Advertisement

ಬೆಳಗಾವಿ ಅಧಿವೇಶನ; ಮಾಹಿತಿ ನೀಡದೆ ಹಲವರು ಗೈರು: ಕಾಗೇರಿ ಮಾಹಿತಿ

03:23 PM Dec 30, 2022 | Team Udayavani |

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 12 ವಿಧೇಯಕಗಳನ್ನು ಮಂಡಿಸಲಾಗಿದ್ದು, ಒಂಬತ್ತು ವಿಧೇಯಕಗಳನ್ನು ಅಂಗೀಕರಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು ಒಂಬತ್ತು ದಿನಗಳ ಅಧಿವೇಶನದಲ್ಲಿ ಸುಮಾರು 41 ಗಂಟೆ 20 ನಿಮಿಷಗಳ ಕಾಲ ಕಲಾಪ ನಡೆದಿದೆ ಎಂದರು.

ಅಧಿವೇಶನದಲ್ಲಿ ಶಾಸಕರ ಹಾಜರಾತಿ ತೃಪ್ತಿತಂದಿಲ್ಲ. ಒಟ್ಟು ಪ್ರತಿಶತ 75 ರಷ್ಟು ಹಾಜರಾತಿ ಇತ್ತು. ಇದು ಸರಿಯಾದ ಬೆಳವಣಿಗೆ ಅಲ್ಲ. ದಿನೇಶ ಗುಂಡೂರಾವ್ ಹರೀಶ್ ಪೂಂಜಾ, ಕೃಷ್ಣಪ್ಪ, ಜಮೀರ ಅಹ್ಮದ್ ಹಾಗೂ ಅನಿತಾ ಕುಮಾರಸ್ವಾಮಿ ಸೇರಿದಂತೆ ಒಂಬತ್ತು ಶಾಸಕರು ಅನುಮತಿ ಪಡೆಯದೆ ಸದನಕ್ಕೆ ಗೈರಾಗಿದ್ದರು ಎಂದು ಕಾಗೇರಿ ಹೇಳಿದರು.

ಕಲಾಪದಲ್ಲಿ ಒಟ್ಟು 2125 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು ಸದನದಲ್ಲಿ ಉತ್ತರಿಸಬೇಕಿದ್ದ 150 ಪ್ರಶ್ನೆಗಳ ಪೈಕಿ 146 ಪ್ರಶ್ನೆಗಳಿಗೆ ಮತ್ತು ಲಿಖಿತ ಮೂಲಕ ಉತ್ತರಿಸುವ 1923 ಪ್ರಶ್ನೆಗಳ ಪೈಕಿ 1614 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನಸೆಳೆಯುವ 289 ಸೂಚನೆಗಳ ಪೈಕಿ 85 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಟಿಸಿರುವ ಗಡಿ ವಿವಾದವನ್ನು ಖಂಡಿಸಿ ರಾಜ್ಯದ ಹಿತರಕ್ಷಣೆ ಗೆ ಕಟಿಬದ್ಧರಾಗಿರುವದಾಗಿ ಸದನವು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದರು.

Advertisement

ಮುಖ್ಯವಾಗಿ ಸದನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕಿತ್ತು. ಇದು ಎಲ್ಲರ ನಿರೀಕ್ಷೆ. ಹೆಚ್ಚಿನ ಕಾಲಾವಕಾಶ ಸಿಗದಿದ್ದರೂ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ವಿಶೇಷ ಚರ್ಚೆ ನಡೆಸಲಾಗಿದೆ. ಮುಂದಿನ ಅಧಿವೇಶನದಲ್ಲಿ ಮೊದಲ ವಾರದ ಕಲಾಪದಲ್ಲೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದರು.

ಈ ಬಾರಿಯ ಅಧಿವೇಶನ ದಾಖಲೆಯ ವೀಕ್ಷಕರ ಸಂಖ್ಯೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಅಧಿವೇಶನವನ್ನು 15000 ಜನರು ವೀಕ್ಷಿಸಿದ್ದರು. ಆದರೆ ಬೆಳಗಾವಿ ಅಧಿವೇಶನವನ್ನು 20 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇದೊಂದು ದಾಖಲೆಯಾಗಿದೆ ಎಂದು ಕಾಗೇರಿ ಅವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next