ವಿಜಯಪುರ: ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ಅರ್ಜುನ ನೇದಲಗಿ ದಿಢೀರ್ ಭೇಟಿ ನೀಡಿ ಬಿಸಿಯೂಟ ಸೌಲಭ್ಯ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ಮಕ್ಕಳ ಆರೋಗ್ಯದ ಕಡೆಗೂ ಶಿಕ್ಷಕರು ಗಮನ ನೀಡಬೇಕೆಂದು ಹೇಳಿದರು. ಶಾಲೆಯಲ್ಲಿ ವಿದ್ಯಾರ್ಥಿನಿಯರ ಜೊತೆಗೂಡಿ ತಾವೆ ಸ್ವತಃ ಊಟ ಮಾಡುವುದರ ಮೂಲಕ ಅಡುಗೆ ಗುಣಮಟ್ಟ ಪರಿಶೀಲಿಸಿದರು.
ಶಾಲಾ ಮಕ್ಕಳ ಜೊತೆಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮೂಲ ಸೌಲಭ್ಯ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಿದರು. ಶಾಲೆಯಲ್ಲಿರುವ ಶಿಕ್ಷಕರ ಹಾಜರಾತಿ ಹಾಗೂ ಶಾಲಾ ಮಕ್ಕಳ ಹಾಜರಾತಿಯನ್ನು ಪರಿಶೀಲಿಸಿದರು. ಮುಂಬರುವಂತಹ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು ಫಲಿತಾಂಶದಲ್ಲಿ ಪ್ರಗತಿ ಕಾಣಬೇಕೆಂದು ಮುಖ್ಯೋಪಾಧ್ಯಾಯರಿಗೆ ಸೂಚಿಸಿದರು.
ಇದಲ್ಲದೇ ಮಕ್ಕಳೊಂದಿಗೆ ಊಟದ ಸಾಲಿನಲ್ಲಿ ಕುಳಿತು ಬಿಸಿಯೂಟ ಸೇವಿಸಿದರು. ಅಲ್ಲದೇ ಶಾಲೆಯ ಅಡುಗೆಯ ಸಿಬ್ಬಂದಿಗೆ ನಿತ್ಯವೂ ಮಕ್ಕಳಗೆ ಶುಚಿ-ರುಚಿ ಅಡುಗೆ ತಯಾರಿಸಿ ಬಡಿಸುವಂತೆ ಸೂಚಿಸಿದರು.
ಮುಖ್ಯೋಪಾಧ್ಯಾಯ ಜಿ.ಕೆ. ಹೊನಖಂಡೆ, ಶಿಕ್ಷಕರಾದ ಎಚ್.ಎಸ್. ತಡಲಗಿ, ಬಿ.ಎಂ. ಅರಳಗುಂಡಗಿ, ಬಿ.ಎಸ್. ದೊಡ್ಡಿ, ಎಸ್.ಬಿ. ಅರಳಯ್ಯ, ಎಸ್.ಬಿ. ದಳವಾಯಿ, ಬಿ.ಎಂ. ವಠಾರ. ಎಸ್.ಎಸ್. ನಾವಿ ಇದ್ದರು.