ವಿಟ್ಲ: ಜನವರಿಯಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೆ ನಡೆಯಲಿದ್ದು, ಸಂತೆ ಶುಲ್ಕ ವಸೂಲಿ ಹರಾಜಿನ ಮೊತ್ತ ಇಳಿಸಬೇಕು. ಟೆಂಡರ್ ಮೊತ್ತ ಏರಿಸಿದರೆ ವ್ಯಾಪಾರಿಗಳು ಬಾಡಿಗೆ ಹೆಚ್ಚು ಕೊಡಬೇಕು. ಪರಿಣಾಮವಾಗಿ ವ್ಯಾಪಾರಿಗಳು ವಸ್ತುಗಳ ಮಾರಾಟ ಬೆಲೆ ಏರಿಸುತ್ತಾರೆ. ಇದು ಜನಸಾಮಾನ್ಯರಿಗೆ ತಟ್ಟುತ್ತದೆ ಎಂದು ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಪ್ರಸ್ತಾಪಿಸಿದರು.
ಅವರು ಪ.ಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆ ವಹಿಸಿದ್ದರು.
ಇದನ್ನು ಆಕ್ಷೇಪಿಸಿದ ಸದಸ್ಯ ಅಬ್ದುಲ್ ರಹಿಮಾನ್ ಅವರು ಜಾತ್ರೆಗೆ ವ್ಯಾಪಾರಕ್ಕೆ ಬರುವವರು ಲಾಭಕ್ಕಾಗಿ ಬರುತ್ತಾರೆ. ಟೆಂಡರ್ ದರ ಇಳಿಕೆ ಬೇಡ ಎಂದರು.
ಪ.ಪಂ. ನಲ್ಲಿ 22 ಜನ ವಾಲ್ವ್ ಮ್ಯಾನ್, ಪಂಪು ಚಾಲಕರು ಗೌರವಧನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರ ಸಂಖ್ಯೆಯನ್ನು ಹತ್ತಕ್ಕೆ ಇಳಿಸಿ ವೇತನ ಹೆಚ್ಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ವಿಟ್ಲದ ಟ್ರಾಫಿಕ್ ಜಾಮ್ ಸಮಸ್ಯೆ, ನೀರಿನ ಸಮಸ್ಯೆ, ತ್ಯಾಜ್ಯ ನಿರ್ವಹಣೆ ಸಮಸ್ಯೆ, ಇತ್ಯಾದಿ ಪ್ರಮುಖ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾತುಕತೆ ನಡೆಯಿತು. ಪ.ಪಂ. ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಜಯಂತ್ ಸಿ.ಎಚ್., ವಸಂತ್, ಹರೀಶ್, ರಕ್ಷಿತಾ, ಕೃಷ್ಣ ನಾಯ್ಕ, ವಿಜಯಲಕ್ಷ್ಮೀ , ಸುನಿತಾ ಪೂಜಾರಿ, ಡೀಕಯ್ಯ, ಪದ್ಮಲತಾ,, ಲತಾ ಅಶೋಕ್ ಪೂಜಾರಿ, ಮುಖ್ಯಾಧಿಕಾರಿ ಕರುಣಾಕರ ಕುಲಾಲ್, ನಾಮನಿರ್ದೇಶಿತ ಸದಸ್ಯರಾದ ಶಾಕಿರಾ, ಕೊಲ್ಯ ಶ್ರೀನಿವಾಸ ಶೆಟ್ಟಿ ಹಾಗೂ ಸಿಬಂದಿ ರತ್ನಾ ಮತ್ತಿತರರಿದ್ದರು.
ಕಡಿಮೆ ಜಾಗ ಇರುವವರಿಗೆ ಮನೆ ಕಟ್ಟಲು ಆಫ್ಲೈನ್ ಪರವಾನಿಗೆ ಕೊಡಿ
ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಅವರು ಮಾತನಾಡಿ, ಐದು ಸೆಂಟ್ಸ್ ಮತ್ತು ಅದಕ್ಕಿಂತ ಕಡಿಮೆ ಜಾಗ ಇರುವ ವ್ಯಕ್ತಿಗೆ ಮನೆ ಕಟ್ಟಲು ಆಫ್‌ಲೈನ್‌ನಲ್ಲಿ ಲೈಸೆನ್ಸ್ ಕೊಡಬೇಕು. ಆನ್‌ಲೈನಿನಲ್ಲಿ ನೋಂದಣಿ ಮಾಡುವಾಗ ಆಗುವ ಗೊಂದಲ ಹಾಗೂ ಶುಲ್ಕ ಬಡಜನರಿಗೆ ಆಗುವ ಆರ್ಥಿಕ ಹೊರೆ ಬಹಳ ಎಂದು ವಿವರಿಸಿದರು. ಧ್ವನಿಗೂಡಿಸಿದ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಅವರು ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮನೆ ಕಟ್ಟಬೇಕಾದರೆ ಪುತ್ತೂರು ನಗರಾಭಿ ವೃದ್ಧಿ ಪ್ರಾ ಧಿಕಾರಕ್ಕೂ ಹಣ ಪಾವತಿಸಿ, ಪ.ಪಂ.ನಲ್ಲಿ ಲೆಸೆನ್ಸ್‌ಗಾಗಿ ಹಣ ಪಾವತಿಸಬೇಕು. ಇದು ಜನಸಾಮಾನ್ಯರಿಗೆ ಹೊರೆ ಆಗುತ್ತಿದೆ ಎಂದರು.ವಿ. ಕೆ.ಎಂ. ಅಶ್ರಫ್, ಅಶೋಕ್ ಕುಮಾರ್ ಶೆಟ್ಟಿ , ಮಹಮ್ಮದ್‌ಇಕ್ಬಾಲ್, ಸ್ಥಾಯೀ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಚರ್ಚೆಯಲ್ಲಿ ಪಾಲ್ಗೊಂಡರು. ಪಕ್ಷಭೇದ ಮರೆತು ಈ ಕುರಿತು ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.