Advertisement

Vitla: ವ್ಯಕ್ತಿಯ ಸಾವಿನಲ್ಲಿ ಅನುಮಾನ; ದಫನ ಮಾಡಿದ ಮೃತದೇಹ ಮೇಲಕ್ಕೆತ್ತಿ ಮರು ತನಿಖೆ

02:12 PM May 23, 2024 | Team Udayavani |

ವಿಟ್ಲ: 18 ದಿನಗಳ ಹಿಂದೆ ನಿಧನ ಹೊಂದಿದ ವ್ಯಕ್ತಿಯ ಸಾವಿನಲ್ಲಿ ನಿಗೂಢತೆ ಇರುವುದಾಗಿ ಆರೋಪಿಸಿ ಮೃತರ ಸಹೋದರ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ದಫನ ಮಾಡಿದ ಮೃತದೇಹವನ್ನು ಮೇಲಕ್ಕೆತ್ತಿ ಮರು ತನಿಖೆ ಮಾಡುವ ಕಾರ್ಯಕ್ಕೆ ಮಂಜೇಶ್ವರ ಹಾಗೂ ವಿಟ್ಲ ಪೊಲೀಸರು ಮುಂದಾಗಿದ್ದಾರೆ.

Advertisement

ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಮೃತಪಟ್ಟವರು. ಇವರು ಮೇ 6 ರಂದು ಮೃತಪಟ್ಟಿದ್ದು, ಅದೇ ದಿನ ಸಂಜೆ ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ದಫನ ನಡೆಸಲಾಗಿತ್ತು. ಅದೊಂದು ಸಹಜ ಸಾವಲ್ಲ ಎಂದು ಆರೋಪಿಸಿ ಮೃತರ ಸಹೋದರ ಇಬ್ರಾಹಿಂ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು, ಧಪನಗೊಂಡ ದೇಹವನ್ನು ಮೇಲಕ್ಕೆತ್ತಿ ಶವ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಪಡೆದು ಮಂಜೇಶ್ವರ ಪೊಲೀಸರು ರಹ್ಮಾನಿಯಾ ಜುಮ್ಮಾ ಮಸೀದಿಗೆ ಗುರುವಾರ ಬೆಳಗ್ಗೆ ಆಗಮಿಸಿದ್ದಾರೆ.

ಮಂಗಳೂರಿನ ಯೆನಪೋಯ ಆಸ್ಫತ್ರೆಯ ಫಾರೆನ್ಸಿಕ್ ವಿಭಾಗದ ಸಿಬಂದಿಗಳು, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ನೆರವು ನೀಡಲಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಸ್ಥಳದಲ್ಲಿ ಉಪಸ್ಥಿತರಿದ್ದಾರೆ.

ಮೃತ ಅಶ್ರಫ್ ತಮ್ಮ ಮನೆ ಸಮೀಪ ಗೂಡಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಮೇ 5 ರಂದು ರಾತ್ರಿ ಗೂಡಂಗಡಿ ಮುಚ್ಚಿದ ಬಳಿಕ, ಆಹಾರ ಸೇವಿಸಿ ನಿದ್ರಿಸಿದ್ದರು. ಆದರೆ ಮರು ದಿನ ಬೆಳಗ್ಗೆ 6 ಗಂಟೆಗೆ ಅವರನ್ನು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿತ್ತು. ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪತ್ನಿ ಇತರರಿಗೆ ಮಾಹಿತಿ ನೀಡಿದ್ದರು.

Advertisement

ಅಶ್ರಫ್ ಸಾವನ್ನಪ್ಪುವ ಸಂದರ್ಭ ಸಹೋದರ ಇಬ್ರಾಹಿಂ ಪುಣೆಯಲ್ಲಿದ್ದರು. ಸಾವಿನಲ್ಲಿ ನಿಗೂಢತೆ ಇರುವುದಾಗಿ ಸೂಚಿಸಿ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next