Advertisement

ಸತ್ಯಾಗ್ರಹಿಗಳ ಬೆನ್ನ ಹಿಂದೆ ವಿದ್ಯಾರ್ಥಿ ಹೋರಾಟದ ಸಾಥ್‌: ವಿಠ್ಠಲ ಕಿಣಿ

09:33 AM Aug 15, 2022 | Team Udayavani |

ಮಂಗಳೂರು : ಬ್ರಿಟಿಷರ ವಿರುದ್ಧ ನಮ್ಮ ಸತ್ಯಾಗ್ರಹಿಗಳು ಹೋರಾಟ ಕೈಗೊಂಡ ಸಂದರ್ಭ ಅವರ ಬೆನ್ನ ಹಿಂದೆ ನಾವು ನಿಂತು ಬ್ರಿಟಿಷರ ವಿರುದ್ಧ ಘೋಷಣೆ ಕೂಗಿದ್ದೆವು. ಭಿತ್ತಿಪತ್ರ ಅಂಟಿಸಿ, ಕರಪತ್ರಗಳನ್ನು ಹಂಚಿ ಸ್ವಾತಂತ್ರ್ಯ ನಮ್ಮ ಹಕ್ಕು ಎಂದು ಶಾಲೆಯ ದಿನದಲ್ಲಿಯೇ ಹೋರಾಟ ಮಾಡಿದ್ದೆವು…

Advertisement

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದನ್ನು ಹೀಗೆ ನೆನಪಿಸಿಕೊಂಡವರು ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ ಕಿಣಿ.

ಮಟ್ಟಾರು ಕೃಷ್ಣರಾಯ ಕಿಣಿ ಹಾಗೂ ರುಕ್ಮಿಣಿ ಬಾಯಿ ಅವರ ಪುತ್ರನಾಗಿ 1929ರ ಎ. 17ರಂದು ಜನಿಸಿದ ವಿಠ್ಠಲ ಕಿಣಿ ಅವರು ಆರಂಭಿಕ ಶಿಕ್ಷಣವನ್ನು ಕಾಸರಗೋಡಿನಲ್ಲಿ ಪಡೆದರು. ಸದ್ಯ ಮಂಗಳೂರಿನ ಅಳಕೆಯಲ್ಲಿ ವಾಸವಾಗಿರುವ ಅವರು ಸ್ವಾತಂತ್ರ್ಯ ಹೋರಾಟದ ಕುರಿತ ನೆನಪುಗಳನ್ನು “ಉದಯವಾಣಿ’ ಜತೆ ಹಂಚಿಕೊಂಡರು.

ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕೂಗು ಪ್ರತಿಧ್ವನಿಸುತ್ತಿತ್ತು. ಶಾಲೆ- ಹೈಸ್ಕೂಲ್‌ ಮಟ್ಟದಲ್ಲೇ ಹೋರಾಟದ ಕಿಚ್ಚು ಕಾಣಿಸಿಕೊಂಡಿತ್ತು. ನಾನು ಕಾಸರಗೋಡು ಶಾಲೆಯಲ್ಲಿ ಕಲಿಯುವಾಗಲೇ ಇಂತಹ ಹೋರಾಟದ ಬಗ್ಗೆ ತಿಳಿದುಕೊಂಡೆ. ಈ ಸಂದರ್ಭ ವಿದ್ಯಾರ್ಥಿಗಳಾಗಿದ್ದ ನಾವು ಸತ್ಯಾಗ್ರಹಿಗಳಿಗೆ ಬೆಂಬಲವಾಗಿ ನಿಂತಿದ್ದೆವು.

1942ರಲ್ಲಿ “ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಗಾಂಧೀಜಿಯವರ ಕರೆಯ ಮೇರೆಗೆ ದೇಶಾದ್ಯಂತ ಹೋರಾಟ ನಡೆದಿತ್ತು. ನಾನು ಆಗ ಹೈಸ್ಕೂಲ್‌ ವಿದ್ಯಾರ್ಥಿ. ಇತರ ವಿದ್ಯಾರ್ಥಿಗಳ ಜತೆ ಸೇರಿಕೊಂಡು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದೆವು. ಬ್ರಿಟಿಷರ ವಿರುದ್ಧ ನಾವು ಘೋಷಣೆಗಳನ್ನು ಕೂಗಿದ್ದೆವು. ಕರಪತ್ರಗಳನ್ನು ಜನರಿಗೆ ಹಂಚಿದ್ದೆವು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಜತೆಯಾಗೋಣ ಎಂಬ ಬರೆಹದ ಭಿತ್ತಿಪತ್ರಗಳನ್ನು ಹಚ್ಚಿದ್ದೆವು ಎಂದು ನೆನಪಿಸುತ್ತಾರೆ ಅವರು.

Advertisement

ನಮ್ಮ ವ್ಯಾಪ್ತಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಇತರ ಸಂದರ್ಭದಲ್ಲಿಯೂ ನಿಯಮಿತವಾಗಿ ನಾನು ಭಾಗವಹಿಸಿದ್ದೆ. ವಿಶೇಷವಾಗಿ, 1946ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಸ್ತಾರಕನಾಗಿ ಸೇವಾ ಕಾರ್ಯ ಮಾಡಿದ್ದೆ. ಆ ವೇಳೆಯಲ್ಲಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸಾಧ್ಯವಾಯಿತು ಎಂಬುದು ಅವರ ನೆನಪು.

ಗೋವಾ ವಿಮೋಚನೆಗಾಗಿ ಜೈಲುವಾಸ!
1954ರಲ್ಲಿ ಸರ್ವ ಪಕ್ಷ ಗೋವಾ ವಿಮೋಚನ ಸಮಿತಿ ಪ್ರಾರಂಭಿಸಿ ಅದರ ಕೋಶಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೆ. 1955ರಲ್ಲಿ ಗೋವಾ ವಿಮೋಚನೆಗಾಗಿ ದಿ| ಯು.ಎಸ್‌. ನಾಯಕ್‌ ನೇತೃತ್ವದಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಗೋವಾ ಪ್ರವೇಶಿಸಿ, ಬಂಧನಕ್ಕೀಡಾಗಿದ್ದೆ. ಇದಕ್ಕೂ ಮುನ್ನ 1948ರಲ್ಲಿ ಆರ್‌ಎಸ್‌ಎಸ್‌ ಮೇಲಿನ ನಿರ್ಬಂಧ ಹಿಂದೆಗೆಯಬೇಕು ಎಂಬ ಆಗ್ರಹದ ಸತ್ಯಾಗ್ರಹದಲ್ಲಿ ಭಾಗವಹಿಸಿ 4 ತಿಂಗಳು ಜೈಲುವಾಸ ಅನುಭವಿಸಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಮಟ್ಟಾರು ವಿಟuಲ ಕಿಣಿ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next