ತಿದಾಯಕವಾಗಲಿ ಎಂದರು.

Advertisement

ಆದರ್ಶ ಪಾಲಿಸಿ
ನೆಹರೂ ಯುವ ಕೇಂದ್ರ ಮಂಗಳೂರು ಇದರ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್‌ ಮಾತನಾಡಿ, ಯುವ ಸಮುದಾಯ ಸಮಾಜಕ್ಕೆ ಹೆಚ್ಚಿನ ಸೇವೆ ಮಾಡುವಂತಾಗಬೇಕು. ವಿವೇಕಾನಂದರ ಚಿಂತನೆ, ಆದರ್ಶಗಳನ್ನು ಯುವಕರು ಪಾಲಿಸಬೇಕು. ಇಲ್ಲಿನ ವಿಚಾರಗಳು ಜೀವನಕ್ಕೆ ಪ್ರಯೋಜನವಾದಾಗ ಇಂತಹ ಕಾರ್ಯ ಕ್ರಮಗಳ ಆಯೋಜನೆ ಸಾರ್ಥಕ ಎಂದರು.

ವಿಕ್ರಮ ಯುವ ಮಂಡಲ ಜಯನಗರದ ಪೂರ್ವಾಧ್ಯಕ್ಷ ಸುರೇಂದ್ರ ಕಾಮತ್‌, ನೆಹರೂ ಯುವ ಕೇಂದ್ರ ದಕ್ಷಿಣ ಕನ್ನಡ ಜಿಲ್ಲಾ ನಾಮ ನಿರ್ದೇಶಿತ ಸದಸ್ಯ ಕಿಶನ್‌ ಜಬಳೆ, ವಿಕ್ರಮ ಯುವ ಮಂಡಲ ಜಯನಗರ ಅಧ್ಯಕ್ಷ ಪ್ರಸನ್ನ ಶುಭ ಹಾರೈಸಿದರು. ಯುವ ರೆಡ್‌ಕ್ರಾಸ್‌ ಘಟಕದ ಕಾರ್ಯಕ್ರಮಾಧಿಕಾರಿ ಡಾ| ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ತರಬೇತುದಾರ ಚಂದ್ರಶೇಖರ ಬಿಳಿನೆಲೆ, ಶಿಕ್ಷಣ ಸಂಯೋಜಕ ಡಾ| ಸುಂದರ ಕೇನಾಜೆ, ಭವಾನಿಶಂಕರ ಅಡ್ತಲೆ, ಸಾಯಿರಾಂ ಸುಳ್ಯ ತರಬೇತುದಾರರಾಗಿ ಭಾಗವಹಿಸಿದ್ದರು.

ಮೌನ, ತೇಜಸ್ವಿನಿ, ರಚನಾ ಪ್ರಾರ್ಥಿಸಿದರು. ಕುಲದೀಪ್‌ ಸ್ವಾಗತಿಸಿ, ಅಶ್ವಿ‌ತಾ ವಂದಿಸಿದರು. ಜಯಮಾಲ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ರೆಡ್‌ಕ್ರಾಸ್‌ ಘಟಕ ನಾಯಕರಾದ ಭುವನ್‌ ಪಿ., ಕುಮುದಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next