ವಿಟ್ಲ: ಮಾಣಿಯ ಕಾಪಿಕಾಡು ನಿವಾಸಿ ದಿ| ತ್ಯಾಂಪ ಪೂಜಾರಿ ಅವರ ಪುತ್ರಿ, ನೆಟ್ಲಮುಟ್ನೂರು ಗ್ರಾಮದ ದೇವಿನಗರ ನಿವಾಸಿ ಸಂಜೀವ ಡಿ. ಅವರ ಪತ್ನಿ ಶಕುಂತಳಾ(35) ಅವರನ್ನು ಹಾಡಹಗಲೇ ರಸ್ತೆಯಲ್ಲಿ ಕೊಲೆಗೈದ ಆರೋಪಿ ಎಮನಾಜೆ ಶ್ರೀಧರ ಮುಗೇರ (39)ನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಶಕುಂತಳಾ ಕ್ಯಾಂಟೀನ್ ಬಾಗಿಲು ಹಾಕಿ ಮಧ್ಯಾಹ್ನ ಪುತ್ತೂರು ಕಡೆಯಿಂದ ಮಾಣಿ ಕಡೆಗೆ ತನ್ನ ಆಕ್ಟೀವಾ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಬಂದ ವ್ಯಕ್ತಿ ನೇರಳಕಟ್ಟೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮಾತನಾಡಿಸಿದ್ದಾನೆ. ಆಮೇಲೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಒಂದು ವರ್ಷಕ್ಕೂ ಮುನ್ನ ಶ್ರೀಧರನ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಈಕೆ 1 ವರ್ಷದಿಂದ ತನ್ನ ಸ್ಕೂಟರ್‌ನಲ್ಲಿ ಪುತ್ತೂರಿಗೆ ಹೋಗಿ ಬರುತ್ತಿರುವುದು ಮುಳುವಾಯಿತೇ ? ಮತ್ತು ಯಾವುದೋ ಕಾರಣಕ್ಕೆ 1 ವರ್ಷದ ಹಿಂದೆ ಶ್ರೀಧರನು ಮನೆಗೆ ಬಂದು ಶಕುಂತಳಾಗೆ ಅವಾಚ್ಯ ಶಬ್ದಗಳಿಂದ ಬೈದು ಘಟನೆ ಪೊಲೀಸ್ ಠಾಣೆಗೆ ತಲುಪಿದ್ದು ಆತನ ಹಗೆತನ ಹೆಚ್ಚಾಗಲು ಕಾರಣವಾಯಿತೇ? ಅದೇ ಕಾರಣಕ್ಕೆ ಕ್ಯಾಂಟೀನ್ ಬಳಿಯಲ್ಲಿ ಆಟೋ ರಿಕ್ಷಾ ಚಲಾ ಯಿಸಿಕೊಂಡು ಆಕೆಯನ್ನು ಗುರಾಯಿಸುತ್ತ ಸಿಟ್ಟು ತೋರ್ಪಡಿಸುತ್ತಿದ್ದನೇ? ಮತ್ತು ಇನ್ನಿತರ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವರಿಬ್ಬರ ನಡುವಿನ ಸಂಬಂಧದ ಕುರಿತೂ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ವಿವರವಾದ ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ. ಬಳಿಕ ಪೂರ್ಣ ಚಿತ್ರಣ ಸಿಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.