ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಕಳೆದ ವಾರದಿಂದ ಒಳ ಹರಿವಿನ ಪ್ರಮಾಣ ಹೆಚ್ಚಿಗೆಯಾಗುತ್ತಿದ್ದು, ಈ ಸೊಬಗು ನೋಡಲು ಪ್ರವಾಸಿಗರು ದೌಡಾಯಿಸುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ತುಂಗಭದ್ರಾ ಜಲಾಶಯ ಭರ್ತಿಯಾಗದೆ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರನ್ನು ಆಂತಕಕ್ಕೆ ಒಳಗಾಗುವಂತೆ ಮಾಡಿತ್ತು. ಈ ಬಾರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಭಾರೀ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಈ ವಾರದಲ್ಲಿ 20 ಟಿಎಂಸಿ ನೀರು ಹರಿದು ಬಂದಿದೆ.
ಕಳೆದ 2017ರ ಜೂ.18ಕ್ಕೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಾಮರ್ಥಯ 0.95 ಟಿಎಂಸಿ ಇದ್ದರೆ, 2018ರ ಜೂ.18ಕ್ಕೆ ಜಲಾಶಯದಲ್ಲಿ 22.88 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಿಂದ ಜಲಾಶಯ ವ್ಯಾಪ್ತಿಯ ರೈತರಲ್ಲಿ ಮಂದಹಾಸ ಮೂಡಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಇದೇ ರೀತಿ ಎಡಬಿಡದೆ ಮಳೆಯಾದರೆ ಜೂನ್ ತಿಂಗಳ ಅಂತ್ಯಕ್ಕೆ ತುಂಗಭದ್ರಾ ಜಲಾಶಯ ಭರ್ತಿಯಾಗುವ ಎಲ್ಲ ಲಕ್ಷಣಗಳಿವೆ. ತುಂಗಭದ್ರಾ ಜಲಾಶಯದ ಇಂದು 1602.47 ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 32,707 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಕೇವಲ 160 ಕ್ಯೂಸೆಕ್ ನೀರನ್ನು ಮಾತ್ರ ಹೊರ ಬಿಡಲಾಗುತ್ತಿದೆ. ಜಲಾಶಯದಲ್ಲಿ ಒಟ್ಟು 22.88 ಟಿಎಂಸಿ ನೀರು ಸಂಗ್ರಹವಾಗಿದೆ.
ಹರಿದು ಬಂದ ಜನಸಾಗರ: ತುಂಗಭದ್ರಾ ಜಲಾಶಯ ನೋಡಲು ಶನಿವಾರ ಮತ್ತು ಭಾನುವಾರ ಜನಸಾಗರವೇ ಹರಿದು ಬಂದಿತ್ತು. ಸೋಮವಾರವೂ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಜಲಾಶಯ ಸುತ್ತಮುತ್ತಲಿನ ಪ್ರದೇಶ ಹರಿಸಿನಿಂದ ಕಂಗೊಳಿಸುತ್ತಿದೆ.