Advertisement

ಕೆ.ಎಸ್.ಆರ್.ಟಿ.ಸಿ.ಯಿಂದ ಧಾರ್ಮಿಕ, ಪ್ರವಾಸಿ ತಾಣದ ದರ್ಶನ

01:18 PM Nov 08, 2022 | Team Udayavani |

ಉಡುಪಿ: ಕಳೆದ ಕೆಲವು ತಿಂಗಳುಗಳಲ್ಲಿ ವಿಭಿನ್ನ ಪರಿಕಲ್ಪನೆ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದ ಕೆ.ಎಸ್.ಆರ್.ಟಿ.ಸಿ. ಈಗ ಈ ವರ್ಷಾಂತ್ಯಕ್ಕೆ ವಿನೂತನ ಪ್ಯಾಕೇಜ್‌ ಕಲ್ಪಿಸಲು ಮುಂದಾಗಿದೆ.

Advertisement

ಈಗಾಗಲೇ ಕೆ.ಎಸ್.ಆರ್.ಟಿ.ಸಿ.ಯ ಮಂಗಳೂರು ಡಿಪೋದಿಂದ ವರ್ಷಾಂತ್ಯಕ್ಕೆ ಗೋವಾ ಪ್ರವಾಸಕ್ಕೆ ಯೋಜನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಉಡುಪಿಯಲ್ಲಿಯೂ ಬುಕಿಂಗ್‌ ಕಲ್ಪಿಸಲಾಗಿದೆ. ಈ ಬಸ್‌ ಉಡುಪಿ ಡಿಪೋದ ಮೂಲಕವೇ ಹಾದು ಹೋಗುವುದರಿಂದ ಉಡುಪಿಯ ಜನತೆಗೂ ಅನುಕೂಲವಾಗಲಿದೆ.

ಉಡುಪಿಯ ಯೋಜನೆಗಳು

ಆನೆಗುಡ್ಡೆ, ಹಟ್ಟಿಯಂಗಡಿ, ಕಮಲಶಿಲೆ, ಮುರುಡೇಶ್ವರಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ಓಡಿಸುವ ಚಿಂತನೆಯನ್ನು ಹಮ್ಮಿಕೊಂಡಿದೆ. ಇದೇ ರೀತಿ ಡಿಸೆಂಬರ್‌ ತಿಂಗಳಿಗೆ 2ರಿಂದ 3 ಚರ್ಚ್‌ ಹಾಗೂ ಬೀಚ್‌, ಫಾಲ್ಸ್‌ಗಳು ಮತ್ತು 2 ರಿಂದ 3 ಮಸೀದಿ ಹಾಗೂ ಬೀಚ್‌, ಫಾಲ್ಸ್‌ ಗಳಿಗೆ ಪ್ರತ್ಯೇಕ ಬಸ್‌ಗಳು ಸಂಚಾರ ಮಾಡುವ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಚಿಂತನೆ ನಡೆಸುತ್ತಿದೆ.

ದಸರಾ, ದೀಪಾವಳಿ ಯಶಸ್ಸು

Advertisement

ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಮಾಡಿದ್ದ ಪ್ರವಾಸಿ ಪ್ಯಾಕೇಜ್‌ಗೆ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ದಸರಾಕ್ಕೆ ಉಡುಪಿ ಸಿಟಿ ಬಸ್‌ ನಿಲ್ದಾಣದಿಂದ ಆರಂಭಗೊಂಡು ಮೊದಲಿಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನ, ಅಂಬಲಪಾಡಿ ಶ್ರೀ ಮಹಾಕಾಳಿ ದೇವಸ್ಥಾನ, ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ, ಕಾಪು ಶ್ರೀ ಮಾರಿಗುಡಿ ದೇವಸ್ಥಾನ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಕಲ್ಪಿಸಲಾಗಿತ್ತು. ದೀಪಾವಳಿ ಸಂದರ್ಭದಲ್ಲಿಯೂ ಸ್ಥಳೀಯ ದೇವಸ್ಥಾನಗಳು ಸಹಿತ ಶೃಂಗೇರಿ, ಹೊರ್ನಾಡು ಭಾಗಗಳಿಗೆ ಪ್ಯಾಕೇಜ್‌ ಕಲ್ಪಿಸಲಾಗಿತ್ತು. ಈ ಪೈಕಿ ಶೃಂಗೇರಿ ಭಾಗಕ್ಕೆ ವಾರದಲ್ಲಿ 350ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.

ಟೆಂಪಲ್‌ ಟೂರಿಸಂಗೆ ಸ್ಫೂರ್ತಿ: ದಸರಾ, ದೀಪಾವಳಿ ಸಹಿತ ವರ್ಷಾಂತ್ಯದ ವೇಳೆ ಈ ಬಾರಿ ಪ್ರಾಯೋಗಿಕವಾಗಿ ಇಂತಹ ಪ್ಯಾಕೇಜ್‌ಗಳನ್ನು ಆಯೋಜಿಸುವ ಮೂಲಕ ಕೆ.ಎಸ್.ಆರ್.ಟಿ.ಸಿ. ಯಶಸ್ಸು ಕಂಡಿದೆ.

ಇದೇ ರೀತಿ ಮುಂದಿನ ವರ್ಷದಿಂದ ನಿರಂತರವಾಗಿ ಅಥವಾ ವಾರಾಂತ್ಯದ ವೇಳೆಗೆ ಜಿಲ್ಲೆಯ ವಿವಿಧ ದೇವಸ್ಥಾನ, ಪ್ರವಾಸಿ ತಾಣ, ಸಹಿತ ಇತರ ಭಾಗಗಳಿಗೆ ಪ್ಯಾಕೇಜ್‌ಗಳನ್ನು ರೂಪಿಸಿ ಜನರನ್ನು ಸೆಳೆಯುವ ಕಾರ್ಯದಲ್ಲಿ ಕೆ.ಎಸ್.ಆರ್.ಟಿ.ಸಿ. ನಿರತವಾಗಿದೆ. ಇದರಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಯೂ ಹೆಚ್ಚಳವಾಗುತ್ತಿದೆ.

ಸೇವೆ ವಿಸ್ತರಣೆ: ಮಿತದರದಲ್ಲಿ ಜಿಲ್ಲೆಯ ವಿವಿಧ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಜನರಿಗೆ ಪರಿಚಯಿಸುವ ಉದ್ದೇಶವನ್ನು ಕೆ.ಎಸ್.ಆರ್.ಟಿ.ಸಿ. ಇರಿಸಿಕೊಂಡಿದೆ. ಈಗಾಗಲೇ ದಸರಾ ಹಾಗೂ ದೀಪಾವಳಿ ಸಂದರ್ಭ ಮಾಡಿದ ಪ್ಯಾಕೇಜ್‌ಗೆ ಉತ್ತಮ ಸ್ಪಂದನೆ ಕಂಡುಬಂದಿದೆ. ಇದನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಇರಿಸಿಕೊಳ್ಳಲಾಗಿದೆ. -ಶಿವರಾಮ್‌ ನಾಯ್ಕ, ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್‌, ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next