Advertisement

ವಿಟ್ಲ ತಾ|ರಚನೆಗೆ ಆಗ್ರಹ, ಉಗ್ರ ಹೋರಾಟಕ್ಕೆ  ತೀರ್ಮಾನ

03:55 PM Dec 20, 2017 | |

ವಿಟ್ಲ : ಕಳೆದ ನಾಲ್ಕು ದಶಕಗಳಿಂದ ವಿಟ್ಲ ತಾಲೂಕು ಆಗಬೇಕೆಂದು ಹೋರಾಟ ನಡೆಸುತ್ತ ಬರಲಾಗಿದೆ. ಮನವಿ ಸಲ್ಲಿಸುವ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಕರಾವಳಿ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಲಿಗೆ ತಿಳಿಸಿದರು. 

Advertisement

ಅವರು ಮಂಗಳವಾರ ವಿಟ್ಲ ಪಂಚಮಿಯಲ್ಲಿ ತಾ| ರಚನೆಯ ಬಗ್ಗೆ ಮುಂದಿನ ಕಾರ್ಯ ಯೋಜನೆಯನ್ನು ಯಾವ ರೀತಿಯಲ್ಲಿ ನಡೆಸಬಹುದೆಂಬ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು. ತಾಲೂಕು ಆಗುವ ಎಲ್ಲ ಅರ್ಹತೆಯಿದ್ದರೂ ಯಾವುದೇ ಸರಕಾರಗಳು ಸ್ಪಂದಿಸಿಲ್ಲ. ಈ ಬಾರಿ ತಾಲೂಕು ಘೋಷಣೆಯಾಗುವವರೆಗೆ ರಸ್ತೆಗಿಳಿದು ಉಗ್ರವಾಗಿ ಹೋರಾಟವನ್ನು ನಡೆಸಲು ತೀರ್ಮಾನಿಸಿದ್ದೇವೆ ಎಂದರು.

ನಾಯಕತ್ವದ ಕೊರತೆ
ಸಮಾಜಸೇವಕ ಡಾ| ಇರ್ಮಾಡಿ ಶರಶ್ಚಂದ್ರ ಶೆಟ್ಟಿ ಮಾತನಾಡಿ, ವಿಟ್ಲ ತಾಲೂಕು ಹೋರಾಟದ ವಿಚಾರದಲ್ಲಿ ಇತ್ತೀಚಿನ ದಿನದಲ್ಲಿ ಯುವ ನಾಯಕತ್ವದ ಕೊರತೆ ಉಂಟಾಗಿದೆ. ತಾ| ರಚನೆಗಾಗಿ ಉಗ್ರ ಹೋರಾಟ ಖಂಡಿತವಾಗಿ ಅಗತ್ಯವಿದೆ. ರಾಜಕೀಯ ರಹಿತವಾಗಿ ರೈತ ಸಂಘದ ಮುಂದಾಳತ್ವದಲ್ಲಿ ಹೋರಾಟ ನಡೆಸಬೇಕು. ಹೋರಾಟದ ವಿಚಾರದಲ್ಲಿ ಸಹಕಾರಿ ಸಂಸ್ಥೆಗಳನ್ನು, ವಿವಿಧ ಸಂಘ ಸಂಸ್ಥೆಗಳನ್ನು, ಅಂಗಡಿ, ವಾಹನ ಮಾಲಕ ಚಾಲಕ ಸಂಘಗಳನ್ನು ಸೇರಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಯೋಜನ ಆಗಿಲ್ಲ
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ವಿಟ್ಲ ತಾಲೂಕಿನ 40 ವರ್ಷಗಳ ಬೇಡಿಕೆಯನ್ನು ಇಲ್ಲಿವರೆಗೆ ಬಂದ ಸರಕಾರಗಳು ಕಡೆಗಣಿಸಿವೆ. ಸತತ ಹೋರಾಟ ನಡೆಸಿದರೂ ಪ್ರಯೋಜನ ಆಗಿಲ್ಲ ಎಂದರು.

ಹೋರಾಟ ಬೆಂಬಲಿಸಲು ಮನವಿ
ಜನವರಿ 2ರಂದು ನಿರ್ದಿಷ್ಟ ಅವಧಿಯಲ್ಲಿ ವಿಟ್ಲ ಪೇಟೆಯನ್ನು ಬಂದ್‌ ಮಾಡುವ ಮೂಲಕ ಉಗ್ರ ಹೋರಾಟವನ್ನು ನಡೆಸಲು ನಿಶ್ಚಯಿಸಲಾಗಿದೆ. ವಿಟ್ಲ ಹೋಬಳಿಯ ಪ್ರತಿಯೊಂದು ಗ್ರಾಮಗಳ ಹಿರಿಯರನ್ನು ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಗ್ಗೂಡಿಸಿ, ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು. ಹೋರಾಟಗಾರ ಮುರುವ ನಡುಮನೆ ಮಹಾಬಲ ಭಟ್‌, ಲಯನ್ಸ್‌ ಕ್ಲಬ್‌ ವಲಯಾಧ್ಯಕ್ಷ ವಿ.ಎನ್‌.ಸುದರ್ಶನ ಪಡಿಯಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

1973ರಿಂದ ಮನವಿ
ಸರಕಾರ 1973ರಲ್ಲಿ ತಾ| ಪುನಾರಚನೆ ಬಗ್ಗೆ ಅಧ್ಯಯನ ನಡೆಸಲು ವಾಸುದೇವ ರಾವ್‌ ಸಮಿತಿ ಮುಂದೆ ಅಂದು ವಿಟ್ಲದ ಬಾಬು ಶೆಟ್ಟಿ, ದೇವಸ್ಯ ನಾರಾಯಣ ಭಟ್‌, ಮಾಜಿ ಸಚಿವ ವಿಠಲದಾಸ ಶೆಟ್ಟಿ ಮನವಿ ನೀಡಿ ತಾ| ರಚನೆಗೆ ಒತ್ತಾಯಿಸಿದ್ದರು. ಬಳಿಕ 1985ರಲ್ಲಿ ಹುಂಡೇಕರ್‌ ಸಮಿತಿಯ ಮುಂದೆ ಕೂಡೂರು ಕೃಷ್ಣ ಭಟ್ಟರ ನೇತƒತ್ವದಲ್ಲಿ ಮನವಿ ಸಲ್ಲಿಸಲಾಯಿತು. 2009ರಲ್ಲಿ ಮತ್ತೆ ಎಂ.ಬಿ. ಪ್ರಕಾಶ್‌ ಸಮತಿ ಮುಂದೆ ಕರ್ನಾಟಕ ಗಡಿ, ನೆಲ ಜಲ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ. ಆದರೆ ತಾಲೂಕು ರಚನೆ ಪ್ರಸ್ತಾಪವನ್ನು ಅಲ್ಲಗಳೆಯಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next