Advertisement

ಮತಗಳಿಕೆಯ ದಾಳವಾದ ವಿಐಎಸ್‌ಎಲ್‌

12:44 AM Feb 01, 2023 | Team Udayavani |

ಪ್ರತೀ ಸಲ ಚುನಾವಣೆ ಎದುರಾದಾಗ ಕೆಲವು ವಿಚಾರಗಳು ಸದ್ದು ಮಾಡು ತ್ತವೆ. ಈ ಬಾರಿಯೂ ಹಾಗೆಯೇ. ಹಲವು ವಿಚಾರಗಳು ಚುನಾವಣ ಪ್ರಚಾರದ ವಸ್ತುವಾಗುವ ಸಾಧ್ಯ ತೆಗಳಿವೆ. ಅಂಥ  “ಎಲೆಕ್ಷನ್‌ ಅಜೆಂಡಾ’ದ ಬಗ್ಗೆ  ಈ ಮಾಲಿಕೆ.

Advertisement

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು 100 ವರ್ಷದ ಹಿಂದೆ ಸ್ಥಾಪಿಸಿದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್‌) ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮುಚ್ಚುವ ಹಂತ ತಲುಪಿದೆ. ಆದರೆ ರಾಜಕೀಯ ಕೆಸರೆರಚಾಟ ಜೋರಾಗಿದೆ. ಈ ಕಾರ್ಖಾನೆ ಪುನಶ್ಚೇತನ ವಿಷಯ ದಶಕದಿಂದಲೂ ಮತಗಳಿಕೆಗೆ ದಾಳವಾಯಿತು. ಸಾವಿರಾರು ಕೋಟಿ ಬಂಡವಾಳ ಹೂಡುವ ಕನಸು ಬಿತ್ತಿ ಮತ ಕೊಯ್ಲು ಮಾಡಲಾಯಿತು.

ಇಪ್ಪತ್ತು ವರ್ಷಗಳ ಹಿಂದೆ ಆರಂಭವಾದ ಕಾರ್ಖಾನೆ ಸಮಸ್ಯೆಗಳು ರಾಜಕೀಯ ಮುಖಂಡರ ಆಗಮನಕ್ಕೆ ಕಾರಣವಾಯಿತು. ಕಾರ್ಮಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಪಕ್ಷದ ಮುಖಂಡರು ಧರಣಿ- ಪ್ರತಿಭಟನೆ ಮಾಡಿ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿದ್ದರು. ದಶಕದಿಂದ ಈಚೆಗೆ ವಿಐಎಸ್‌ಎಲ್‌ ಉಳಿಸುವ ಭರವಸೆಗಳು ಬಲಗೊಳ್ಳುತ್ತ ಚುನಾವಣಾ ವಿಷಯಗಳಾದವು. ಈ ಬಾರಿಯೂ ಅಷ್ಟೇ. ವಿಐಎಸ್‌ಎಲ್‌ ಪುನಶ್ಚೇತನಕ್ಕೆ ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇನ್ನೊಂದೆಡೆ ಧರಣಿ-ಪ್ರತಿಭಟನೆ ನಡೆಯುತ್ತಿದೆ.

2000ನೇ ಇಸವಿಯಲ್ಲಿ ಮೊದಲ ಬಾರಿ ಖಾಸಗೀಕರಣ ಪ್ರಸ್ತಾವಿಸಲಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. 2013ರಲ್ಲಿ ಖಾಸಗಿ, ಸರಕಾರಿ ಜಂಟಿ ಸಹಭಾಗಿತ್ವದಲ್ಲಿ ತರುವ ಪ್ರಯತ್ನ ನಡೆದಿತ್ತು. 2016ರಲ್ಲಿ ನೀತಿ ಆಯೋಗ ಬಂಡವಾಳ ಹಿಂತೆಗೆತ ಪ್ರಸ್ತಾವನೆಗೆ ಅಂಗೀಕಾರ ನೀಡಿತು. 2019 ಖಾಸಗೀಕರಣಕ್ಕೆ ಒಪ್ಪಿಗೆ ಸಿಕ್ಕಿತ್ತು. ಈ ಎಲ್ಲ ಹಂತಗಳಲ್ಲೂ ಹೋರಾಟಗಳು ರಾಜಕೀಯ ಗೊಂಡವು. ಪರಸ್ಪರ ರಾಜಕೀಯ ಆರೋಪಗಳು ಹೆಚ್ಚಾದವು.

2010ರಿಂದ ಈಚೆಗೆ ಮೂರು ಬಾರಿ ಕೇಂದ್ರ ಸಚಿವರು ವಿಐಎಸ್‌ಎಲ್‌ ಕಾರ್ಖಾನೆಗೆ ಭೇಟಿ ನೀಡಿದರೂ ನಯಾಪೈಸೆ ಬಂಡವಾಳ ಬರಲಿಲ್ಲ. ರಾಮ್‌ವಿಲಾಸ್‌ ಪಾಸ್ವಾನ್‌ ಬಂದು ಹೋದರು. 2015ರಲ್ಲಿ ನರೇಂದ್ರ ಸಿಂಗ್‌ ತೋಮರ್‌ ಅವರು ಬಂದಾಗ ರಾಜ್ಯ ಸರಕಾರ ಗಣಿ ಕೊಟ್ಟರೆ ಒಂದು ಸಾವಿರ ಕೋಟಿ ಕೊಡುವ ಭರವಸೆ ನೀಡಿದರು. ಸಿದ್ದರಾಮಯ್ಯ ಸರಕಾರದಲ್ಲಿ ಗಣಿ ಸಚಿವರಾಗಿದ್ದ ವಿನಯ್‌ ಕುಲಕರ್ಣಿ 150 ಎಕ್ರೆ ಗಣಿ ಮಂಜೂರು ಮಾಡಿದ್ದರು. ಅಂದು ಮಾಜಿ ಶಾಸಕರಾಗಿದ್ದ ಸಂಗಮೇಶ್‌ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಶಾಸಕ ಅಪ್ಪಾಜಿಗೌಡರ ಪಾತ್ರವೂ ಇತ್ತು. 2018ರಲ್ಲಿ ಕೇಂದ್ರ ಉಕ್ಕು ಸಚಿವ ಚೌದ್ರಿ ಬೀರೆಂದ್ರ ಸಿಂಗ್‌ ಬಂದು ಕಮಿಟಿ ಕಳುಹಿಸಿ ಇಲ್ಲಿಗೆ ಏನು ಬೇಕು ಹಾಕುತ್ತೇವೆ ಎಂದು ಭರವಸೆ ನೀಡಿದರು. ಅನಂತರ ಮೆಗಾ ಸ್ಟೀಲ್‌ ಪ್ಲಾಂಟ್‌ ಮಾಡಲು ಆರು ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ಬೆಂಗಳೂರಿ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಆದರೆ ಯಾವುದೂ ಫಲಪ್ರದವಾಗಲಿಲ್ಲ.

Advertisement

ವಿಐಎಸ್‌ಎಲ್‌ ಬಗ್ಗೆ ಬಿಜೆಪಿ ಕಾಳಜಿ ವಹಿಸುತ್ತಿದ್ದಂತೆ ಮತ ಗಳಿಕೆ ಪ್ರಮಾಣ ಏರಿಕೆ ಕಂಡಿತು. ವಿಧಾನಸಭೆಯಲ್ಲಿ 10 ಸಾವಿರ ಮತ ಸಿಕ್ಕರೆ, ಲೋಕಸಭೆ ಚುನಾವಣೆಯಲ್ಲಿ 50 ಸಾವಿರ ಮೇಲ್ಪಟ್ಟು ಮತಗಳು ಬಿಜೆಪಿಗೆ ಬರಲಾರಂಭಿಸಿದವು. ವಿಐಎಸ್‌ಎಲ್‌ ಕಾರ್ಖಾನೆ ಪುನಃಶ್ಚೇತನ ಗೊಳಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಗೆಲ್ಲಬಹುದು ಎಂಬ ಬಿಜೆಪಿ ಲೆಕ್ಕಾಚಾರಕ್ಕೆ  ಫಲ ಸಿಕ್ಕಿಲ್ಲ. ಕಾರ್ಖಾನೆ ಕೇಂದ್ರ ಸರಕಾರ ಒಡೆತನ ದಲ್ಲಿರುವುದರಿಂದ ಭದ್ರಾವತಿ ಶಾಸಕರು-ಮಾಜಿ ಶಾಸಕರಿಗೆ ಕೇಂದ್ರದತ್ತ ಬೊಟ್ಟು ಮಾಡುವುದು ಸಲೀಸಾಗಿದೆ.

ಚೆಂಡು ಕೇಂದ್ರದ ಅಂಗಳದಲ್ಲಿರುವುದು ಸ್ಥಳೀಯ ಶಾಸಕರಿಗೆ ಅನುಕೂಲವಾಗಿದೆ. ಕಾರ್ಮಿಕರ ಪ್ರತಿಭಟನೆಗಳಲ್ಲಿ ಉಭಯ ಪಕ್ಷಗಳ ಮುಖಂ ಡರು ಮುಂದಾಳತ್ವ ವಹಿಸಿ ಧೈರ್ಯ ತುಂಬುತಿ¤ದ್ದಾರೆ. ಫಲ ಮಾತ್ರ ಶೂನ್ಯ. ಜೆಡಿಎಸ್‌ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ನಂಬಿದರೆ, ಕಾಂಗ್ರೆಸ್‌ ಶಾಸಕರು ಅಧಿಕಾರಕ್ಕೆ ಬಂದರೆ ಪುನಶ್ಚೇತನಗೊಳಿಸುವ ಭರವಸೆ ನೀಡುತ್ತಿದ್ದಾರೆ. ಈ ಬಾರಿಯಾದರೂ ಭದ್ರಾವತಿ ಗೆಲ್ಲುವ ಉತ್ಸಾಹ ದಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ನಡೆಸಿ ವಿಐಎಸ್‌ಎಲ್‌ ದುಃಸ್ಥಿತಿಗೆ ನಾವು ಕಾರಣರಲ್ಲ ಎನ್ನುತ್ತಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ನಮ್ಮ ಪಕ್ಷ ಗೆದ್ದರೆ ನಿಮ್ಮ ಶಾಸಕರು ಸಚಿವರಾಗುತ್ತಾರೆ. ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆ ಪುನಶ್ಚೇತನಗೊಳ್ಳುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಭದ್ರಾವತಿ ಜನ ಪುನಶ್ಚೇತನ ಪದ ಇನ್ನೆಷ್ಟು ದಿನ ಕೇಳಿಸಿಕೊಳ್ಳಬೇಕೋ ತಿಳಿದಿಲ್ಲ.

-ಶರತ್‌ ಭದ್ರಾವತಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next