Advertisement

ಜಗತ್ತಿನ ಹಸಿವು ಇಂಗಿಸಲು ಭಾರತ ಸಿದ್ಧಗೊಳ್ಳಬೇಕಾಗಿದೆ: ಕೆದಿಲಾಯ

08:44 AM Jan 10, 2019 | |

ವಿಟ್ಲಪಟ್ನೂರು : ವೇದವೆಂಬ ಜ್ಞಾನದ ವಿಜ್ಞಾನ, ಯೋಗ ವೆಂಬ ಜೀವನ ವಿಜ್ಞಾನ, ಭಗವದ್ಗೀತೆ ಎಂಬ ಮನೋವಿಜ್ಞಾನ, ಸಂಸ್ಕೃತ ಎಂಬ ಭಾಷಾ ವಿಜ್ಞಾನ, ಆಯುರ್ವೇದ ಎಂಬ ಆರೋಗ್ಯ ವಿಜ್ಞಾನ, ಕೃಷಿ ಎಂಬ ಬದುಕಿನ ವಿಜ್ಞಾನ ಮತ್ತಿತರ ವಿಚಾರಗಳನ್ನು ಜಗತ್ತು ಭಾರತದಿಂದ ಬಯಸುತ್ತಿದೆ. ಪರಿಣಾಮವಾಗಿ ನಮ್ಮ ಹೊಣೆ ಹೆಚ್ಚಾಗಿದ್ದು, ಜಗತ್ತಿನ ಹಸಿವನ್ನು ಇಂಗಿಸುವುದಕ್ಕಾಗಿ ಭಾರತ ಸಿದ್ಧಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಹೇಳಿದರು.

Advertisement

ಅವರು ಮಂಗಳವಾರ ಮೂರುಕಜೆ ಅಜೇಯ ಟ್ರಸ್ಟ್‌ ಮೈತ್ರೇಯೀ ಗುರುಕುಲಮ್‌ ಅರ್ಧಮಂಡಲೋತ್ಸವ ನಿಮಿತ್ತ ಕೃಷಿಕರ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾ| ಕೊಂಕೋಡಿ ಕೃಷ್ಣ ಭಟ್ ಮಾತನಾಡಿ, ಜಮೀನು ಮಾರುವ ಮೂಲಕ ಕೃಷಿಯ ನಾಶಕ್ಕೆ ಮುಂದಾಗುತ್ತಿದ್ದೇವೆ. ಗೋವು ಆಧಾರಿತ ಕೃಷಿ – ಕೃಷಿ ಆಧಾರಿತ ಗ್ರಾಮ – ಗ್ರಾಮಾಧಾರಿತ ದೇಶ ಮತ್ತು ಜಗತ್ತಿನಲ್ಲಿ ಶಾಂತಿ ಈ ಕಲ್ಪನೆಯ ದೇಶವನ್ನು ಕಟ್ಟಬೇಕಾಗಿದೆ. ಕೃಷಿ ದೇಶದ ಜೀವಾಳವಾಗಿದ್ದು, ಹಳ್ಳಿಯ ಇತಿಹಾಸ ಪರಂಪರೆ ನಾಶವಾಗುತ್ತಿದೆ. ಹಳ್ಳಿಗಳಲ್ಲಿರುವ ಯುವಕರ ಸಂಖ್ಯೆ ಕಡಿಮೆ ಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭ ಸಾವಯವ ಕೃಷಿ ಮತ್ತು ನರ್ಸರಿ ಮಾಡುತ್ತಿರುವ ಅಂಗನವಾಡಿ ಶಿಕ್ಷಕಿ ಹೇಮಾಮಾಲಿನಿ, ಉದ್ಯಮದಲ್ಲಿ ಸಾಧನೆಗೆ ಶುಭಲಕ್ಷ್ಮೀ ಅವರನ್ನು ಸಮ್ಮಾನಿಸಲಾಯಿತು. ಅರ್ಧಮಂಡಲೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಿ. ಸ್ವಾಗತಿಸಿ, ಶ್ರುತಿ ಸಮ್ಮಾನಿತರನ್ನು ಪರಿಚಯಿಸಿದರು. ಗುರುಕುಲಮ್‌ ನ ಕೃಷಿ ಪ್ರಮುಖ್‌ ಸಿದ್ದಪ್ಪ ವಂದಿಸಿದರು. ಪೂರ್ಣಿಮಾ ನಿರೂಪಿಸಿದರು.

ವಿವಿಧ ಗೋಷ್ಠಿಗಳು
ಇದೇ ಸಂದರ್ಭ ವಿವಿಧ ಗೋಷ್ಠಿಗಳು ನಡೆದವು. ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ ಡಾ| ವೈ.ವಿ. ಕೃಷ್ಣಮೂರ್ತಿ ಅವರು ಗೋ ಆಧಾರಿತ ಕೃಷಿ ಬಗ್ಗೆ ಮಾತನಾಡಿ, ಗೋವು ಉಳಿಯಬೇಕಾದರೆ ರೈತರು ಮತ್ತು ಕೃಷಿ ಉಳಿಯಬೇಕು. ದೇಶವಾಸಿಗಳಿಗೆ ದೇಸೀ ದನಗಳ ಗೋಮೂತ್ರ, ಸಗಣಿಯ ಉಪಯೋಗ ಅರಿಯುವಂತಾಗಬೇಕು ಎಂದರು.

ಸಾವಯವ ಕೃಷಿಕ ಎ.ಪಿ. ಚಂದ್ರಶೇಖರ್‌ ಪಾರಂಪರಿಕ ಕೃಷಿ ಬಗ್ಗೆ ಮಾತನಾಡಿ, ಹಿಂದಿನ ತಲೆಮಾರಿನವರು ಕೃಷಿಯಲ್ಲಿ ಸ್ವಾಭಿಮಾನ ಹೊಂದಿದ್ದರು. ಈಗ ಇತರರನ್ನು ಅವಲಂಬಿಸುತ್ತಿದ್ದೇವೆ. ಇದನ್ನು ಸರಿಪಡಿಸಲು ಇನ್ನೂ ಮೂರು ತಲೆಮಾರುಗಳ ಅಗತ್ಯವಿದೆ. ಸಾಂಪ್ರದಾಯಿಕ ಕೃಷಿಯಲ್ಲೇ ವಿಜ್ಞಾನವಿತ್ತು. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ರಾಸಾಯನಿಕ ಕೃಷಿಯತ್ತ ವಾಲಿದ್ದೇವೆ ಎಂದರು.

Advertisement

ವಿಟ್ಲ ಸಸ್ಯಶ್ಯಾಮಲದ ದಿನೇಶ್‌ ನಾಯಕ್‌ ಸಸ್ಯವೈವಿಧ್ಯದ ಬಗ್ಗೆ ಮಾತನಾಡಿ, ಕೃಷಿಯ ಜತೆಗೆ ಅಗ್ರೋ ಫಾರೆಸ್ಟ್‌ ಮಾಡಲು ಮುಂದಾದಾಗ ಉತ್ತಮ ಲಾಭ ಪಡೆಯಬಹುದು. ಅಪರೂಪದ ನಾಗಸಂಪಿಗೆಯ ಮರವನ್ನು ಕಡಿಯುವ ಬದಲು ನೆಟ್ಟು ಬೆಳೆಸಬೇಕು. ನಮ್ಮಲ್ಲಿರುವ ಸಸ್ಯ ವೈವಿಧ್ಯಗಳನ್ನು ಗುರುತಿಸಿ ಉಳಿಸುವ ಕಾರ್ಯ ಮಾಡಬೇಕು ಎಂದರು.

ಗುರುಕುಲ ಪದ್ಧತಿ
ಗುರುಕುಲ ಪದ್ಧತಿ ಕಡೆಗೆ ಆಸಕ್ತರಾಗುವುದು ಸಾಮಾಜಿಕ ಪರಿವರ್ತನೆಯ ನಿದರ್ಶನವಾಗಿದೆ. ಗುರುಕುಲ ಶಿಕ್ಷಣದ ಚಿಂತನ ಮಂಥನದ ಬಳಿಕ ಸರಕಾರದ ಕಣ್ಣು ತೆರೆಸುವ ಕಾರ್ಯವಾಗಿದೆ. ಅದಕ್ಕಾಗಿ ಯುವಕ-ಯುವತಿಯರನ್ನು ಸಜ್ಜುಗೊಳಿಸುವ, ಸಿದ್ಧಗೊಳಿಸುವ ಕಾರ್ಯ ಆಗಬೇಕಾಗಿದೆ.
ಸೀತಾರಾಮ ಕೆದಿಲಾಯ, 
ಹಿರಿಯ ಪ್ರಚಾರಕರು, ಆರ್‌ಎಸ್‌ಎಸ್‌

Advertisement

Udayavani is now on Telegram. Click here to join our channel and stay updated with the latest news.

Next