ವಿಟ್ಲ: ಕೇಪು ಗ್ರಾಮದ ಮಣಿಯಾರಪಾದೆ, ಅಮೈ, ಕುದ್ದುಪದವು ಆಶ್ರಮಶಾಲೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಕಿರುಸೇತುವೆ, ಮೋರಿ ನಿರ್ಮಾಣ, ರಸ್ತೆ ವಿಸ್ತರಣೆ, ಡಾಮರೀಕರಣ ಇತ್ಯಾದಿ ಅವಶ್ಯ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಬೇಕು. ಸಂಬಂಧಪಟ್ಟವರು ತತ್‌ಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಜನರು ಆಗ್ರಹಿಸಲಾರಂಭಿಸಿದ್ದಾರೆ.
ಮಣಿಯಾರಪಾದೆ, ಅಮೈ, ಕುದ್ದುಪದವು ಆಶ್ರಮಶಾಲೆ ಮೂಲಕ ತೋರಣಕಟ್ಟೆ ಸಂಪರ್ಕ ರಸ್ತೆ 5 ಕಿಮೀ ದೂರ ಇದೆ. ಈ ರಸ್ತೆಯಲ್ಲಿ 750-800 ಮೀಟರ್ ದೂರ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಉಳಿದ ಕಡೆಗಳಲ್ಲಿ ರಸ್ತೆ ಅಗಲ ಕಿರಿದಾಗಿದೆ ಮತ್ತು ಸಂಪೂರ್ಣ ಕೆಟ್ಟುಹೋಗಿದೆ. ಪುಳಿತ್ತಡಿ ಎಂಬಲ್ಲಿ ಎರಡು ತೋಡುಗಳು ಸೇರುತ್ತವೆ, ಮಳೆಗಾಲದಲ್ಲಿ ಪ್ರವಾಹ ಇರುತ್ತದೆ. ಸಂಚಾರವೂ ಕಷ್ಟದಾಯಕವಾಗಿದೆ. ಬೇಸಗೆಯಲ್ಲಿ ತೋಡಿಗಿಳಿದು ವಾಹನಗಳು ಸಂಚರಿಸುತ್ತವೆ. ಅಲ್ಲಿ ಕಿರುಸೇತುವೆ ನಿರ್ಮಾಣವಾಗಬೇಕಾಗಿದೆ.
ಕಿರುಸೇತುವೆ ನಿರ್ಮಿಸಲು ಪ್ರಸ್ತಾಪ ಸಲ್ಲಿಸಲಾಗಿದೆ. ಈ ಕಿರುಸೇತುವೆಗೆ ಸುಮಾರು 50 ಲಕ್ಷ ರೂ.ಗಳ ಅನುದಾನ ಬೇಕಾಗುತ್ತದೆ. ಈ ಸೇತುವೆ ಅಥವಾ ಬೃಹತ್ ಮೋರಿ ನಿರ್ಮಿಸದೇ ಇದ್ದಲ್ಲಿ ಮಳೆಗಾಲದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲಾಗುವುದಿಲ್ಲ.
ಪಕ್ಕದಲ್ಲೇ ಅಮೈ ಕಿರಿಯ ಪ್ರಾಥಮಿಕ ಶಾಲೆ ಇದೆ. ಬೆರಳೆಣಿಕೆಯ ಮಕ್ಕಳು ಈ ಶಾಲೆಗೆ ಇದೇ ಮಾರ್ಗದಲ್ಲಿ ಸಾಗಬೇಕು. ಇದೇ ಮಾರ್ಗದಲ್ಲಿ ಮಿನಿ ಬಸ್ಸುಗಳು, ರಿಕ್ಷಾಗಳು, ಕಾರುಗಳಲ್ಲಿ ವಿದ್ಯಾರ್ಥಿಗಳು ಕೇಪು ಸರಕಾರಿ ಶಾಲೆಗೆ, ಅಡ್ಯನಡ್ಕ ಶಾಲೆಗೆ ತೆರಳುತ್ತಾರೆ. ಈ ಮಾರ್ಗದ ಮೂಲಕ ನೂರಾರು ಫಲಾನುಭವಿಗಳು ಪೇಟೆ ಸೇರುತ್ತಾರೆ. ಅವರಿಗೆಲ್ಲ ಈ ರಸ್ತೆ ಅನಿವಾರ್ಯವಾಗಿದೆ. ಹತ್ತಿರದ ಪುಣಚ ಗ್ರಾಮವನ್ನು ಸಂಪರ್ಕಿಸಲು ಕೂಡಾ ಈ ರಸ್ತೆ ಉಪಯುಕ್ತವಾಗಿದೆ.
ಅಮೈ ಎಂಬಲ್ಲಿ ಈ ರಸ್ತೆಯನ್ನು ಕುದ್ದುಪದವು ಚೆಲ್ಲಡ್ಕ, ಅಮೈ ರಸ್ತೆಯೂ ಸಂಪರ್ಕಿಸುತ್ತದೆ. ಮಣಿಯಾರಪಾದೆ ರಸ್ತೆ ಅಭಿವೃದ್ಧಿಯಾದರೆ ಕುದ್ದುಪದವು ಅಮೈ ಕೊಂಡಿಗೆ ಮಹತ್ವ ಬರುತ್ತದೆ. ಆ ಮೂಲಕ ಕುದ್ದುಪದವು ಅಮೈ ರಸ್ತೆಯ ನೂರಾರು ಫಲಾನುಭವಿಗಳು ಕಲ್ಲಡ್ಕ ಕಾಂಞಂಗಾಡ್ ಅಂತಾರಾಜ್ಯ ರಸ್ತೆ ಸಂಪರ್ಕಿಸಲು ಅನುಕೂಲವಾಗುತ್ತದೆ. ಕುದ್ದುಪದವು ಚೆಲ್ಲಡ್ಕ, ಅಮೈ ರಸ್ತೆಯೂ ಅಭಿವೃದ್ಧಿಯಾಗಿಲ್ಲ. 1.750 ಕಿಮೀ ದೂರದ ಈ ರಸ್ತೆಯ ಸ್ವಲ್ಪ ಭಾಗ ಕಾಂಕ್ರೀಟ್ ರಸ್ತೆಯಾಗಿದೆ. ಈ ರಸ್ತೆಯೂ ಸಂಪೂರ್ಣ ಕಾಂಕ್ರೀಟ್ ರಸ್ತೆಯಾದಲ್ಲಿ ಈ ಭಾಗದ ಫಲಾನುಭವಿಗಳಿಗೆ ಪ್ರಯೋಜನವಾಗುತ್ತದೆ.
ಅನುದಾನ ಬಿಡುಗಡೆಯಾಗಿತ್ತು!
ಹತ್ತು ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿತ್ತು. ಗುತ್ತಿಗೆದಾರರು ಅಲ್ಲಲ್ಲಿ ಕಾಮಗಾರಿಯನ್ನೂ ಆರಂಭಿಸಿದ್ದರು. ಹಲವಾರು ಕಾರಣಗಳಿಂದ ಬಿಡುಗಡೆಯಾದ ಅನುದಾನವೂ ಬರಲಿಲ್ಲ. ರಸ್ತೆಯೂ ಅಭಿವೃದ್ಧಿಯಾಗಲಿಲ್ಲ. ಈಗ ಈ ರಸ್ತೆಯ ಮೂಲಕ ಜನರಿಗೆ ಹೆಚ್ಚು ಅನುಕೂಲವಾಗುತ್ತಿದ್ದು, ರಸ್ತೆ ಅಭಿವೃದ್ಧಿಯಾಗಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.