Advertisement

ಕಲಘಟಗಿ ಅರಣ್ಯದಲ್ಲಿ ಮತ್ತೆ ಗಜಪಡೆ ಪ್ರತ್ಯಕ್ಷ

11:09 AM Jan 11, 2019 | Team Udayavani |

ಕಲಘಟಗಿ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಎರೇಬೈಲ್‌ ಅರಣ್ಯ ಪ್ರದೇಶದಿಂದ ಆಗಮಿಸಿರುವ ಆನೆಗಳ ತಂಡ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳಿಗೂ ಹೆಚ್ಚಿನ ಕಾಲದಿಂದ ಕಾಯಂ ಠಿಕಾಣಿ ಹೂಡಿರುವುದು ಅರಣ್ಯ ಇಲಾಖೆಯವರಿಗೆ ಮತ್ತು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಹಗಲಿನ ಹೊತ್ತು ಅರಣ್ಯ ಪ್ರದೇಶದಲ್ಲಿಯೇ ಕಳೆದು ರಾತ್ರಿ ಹೊತ್ತು ಜಮೀನುಗಳಿಗೆ ನುಗ್ಗುತ್ತಿವೆ. ಪ್ರಸ್ತುತ ಅರಣ್ಯದಂಚಿನ ಗದ್ದೆಗಳ ಭತ್ತದ ಬೆಳೆಯನ್ನು ರೈತರು ತೆಗೆದು ಸಾಗಹಾಕಿದ್ದಾರೆ. ಅಲ್ಲದೇ ಅರಣ್ಯದಂಚಿನ ಸಂಗಟಿಕೊಪ್ಪ ಮತ್ತು ಹುಲಗಿನಕೊಪ್ಪ ಭಾಗಗಳಲ್ಲಿನ ಬಹುತೇಕ ಕಬ್ಬಿನ ಪೈರನ್ನೂ ಕಟಾವು ಮಾಡಿ ಸಾಗಿಸಲಾಗಿದೆ. ಆದರೆ ಕೆರೆವಾಡ ಭಾಗದ ಜಮೀನುಗಳಲ್ಲಿ ಕಬ್ಬನ್ನು ತಕ್ಷಣ ಕಟಾವು ಮಾಡಬೇಕಿದೆ. ಆ ಕಬ್ಬನ್ನೂ ಸಾಗಹಾಕಿದ ಮೇಲೆ ಆಹಾರಕ್ಕಾಗಿ ಕಾಡಾನೆಗಳು ಗ್ರಾಮದತ್ತ ಬಂದರೆ? ಎಂಬ ಆತಂಕ ಕಾಡುತ್ತಿದೆ. ಗ್ರಾಮದತ್ತ ಆನೆಗಳು ಬಾರದಂತೆ ತಡೆಯಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕೆಲ ಗ್ರಾಮಸ್ಥರು ಪಾಳಿಯ ಪ್ರಕಾರ ಅಲ್ಲಲ್ಲಿ ಬೆಂಕಿ ಹಾಕಿಕೊಂಡು ಹಗಲು-ರಾತ್ರಿ ಗಸ್ತು ತಿರುಗುತ್ತಲೇ ಇದ್ದಾರೆ.

ಮರಳಿ ಮತ್ತೆ ಇಲ್ಲಿಗೆ: 14 ಆನೆಗಳ ತಂಡ ನವೆಂಬರ್‌ ಕೊನೆಯ ವಾರದಲ್ಲಿಯೇ ಪ್ರತ್ಯಕ್ಷಗೊಂಡು ಭಯ ಸೃಷ್ಟಿಸಿತ್ತು. ಹೊಲ-ಗದ್ದೆಗಳಿಗು ದಾಂಗುಡಿ ಇಟ್ಟು ಬೆಳೆಹಾನಿ ಉಂಟು ಮಾಡಿದ್ದವು. ಕೆಲ ದಿನಗಳ ಕಾಲ ಪ್ರತಿದಿನ ಮುಸ್ಸಂಜೆ ಸಮಯದಲ್ಲಿ ಜಮೀನುಗಳ ಸನಿಹದ ಕೆರೆಯಂಗಳದಲ್ಲಿ ಕಂಡುಬರುತ್ತಿದ್ದವು. ಡಿ. 22 ಮತ್ತು 23ರಂದು ಅಹೋರಾತ್ರಿ ಗಜಪಡೆಯನ್ನು ಆನೆ ಕಾರಿಡಾರ್‌ಗೆ ಸಾಗ ಹಾಕುವ ಕಾರ್ಯಾಚರಣೆಯೂ ನಡೆದಿತ್ತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ ಮಾರ್ಗದರ್ಶನದಲ್ಲಿ ಜಿಲ್ಲೆಯ ಹಾಗೂ ಸುತ್ತಮುತ್ತಲ ಜಿಲ್ಲೆಯ ಇಲಾಖಾ ಪರಿಣಿತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದರು. ಗಜಪಡೆಯು ಶಿಕಾರಿಪುರ-ಮುಂಡಗೋಡ ದಿಕ್ಕಿನಿಂದ ಬಂದಿದ್ದು ಅವುಗಳನ್ನು ಉತ್ತರ ಕನ್ನಡ ಜಿಲ್ಲೆಯ ತಟ್ಟಿಹಳ್ಳ ಡ್ಯಾಂನ ಆನೆಗಳ ಕಾರಿಡಾರ್‌ ಪ್ರದೇಶಕ್ಕೆ ಸಾಗ ಹಾಕಬೇಕಿತ್ತು. ಆದರೆ ತಿರುಗಿ ಮುಂಡಗೋಡದತ್ತಲೇ ಸಾಗ ಹಾಕಿದ್ದರಿಂದ ಗಜಪಡೆ ತಿರುಗಿ ತಾಲೂಕಿನ ಅರಣ್ಯ ಪ್ರದೇಶದಲ್ಲಿಯೇ ಮತ್ತೆ ಈಗ ಠಿಕಾಣಿ ಹೂಡಿವೆ. ಪ್ರಸ್ತುತ 14 ಆನೆಗಳ ಪಡೆಯಲ್ಲಿ ಕೇವಲ 9 ಆನೆಗಳು ಮಾತ್ರ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಗೋಚರವಾಗಿವೆ. ಬೇರ್ಪಟ್ಟಿರುವ 5 ಆನೆಗಳು ಎತ್ತ ಹೋಗಿರಬಹುದೆಂದು ತಿಳಿದು ಬಂದಿಲ್ಲ.

ಕಾಡಾನೆಗಳಿಂದ ಪ್ರತಿ ವರ್ಷವೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಜಿಲ್ಲಾಡಳಿತ ಶಾಶ್ವತ ಪರಿಹಾರ ರೂಪಿಸಲು ಮುಂದಾಗಬೇಕಿದೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ವಿದ್ಯುತ್‌ ಕಂಬಗಳನ್ನು ಆನೆಗಳು ಬೀಳಿಸಿದಲ್ಲಿ ವಿದ್ಯುತ್‌ ಅವಘಡ ಸಂಭವಿಸುವುದು ಖಚಿತ. ಕುಡಿಯುವ ಹಾಗೂ ಜಮೀನುಗಳಿಗೆ ನೀರು ಸರಬರಾಜು ಮಾಡುವ ಕೊಳವೆ ಬಾವಿ ಮತ್ತು ಪೈಪ್‌ಲೆನ್‌ಗಳನ್ನು ಹಾಳು ಮಾಡುವ ಸಂಭವಗಳೂ ಇದೆ. ಕಳೆದ ಹಲವು ವರ್ಷಗಳಿಂದ ಕಾಡಾನೆಗಳು ಜಮೀನಿಗೆ ಬಾರದಂತೆ ಕಂದಕಗಳನ್ನು ನಿರ್ಮಿಸಬೇಕೆಂಬ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಧೂಳು ತಿನ್ನುತ್ತಿದೆ. ಅದನ್ನು ತಕ್ಷಣ ನಿರ್ಮಿಸಬೇಕು. ಅಡವಿಯಂಚಿನ ಜಮೀನಿನಲ್ಲಿ ವಾಸಿಸುತ್ತಿರುವವರಿಗಾಗಿ ಶಾಶ್ವತ ಕಾರ್ಯಯೋಜನೆಗೆ ಬೇಡಿಕೆ ವ್ಯಕ್ತವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next