Advertisement

ವಿಟ್ಲಪಿಂಡಿ ಉತ್ಸವದಂತೆ ಉಡುಪಿ ಜಿಲ್ಲಾ ಉದಯದ ಉತ್ಸವದಲ್ಲಿ…

06:20 AM Aug 20, 2017 | Team Udayavani |

ಉಡುಪಿ: ಉಡುಪಿ ಜಿಲ್ಲೆಯಾಗಿ 20ನೆಯ ವರ್ಷ ಇನ್ನೇನು ಆರಂಭವಾಗುತ್ತಿದೆ. ಇದಕ್ಕೇಕೆ ಸಂಭ್ರಮ? 1799ರಲ್ಲಿ ಬ್ರಿಟಿಷ್‌ ಅಧಿಕಾರಿ ಸರ್‌ ಥಾಮಸ್‌ ಮನ್ರೊà ಪ್ರಥಮ ಜಿಲ್ಲಾಧಿಕಾರಿಯಾಗಿ ಕರಾವಳಿಗೆ ಬಂದಾಗ ಕಾಸರಗೋಡು ತುದಿಯಿಂದ ಕಾರವಾರದವರೆಗೆ ಹರಡಿತ್ತು ಕೆನರಾ ಜಿಲ್ಲೆ. 1862ರಲ್ಲಿ ದ.ಕ., ಉ.ಕ. ಜಿಲ್ಲೆಯಾಯಿತು, 1956ರಲ್ಲಿ ದ.ಕ. ಜಿಲ್ಲೆಯಿಂದ ಕಾಸರಗೋಡು ಕೈ ತಪ್ಪಿತು. 1997 ರಲ್ಲಿ ದ.ಕ.ಜಿಲ್ಲೆಯಿಂದ ಉಡುಪಿ ಜಿಲ್ಲೆ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರೂಪುಗೊಂಡಿತು. ಈ ಅವಧಿಯ ಅಂತರ ಗಮನಿಸಿದರೆ ಹೊಸ ಜಿಲ್ಲೆಯ ಘೋಷಣೆಯಾಗಿ ಕಾರ್ಯರೂಪಕ್ಕೆ ಬರಲು ಎಷ್ಟು ತ್ರಾಸ ಎನ್ನುವುದು ತಿಳಿಯುತ್ತದೆ. 

Advertisement

ಬೈಂದೂರು ಶಿರೂರು, ಅಮಾಸೆಬೈಲು, ಮಾಳ ಕಡೆಯಿಂದ ಜಿಲ್ಲಾ ಕೇಂದ್ರಕ್ಕೆ ಒಂದು ಕೆಲಸಕ್ಕಾಗಿ ಹೋದರೆ ಅಂದು ರಾತ್ರಿಯೊಳಗೆ ವಾಪಸು ಮನೆಗೆ ಬರುವುದು ಕಷ್ಟ ಸಾಧ್ಯ. ಜನರ ಪರದಾಟದ ಜೊತೆಗೆ ಹಣಕಾಸು, ಸಮಯ ವ್ಯರ್ಥ. ಹೀಗಾಗಿ ಸಣ್ಣ ಸಣ್ಣ ಜಿಲ್ಲೆಗಳ ಸ್ಥಾಪನೆಯ ಕಲ್ಪನೆ ಮೂಡಿತು. ಸರಕಾರದ ಅನುದಾನಗಳು ಬರಬೇಕಾದರೆ ರಾಜ್ಯ ಕೇಂದ್ರದಿಂದ ಜಿಲ್ಲಾವಾರು ವಿಂಗಡಣೆೆಯಾಗುತ್ತದೆ. ಕೋರ್ಟಿನ ಕೆಲಸಕ್ಕಾಗಿ ಮಂಗಳೂರಿಗೆ ಹೋಗುವುದೆಂದರೆ ಒಂಥರ ಶಿಕ್ಷೆಯೇ ಸರಿ ಎಂಬ ಕಾಲವಿತ್ತು. ಒಂದು ವೇಳೆ ಉಡುಪಿ ಜಿಲ್ಲೆಯಾಗಿ ರೂಪುಗೊಳ್ಳದೆ ಇರುತ್ತಿದ್ದರೆ ಈಗ ಕಾಣುತ್ತಿರುವ ಉಡುಪಿ ಆಗಲು ಸಾಧ್ಯವಿರಲಿಲ್ಲ. 

ತಾಲೂಕು ಕೇಂದ್ರಗಳ ವಿಂಗಡಣೆ ಹಿಂದೆಯೂ ಇದೇ ಕಲ್ಪನೆ ಇದೆ. ಇದು ಹೋಬಳಿ, ಗ್ರಾಮಗಳಿಗೂ ಅನ್ವಯ. ಯಾವುದೋ ಕಾಲದಲ್ಲಿ ಒಂದೊಂದು ಹೋಬಳಿಗೆ ಸುಮಾರು 30 ಗ್ರಾಮಗಳು ಇದ್ದದ್ದು ಈಗಲೂ ಹಾಗೆಯೇ ಮುಂದುವರಿಯುತ್ತಿದೆ. ಒಬ್ಬ  ಸಾಮಾನ್ಯ ವ್ಯಕ್ತಿ ಹೋಬಳಿ ಸ್ತರದ ರೆವೆನ್ಯೂ ಇನ್ಸ್‌ಪೆಕ್ಟರ್‌ರನ್ನು ಸಂಪರ್ಕಿಸಲು ಬಂದರೆ ಅವರು ಸುಲಭದಲ್ಲಿ ಸಿಗುವ ಸ್ಥಿತಿ ಈಗಿಲ್ಲ. ಅವರು ತಹಶೀಲ್ದಾರರ ಮೀಟಿಂಗ್‌, ಜಿಲ್ಲಾಧಿಕಾರಿಗಳ ಮೀಟಿಂಗ್‌, ಸಚಿವರ ಆಗಮನ, ಸ್ಥಳ ಪರಿಶೀಲನೆ ಎಂದು ಇರುವಾಗ ಜನಸಾಮಾನ್ಯರ ಕೆಲಸ ಸುಲಲಿತವಾಗಿ ಆಗುವುದು ಹೇಗೆ ಸಾಧ್ಯ? ಕೆಲಸ ಎಷ್ಟು ನಿಧಾನವಾಗುತ್ತದೋ ಅದು ಭ್ರಷ್ಟಾಚಾರಕ್ಕೂ ಕಾರಣವಾಗುತ್ತದೆ. 

1997 ಆಗಸ್ಟ್‌ 25 ರಂದು ಶ್ರೀಕೃಷ್ಣ ಜಯಂತಿಯ ಮರುದಿನ ವಿಟ್ಲಪಿಂಡಿ ಹಬ್ಬದಲ್ಲಿ ಜನಸಾಗರವೇ ರಥಬೀದಿಯಲ್ಲಿ ಹರಿದುಬಂದಿರುತ್ತದೆ. ಅದೇ ದಿನ ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲೆಯನ್ನು ಉದ್ಘಾಟಿಸಿದಾಗ ಅಲ್ಲಿಗೂ ಜನಸಾಗರವೇ ಹರಿದುಬಂದಿತ್ತು. ಪ್ರಾಯಃ ಕುಂದಾಪುರ, ಕಾರ್ಕಳ ತಾಲೂಕಿನ ಮೂಲೆ ಮೂಲೆಯವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಒಂದರ್ಥದಲ್ಲಿ ಅದು ಸರ್ವಪಕ್ಷಗಳ ಸಂಗಮವಾಗಿತ್ತು. ಆಡಳಿತಾರೂಢರು ಜನತಾ ದಳದವರು, ಕಾಂಗ್ರೆಸ್‌ ಪಕ್ಷದ ಶಾಸಕರು, ಬಿಜೆಪಿಯ ವಿಧಾನ ಪರಿಷತ್‌ ಸದಸ್ಯರು ಒಂದೇ ವೇದಿಕೆಯಲ್ಲಿದ್ದರು. ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌, ಸಚಿವರಾದ ರಮೇಶ್‌ ಜಿಗಜಿಣಗಿ, ಎಂ.ಪಿ. ಪ್ರಕಾಶ್‌, ಬಿ.ಎ. ಮೊದಿನ್‌, ಉಸ್ತುವಾರಿ ಸಚಿವ ಕೆ.ಜಯಪ್ರಕಾಶ್‌  ಹೆಗ್ಡೆ, ಶಾಸಕ ಯು.ಆರ್‌. ಸಭಾಪತಿ, ವಿಧಾನ ಪರಿಷತ್‌ ಸದಸ್ಯ ಡಾ| ವಿ.ಎಸ್‌.ಆಚಾರ್ಯ ಮೊದಲಾದ ಜನನಾಯಕರಿಗೆ ಸ್ವಾಗತ ಕೋರುವ ಕಮಾನುಗಳು, ಬ್ಯಾನರ್‌ಗಳು, ತಳಿರುತೋರಣಗಳಿಂದ ನಗರವೇ ಮದುವಣಗಿತ್ತಿಯಂತೆ ಅಲಂಕರಣ ಗೊಂಡಿತ್ತು. ಅತ್ತ ಕೃಷ್ಣ ಜನಿಸಿದ ಸಂಭ್ರಮದ ಪ್ರಯುಕ್ತ ಶ್ರೀಕೃಷ್ಣನ ತಾಣವೂ ಅಲಂಕರಣ ಗೊಂಡಿತ್ತು. ಮಳೆಗಾಲವಾದ ಕಾರಣ ಸಹಜವಾಗಿ ಮಳೆಯೂ ಜೋರಾಗಿತ್ತು. ಆದರೆ ಜನರ ಉತ್ಸಾಹಕ್ಕೆ ಮಾತ್ರ ವರುಣಾಗಮನ ಧಕ್ಕೆ ತಂದಿರಲಿಲ್ಲ. ಆ ಒಂದೇ ದಿನ ಎರಡು ಸಂಭ್ರಮಗಳನ್ನು ಅನುಭವಿಸಿದವರು ಉಡುಪಿ ಜಿಲ್ಲೆಯ ಜನರು… 

ಆಗ ಉಡುಪಿ ನಗರದಲ್ಲಿ ಮಾತ್ರ ಸಂಭ್ರಮವಿದ್ದರೆ ಈ ಬಾರಿ ಆ. 25 ರಂದು ನಾಡಿನ ಮೂಲೆ ಮೂಲೆಗಳಲ್ಲಿಯೂ ಗಣೇಶ ಚತುರ್ಥಿಯ ಸಂಭ್ರಮ ನಡೆಯುತ್ತದೆ. ಉಡುಪಿ ಜಿಲ್ಲೆಯ ವಿಂಶತಿ ಆಚರಣೆ ಜೊತೆ ಗಣೇಶನ ಆಗಮನವೂ ಆಗುತ್ತಿದೆ. 

Advertisement

ಸಾಮಾನ್ಯರ ಸಂತಸ
ಕುಂದಾಪುರ, ಕಾರ್ಕಳ ತಾಲೂಕಿನ ಮೂಲೆ ಮೂಲೆಯವರು ತಮ್ಮ ಇಡೀ ದಿನವನ್ನು ಜಿಲ್ಲಾ ಮಟ್ಟದ ಕೆಲಸಕ್ಕಾಗಿ ಮೀಸಲಿಡುವ ಅನಿವಾರ್ಯತೆಯಿಂದ ಬೇಸತ್ತು ಹೋಗಿದ್ದರು. ಉಡುಪಿ ಜಿಲ್ಲೆಯಾಗಿ ರೂಪುಗೊಂಡಾಗ ಹೆಚ್ಚು ಸಂತಸಪಟ್ಟವರು ಸಾಮಾನ್ಯ ಜನರು. 

– ಮಟಪಾಡಿ ಕುಮಾರಸ್ವಾಮಿ 

Also Read This…:
►Part 1►ಉಡುಪಿ ಜಿಲ್ಲಾ ವಿಂಶತಿ ಸಂಭ್ರಮ: ಕೌಂಟ್‌ಡೌನ್‌: //bit.ly/2v3w1vt

Advertisement

Udayavani is now on Telegram. Click here to join our channel and stay updated with the latest news.

Next