Advertisement

ವಿಟ್ಲ: ಬಿಸಿಲ ಬೇಗೆಗೆ ಬಾನಿಗೆ ಚಪ್ಪರ

12:03 PM Apr 14, 2018 | |

ವಿಟ್ಲ : ದಿನದಿನವೂ ಬಿಸಿಲ ಬೇಗೆ ಜಾಸ್ತಿಯಾಗುತ್ತಿದೆ. ತಾಪಮಾನ 40 ಡಿಗ್ರಿ ಯನ್ನೇರಿದೆ. ಪೇಟೆಯಲ್ಲಿ ನಾಗರಿಕರು ಓಡಾಡು ವುದೇ ಕಷ್ಟವಾಗಿದೆ. ವ್ಯಾಪಾರಿಗಳೂ ಬಿಸಿಲ ಬೇಗೆಯಿಂದ ಬಸವಳಿದಿದ್ದು, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡು ಕೊಂಡಿದ್ದಾರೆ.

Advertisement

ನೆರಳು ನೀಡಿದ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸಲು ವಿಟ್ಲದಲ್ಲಿ ರಸ್ತೆಯ ಎರಡು ಬದಿಯ ವ್ಯಾಪಾರಿಗಳು ಒಗ್ಗಟ್ಟಾಗಿ ಬಾನಿಗೆ ಚಪ್ಪರ ಹಾಕಿದರೆ ಹೇಗೆ ಎಂದು ಯೋಚಿಸಿ, ಕಾರ್ಯರೂಪಕ್ಕೆ ಇಳಿದಿದ್ದಾರೆ. ತಕ್ಕಮಟ್ಟಿಗೆ ಇದು ಉತ್ತಮ ಮತ್ತು ತಾತ್ಕಾಲಿಕ ಉಪಾಯವಾಗಿದ್ದು, ವ್ಯಾಪಾರಿಗಳು ಮತ್ತು ಪಾದಚಾರಿಗಳು ಸ್ವಲ್ಪ ಹೊತ್ತು ತಂಪಾದ ಅನುಭವ ಪಡೆಯುತ್ತಿದ್ದಾರೆ. 

ರಸ್ತೆಯ ಮೇಲೆ ಚಪ್ಪರ
ವಿಟ್ಲ ಜಂಕ್ಷನ್‌ ಬಳಿ ಶಾಲಾ ರಸ್ತೆಗೆ ಚಪ್ಪರ ಹಾಕಲಾಗಿದೆ. ಈ ಚಪ್ಪರವನ್ನು ಬಟ್ಟೆ ಮೂಲಕ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಈ ಬಟ್ಟೆಯನ್ನು ನರ್ಸರಿಗಳಲ್ಲಿ ಬಳಸುತ್ತಾರೆ. ಶಾಮಿಯಾನ ಸಂಸ್ಥೆಗಳು ಶೇಡ್‌ ನೆಟ್‌ ಅಥವಾ ಗಾರ್ಡನ್‌ ನೆಟ್‌ ಎಂದು ಕರೆಯುತ್ತಾರೆ. 10 ಅಥವಾ 20 ಅಡಿ ಅಗಲದ ಈ ಬಟ್ಟೆ ಸುಮಾರು 150, 200 ಅಡಿ ಉದ್ದವಿರುತ್ತದೆ. ಇದನ್ನು ಖರೀದಿಸಿದ ವಿಟ್ಲ ಜಂಕ್ಷನ್‌ ಬಳಿಯ ವ್ಯಾಪಾರಿಗಳು ರಸ್ತೆ ಮೇಲೆ ಒಂದು ಬದಿಯ ಕಟ್ಟಡದಿಂದ ಇನ್ನೊಂದು ಬದಿಯ ಕಟ್ಟಡಕ್ಕೆ ಕಟ್ಟಿದ್ದಾರೆ. ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸುಮಾರು 40 ಅಡಿ ಉದ್ದದ ಶೇಡ್‌ ನೆಟ್‌ ಬಳಸಿದ್ದಾರೆ. ಇದನ್ನು ನಾಲ್ಕು ಸಾಲುಗಳಲ್ಲಿ ಜೋಡಿಸಿದ್ದಾರೆ. ಸಾಕಷ್ಟು ಎತ್ತರದಲ್ಲಿರುವುದರಿಂದ ಯಾವುದೇ ವಾಹನ ಸಂಚಾರಕ್ಕೂ ಅಡ್ಡಿಯಾಗುವುದಿಲ್ಲ. ವ್ಯಾಪಾರಿಗಳು ಒಟ್ಟು ರೂ. 3-4 ಸಾವಿರ ರೂ. ಖರ್ಚು ಭರಿಸಿದ್ದಾರೆ.

12ರಿಂದ 3ರವರೆಗೆ ಕಷ್ಟ
ಮಧ್ಯಾಹ್ನ 12 ಗಂಟೆಗೆ ಬಿಸಿಲ ಬೇಗೆ ಜಾಸ್ತಿಯಾಗಿ, 3 ಗಂಟೆ ವರೆಗೂ ಇರುತ್ತದೆ. ಧಗೆ ಏರುವ ಈ ಹೊತ್ತಲ್ಲಿ ವ್ಯಾಪಾರಿಗಳಿಗೆ ಹಾಗೂ ಬರುವ ಗ್ರಾಹಕರಿಗೂ ಕಷ್ಟ. ಇದಕ್ಕೆ ವ್ಯಾಪಾರಿಗಳ ಈ ಉಪಾಯ ಸ್ವಲ್ಪ ಮಟ್ಟಿನ ಪ್ರಯೋಜನ ನೀಡಿದೆ.

ಆರ್‌ಸಿಸಿಸ್ಲ್ಯಾಬ್ ನಲ್ಲಿ ಶೇಡ್‌ನೆಟ್‌
ಆರ್‌ಸಿಸಿ ಮನೆಗಳಲ್ಲಿ ಬಿಸಿಲ ಉರಿ, ಸೆಕೆ ಜಾಸ್ತಿ. ಇದನ್ನು ತಡೆಯಲು ಅನೇಕ ಮಂದಿ ತಮ್ಮ ಮನೆಯ ಆರ್‌ಸಿಸಿ ಸ್ಲ್ಯಾಬ್ ಮೇಲೆ ಶೇಡ್‌ನೆಟ್‌ ಬಳಸಿ ಚಪ್ಪರ ಹಾಕುತ್ತಿದ್ದಾರೆ.

Advertisement

ಮೂರು ಮಳೆ ಬಿದ್ದರೂ ಬಿಸಿಬಿಸಿ
ಎಪ್ರಿಲ್‌ ತಿಂಗಳಲ್ಲಿ ವಿಟ್ಲ ಪರಿಸರದಲ್ಲಿ ಒಟ್ಟು ಮೂರು ಮಳೆ ಬಿದ್ದಿದೆ. ಪ್ರಥಮ ಮಳೆ ಒಂದೂವರೆ ಗಂಟೆ ಕಾಲ ಸುರಿದಿದ್ದರೆ, ಆಮೇಲಿನ ಎರಡೂ ಮಳೆಗಳೂ ಪ್ರಯೋಜನಕಾರಿಯಾಗಿದ್ದವು. ಮೂರು ಮಳೆ ಬಿದ್ದರೂ ಬಿಸಿ ಬಿಸಿ ವಾತಾವರಣವಿದೆ.

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next