ಬೆಂಗಳೂರು: ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ಮೇಲೆ ನಿಯಂತ್ರಣ ಸಾಧಿಸಲು ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ (ಕೆಪಿಎಂಇ)-2017ಕ್ಕೆ ತಿದ್ದುಪಡಿ ತರಲು ಮುಂದಾಗಿರುವು ರಾಜ್ಯ ಸರ್ಕಾರದ ನಿಲುವು ಬದಲಿಸುವಂತೆ ಆಗ್ರಹಿಸಲು ವೈದ್ಯಕೀಯ ಸಂಘದ ಪದಾಧಿಕಾರಿಗಳು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಖಾಸಗಿ ಆಸ್ಪತ್ರೆ ಹಾಗೂ ವೈದ್ಯರಿಗೆ ಸಂಬಂಧಿಸಿದಂತೆ ಸರ್ಕಾರವೇ ನೇಮಿಸಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಸಮಿತಿ ವರದಿಯನ್ನು ಅನುಷ್ಠಾನ ಮಾಡಬೇಕು. ಕೆಪಿಎಂಇ ತಿದ್ದುಪಡಿ ವಿಧೇಯಕ ಜಾರಿ ಮಾಡಬಾರದು ಎಂಬ ಅಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದೇವೆ ಎಂದು ಸಂಘದ ಗೌರವ ರಾಜ್ಯ ಕಾರ್ಯದರ್ಶಿ ಡಾ.ಬಿ.ವೀರಣ್ಣ ತಿಳಿಸಿದ್ದಾರೆ.
ತಿದ್ದುಪಡಿ ವಿಧೇಯಕ ಕೈ ಬಿಡದೇ ಇದ್ದರೆ ಸಂಘದಿಂದ ಮಾಡುವ ಹೋರಾಟದ ಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ನೀಡಲಿದ್ದೇವೆ. ಎಲ್ಲಾ ಜಿಲ್ಲೆಗಳಿಂದಲೂ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದೇವೆ. ಸದನದಲ್ಲಿ ಈ ಕಾಯ್ದೆ ಮಂಡನೆಯ ದಿನ ಕಾಂಗ್ರೆಸ್ ಸದಸ್ಯರು ಗೈರಾಗುವಂತೆ ಮತ್ತು ಬಿಜೆಪಿ, ಜೆಡಿಎಸ್ ಸದಸ್ಯರಿಗೆ ಕಡ್ಡಾಯ ಹಾಜರಾಗುವಂತೆ ಒತ್ತಡ ಹೇರುವಂತೆ ಸಂಘದ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಅವರು ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ.
ನ.13ರಂದು ಬೆಳಗಾವಿ ಚಲೋ ಇರುವುದರಿಂದ ಈಗಾಗಲೇ ದಾಖಲಾಗಿರುವ ಒಳರೋಗಿಗಳನ್ನು ನ.12ರೊಳಗೆ ಡಿಸಾcರ್ಜ್ ಮಾಡುವುದು, ಒಂದು ವೇಳೆ ಡಿಸಾcರ್ಜ್ ಸಾಧ್ಯವಾಗದೇ ಇದ್ದಾಗ ಐಸಿಯುನಲ್ಲಿರುವ ರೋಗಿಗೆ ಚಿಕಿತ್ಸೆ ನೀಡುವ ಬಗ್ಗೆ ನಿಮ್ಮ ಶಾಖೆಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಏನೇ ಆಗಲೀ, ಬೆಳಗಾವಿಯಲ್ಲಿ ನಿಮ್ಮ ಉಪಸ್ಥಿತಿ ಇರಲೇ ಬೇಕು ಎಂಬ ಸಂದೇಶವನ್ನು ವೈದ್ಯರಿಗೆ ಸಂಘದಿಂದ ರವಾನಿಸಲಾಗಿದೆ.
ಖಾಸಗಿ ವೈದ್ಯರು ಕೆಪಿಎಂಇ ಕಾಯ್ದೆ ವಿರೋಧಿಸುತ್ತಿಲ್ಲ. ಬದಲಾಗಿ ವೈದ್ಯರಿಗೆ ಮಾರಕವಾಗಿರುವ ತಿದ್ದುಪಡಿಯನ್ನು ವಿರೋಧಿಸುತ್ತಿದ್ದೇವೆ. ಆದರೆ, ಆರೋಗ್ಯ ಸಚಿವ ರಮೇಶ್ ಕುಮಾರ್ ಈ ಸಂಬಂಧ ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕಳೆದ 9 ತಿಂಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಆರೋಗ್ಯ ಸಚಿವರ ಹಠಮಾರಿ ಧೋರಣೆಯಿಂದ ಖಾಸಗಿ ವೈದ್ಯರು ಮುಷ್ಕರ ಮಾಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.