ವಿಟ್ಲ : ವಿಟ್ಲ ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್‌ಗ ಪ್ರಾಂತ್ಯಾಧ್ಯಕ್ಷ ಗಣೇಶ್ ಶೆಟ್ಟಿ ಅವರ ಅಧಿಕೃತ ಭೇಟಿ, ಸೇವಾ ಸಾರ್ಥಕ್ಯ ಉದ್ಘಾಟನೆ ಹಾಗೂ ಹಬ್ಬಗಳ ಆಚರಣೆ ಕಾರ್ಯಕ್ರಮ ವಿಟ್ಲದ ವಿಠಲ ಪ.ಪೂ. ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಪ್ರಾಂತ್ಯಾಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ ವಿಟ್ಲ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿದ್ದು ಮತ್ತೆ ಒಂದನೇ ಸ್ಥಾನಕ್ಕೇರುವ ಸಾಮರ್ಥ್ಯ ಗಳಿಸಿ ಎಲ್ಲ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿ, ಮಾತನಾಡಿ ವಿಟ್ಲ ಲಯನ್ಸ್ ಕ್ಲಬ್ ಉತ್ತಮ ಸಮಾಜ ಸೇವೆಗಳ ಮೂಲಕ ಜನಮನ್ನಣೆ ಗಳಿಸುತ್ತಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವಿ.ಎನ್.ಸುದರ್ಶನ್ ಪಡಿಯಾರ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಮಾತನಾಡಿದರು. ಅಪರ್ಣಾ ಗಣೇಶ್ ಶೆಟ್ಟಿ, ಗವರ್ನರ್ ಪ್ರೋಗ್ರಾಂ ಕೋ-ಆರ್ಡಿನೇಟರ್ ಡಾ| ಗೀತಪ್ರಕಾಶ್, ವಿಟ್ಲ ಲಯನ್ಸ್ ಕ್ಲಬ್ ಕೋಶಾಧಿಕಾರಿ ಎಂ. ಹರೀಶ್ ನಾಯಕ್, ಲಯನ್ಸ್ ಜಿಲ್ಲೆಯ ಡೆಂಟಲ್ ಕ್ಯಾಂಪ್ ಕೋ-ಆರ್ಡಿನೇಟರ್ ಡಾ| ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ಲಯನೆಸ್ ಅಧ್ಯಕ್ಷೆ ಲೀನಾ ರೋಡ್ರಿಗಸ್, ಹಿರಿಯ ಸದಸ್ಯರಾದ ಸಿ.ವಿ. ಗೋಪಾಲಕೃಷ್ಣ, ಎಂ. ರಾಧಾಕೃಷ್ಣ ನಾಯಕ್, ಎಂ. ಜನಾರ್ದನ, ಉಗ್ಗಪ್ಪ ಶೆಟ್ಟಿ ಕೊಂಬಿಲ, ವಿಟ್ಲ ಕಾರು ಚಾಲಕ -ಮಾಲಕ ಸಂಘದ ಅಧ್ಯಕ್ಷ ಪ್ರಕಾಶ್, ಯು.ಪಿ. ಜಯರಾಮ್ ಉಕ್ಕುಡ, ಪ್ರಭಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಭಡ್ತಿ ಹೊಂದಿದ ವಿಟ್ಲ ಪೊಲೀಸರಾದ ಜಿನ್ನಪ್ಪ ಹಾಗೂ ಶ್ರೀಧರ್ ಅವರನ್ನು ಸಮ್ಮಾನಿಸಲಾಯಿತು. ಟ್ರಾಫಿಕ್ ಎವೇರ್‌ನೆಸ್ ಬಗ್ಗೆ ಹೊರತಂದ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ನೂತನ ಸದಸ್ಯರಾಗಿ ಉಪನ್ಯಾಸಕಿ ಜಲಜಾಕ್ಷಿ ಅವರನ್ನು ಸೇರ್ಪಡೆಗೊಳಿಸಲಾಯಿತು. ನರಸಿಂಹ ಶಾಸ್ತ್ರಿ ಅವರಿಂದ ದೇಹದಾನ, ಜೆಸಿಂತಾ ಸೋಫಿಯ ಮಸ್ಕರೇನ್ಹಸ್ ಮತ್ತು ಗಂಗಾಧರ್ ಅವರಿಂದ ಕಣ್ಣುದಾನ, ಸಿ.ವಿ.ಗೋಪಾಲಕೃಷ್ಣ ಅವರಿಂದ ನಾಲ್ಕು ಮನೆ ನಿರ್ಮಿಸುವ ಯೋಜನೆಗಳನ್ನು ಪ್ರಕಟಿಸಲಾಯಿತು.
ವಿಟ್ಲ ಮಂಗೇಶ್ ಭಟ್, ಡಾ| ಗಾಯತ್ರಿ ಜಿ .ಪ್ರಕಾಶ್, ರಾಧಿಕಾ ಆರ್. ನಾಯಕ್, ಶ್ವೇತಾ ರವಿಕುಮಾರ್, ಮನೋಜ್ ಕುಮಾರ್ ರೈ ಸಹಕರಿಸಿದರು. ಕಾರ್ಯದರ್ಶಿ ಮೋಹನ್ ಬಿ. ವಂದಿಸಿದರು.